ಮುಸ್ಲಿಂ ವಿರೋಧಿ ವಿಷಯವುಳ್ಳ ಟ್ವೀಟ್‌ಗಳು ಭಾರತದಲ್ಲಿಯೇ ಹೆಚ್ಚು: ಐಸಿವಿ ವರದಿ

  • ಭಾರತದಲ್ಲಿ ಪೋಸ್ಟ್‌ ಆದ ಇಸ್ಲಾಮೋಫೋಬಿಕ್‌ ಟ್ವೀಟ್‌ಗಳ ಸಂಖ್ಯೆ 8,71,379
  • ಮುಸ್ಲಿಂ ವಿರೋಧಿ ದ್ವೇಷವು ʻಸಾಂಕ್ರಾಮಿಕದಂತೆ ಹರಡಿದೆʼ: ವಿಶ್ವಸಂಸ್ಥೆ

ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲೊಂದಾದ ಟ್ವಿಟರ್‌ನಲ್ಲಿ ಜಗತ್ತಿನ ಶೇ. 86ರಷ್ಟು ಮುಸ್ಲಿಂ ವಿರೋಧಿ ಪೋಸ್ಟ್‌ಗಳು ಭಾರತ, ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ರಚನೆಯಾಗಿವೆ ಎಂದು ಆಸ್ಟ್ರೇಲಿಯಾ ಮೂಲದ ಇಸ್ಲಾಮಿಕ್‌ ಕೌನ್ಸಿಲ್‌ ಆಫ್‌ ವಿಕ್ಟೋರಿಯಾ (ಐಸಿವಿ) ವರದಿಯು ಬಹಿರಂಗಪಡಿಸಿದೆ.

ಭಾರತ, ಅಮೆರಿಕ ಹಾಗೂ ಇಂಗ್ಲೆಂಡ್‌ನಲ್ಲಿ ಅತಿಹೆಚ್ಚು ಮುಸ್ಲಿಂ ವಿರೋಧಿ ಪೋಸ್ಟ್‌ಗಳನ್ನು ಸೃಷ್ಟಿಸಲಾಗಿದೆ ಎಂಬುದು ವರದಿಯಿಂದ ತಿಳಿದುಬಂದಿದೆ. 2019-2021 (2019ರ ಆಗಸ್ಟ್‌ 28 ರಿಂದ 2021ರ ಆಗಸ್ಟ್‌ 27) ಈ ಎರಡು ವರ್ಷಗಳ ಅವಧಿಯಲ್ಲಿ ಟ್ವಿಟರ್‌ನಲ್ಲಿ ಕನಿಷ್ಠ 37,59,180 ಇಸ್ಲಾಮೋಫೋಬಿಕ್ ಪೋಸ್ಟ್‌ಗಳನ್ನು ರಚಿಸಲಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಸ್ಲಾಮೋಫೋಬಿಕ್‌ ಟ್ವೀಟ್‌ಗಳನ್ನು ಪೋಸ್ಟ್‌ ಮಾಡಲಾಗಿದೆ ಎಂಬುದು ವರದಿಯಿಂದ ಬಹಿರಂಗಗೊಂಡಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 8,71,379 ಇಸ್ಲಾಮೋಫೋಬಿಕ್ ಟ್ವೀಟ್‌ಗಳು ಭಾರತದಲ್ಲಿ ಪೋಸ್ಟ್‌ ಆಗಿವೆ. ಇದೇ ಸಮಯದಲ್ಲಿ ಅಮೆರಿಕದಲ್ಲಿ ಸುಮಾರು 2,89,248 ಹಾಗೂ ಇಂಗ್ಲೆಂಡ್‌ನಲ್ಲಿ 1,96,376 ಇಸ್ಲಾಮೋಫೋಬಿಕ್‌ ಟ್ವೀಟ್‌ಗಳು ಪೋಸ್ಟ್‌ ಮಾಡಲಾಗಿವೆ ಎಂಬುದನ್ನು ಐಸಿವಿ ಸಂಶೋಧಕರು ವಿಶ್ಲೇಷಿಸಿದ್ದಾರೆ.

ಇಸ್ಲಾಮೋಫೋಬಿಯಾಕ್ಕೆ ಸಂಬಂಧಿಸಿದಂತೆ ಪೋಸ್ಟ್‌ ಮಾಡಲಾದ ವಿಷಯಗಳಲ್ಲಿ ನಾಲ್ಕು ಪ್ರಮುಖ ವಿಷಯಗಳಲ್ಲಿ ʻಹಲಾಲ್‌ ಕಟ್‌ʼ ಕೂಡ ಒಂದಾಗಿದೆ.

ʻಇಸ್ಲಾಂ ಮತ್ತು ಭಯೋತ್ಪಾದನೆಯ ನಡುವಿನ ಸಂಪರ್ಕʼ, ʻಮುಸ್ಲಿಮರೆಂದರೆ ಲೈಂಗಿಕ ದೌರ್ಜನ್ಯ ಎಸಗುವರಂತೆ ಚಿತ್ರಿಸುವುದುʼ, ಮುಸ್ಲಿಂ ವಲಸಿಗರು ʻಪಶ್ಚಿಮದಲ್ಲಿ ಬಿಳಿಯರನ್ನು ಮತ್ತು ಭಾರತದಲ್ಲಿ ಹಿಂದೂಗಳನ್ನು ಸ್ಥಳಾಂತರಿಸುತ್ತಿದ್ದಾರೆʼ ಎಂಬ ಸುಳ್ಳು ಹೇಳಿಕೆಗಳು ಹಾಗೂ ʻಹಲಾಲ್ ಕಟ್‌ʼ ಒಂದು ಅಮಾನವೀಯ ಆಚರಣೆ ಎಂದು ಗುರುತಿಸುವುದು; ಈ ನಾಲ್ಕು ಅಂಶಗಳ ಮೇಲೆ ಅತಿ ಹೆಚ್ಚು ಇಸ್ಲಾಮೋಫೋಬಿಯಾ ಟ್ವೀಟ್‌ಗಳು ಪೋಸ್ಟ್‌ ಆಗಿವೆ.

ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ಕೊಳಗೇರಿಗಳಲ್ಲಿ ವಾಸವಿರುವ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ: ಶಾಸಕ ತಿಪ್ಪಾರೆಡ್ಡಿ

ʻʻಮುಸ್ಲಿಂ ವಿರೋಧಿ ದ್ವೇಷವು ʻಸಾಂಕ್ರಾಮಿಕದಂತೆ ಹರಡಿದೆʼ ಎಂದು ಎಚ್ಚರಿಸಿದ್ದ ವಿಶ್ವಸಂಸ್ಥೆಯು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಧಾರ್ಮಿಕ ದ್ವೇಷದ ಸಮರ್ಥನೆಯನ್ನು ನಿಷೇಧಿಸಿತ್ತು. ಅದರಂತೆ, ಮುಸ್ಲಿಮರ ವಿರುದ್ಧ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ 2021ರಲ್ಲಿ, ʻಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆʼ ವಿಶ್ವಸಂಸ್ಥೆಯು ಆದೇಶಿಸಿತ್ತು. ಆದರೆ, ಈವರೆಗೆ ಟ್ವಿಟರ್‌, ತಮ್ಮ ವೇದಿಕೆಯಲ್ಲಿ ಮುಸ್ಲಿಂ ವಿರೋಧಿ ಪೋಸ್ಟ್‌ಗಳನ್ನು ನಿಯಂತ್ರಿಸುವ ಹಾಗೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಯಾವ ಕ್ರಮವನ್ನು ತೆಗೆದುಕೊಂಡಿಲ್ಲʼʼ ಎಂದು ಟಿಆರ್‌ಟಿ ವರ್ಲ್ಡ್‌ ವರದಿ ಮಾಡಿದೆ.

"ಟ್ವಿಟರ್‌ ಕಂಪನಿಯು ದ್ವೇಷದ ಪೋಸ್ಟ್‌ಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವುದಿಲ್ಲ. ಬದಲಿಗೆ ಅಂತಹ ಪೋಸ್ಟ್‌ಗಳನ್ನು ರಿಪೋರ್ಟ್‌ ಮಾಡಿದ ನಂತರವಷ್ಟೇ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಹೀಗಿದ್ದರೂ, ಪ್ರಾಯೋಗಿಕವಾಗಿ, ಇಸ್ಲಾಮೋಫೋಬಿಯಾಕ್ಕೆ ಸಂಬಂಧಿಸಿದ ಕಂಟೆಂಟ್‌ ಹೊಂದಿರುವ ಪೋಸ್ಟ್‌ಗಳನ್ನು ರಿಪೋರ್ಟ್‌ ಮಾಡಿದಾಗಲೂ ಕೇವಲ ಶೇ. 3ರಷ್ಟನ್ನು ಮಾತ್ರ ತೆಗೆದುಹಾಕಲಾಗಿದೆ" ಎಂದು ವರದಿಯು ತಿಳಿಸಿದೆ.

"ಇಂತಹ ಇಸ್ಲಾಮೋಫೋಬಿಯಾ ವಿಷಯವಸ್ತು ಹೊಂದಿರುವ ಪೋಸ್ಟ್‌ಗಳನ್ನು ತೆಗೆದುಹಾಕುವಲ್ಲಿ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸದೇ ಇದ್ದಲ್ಲಿ, ಆನ್‌ಲೈನ್‌ನಲ್ಲಿ ಇಸ್ಲಾಮೋಫೋಬಿಯಾದ ಸಮಸ್ಯೆಯು ಅಸ್ಥಿರತೆಯ ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಹೆಚ್ಚು" ಎಂದು ವರದಿ ಹೇಳಿದೆ.

ಇಸ್ಲಾಮೋಫೋಬಿಯಾ ಟ್ವೀಟ್‌ಗಳನ್ನು ಸರಿಯಾಗಿ ಪರಿಶೀಲನೆ ಮಾಡದಿರುವ ನೀತಿಯನ್ನು ಟ್ವಿಟರ್‌ ಕೊನೆಗೊಳಿಸಬೇಕು. ದ್ವೇಷಪೂರಿತ ವಿಷಯವಸ್ತು ಇರುವಂತಹ ಪೋಸ್ಟ್‌ಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಿ ತೆಗೆದುಹಾಕಬೇಕು ಎಂದು ಐಸಿವಿ ಸೂಚಿಸುತ್ತದೆ. ಟ್ವಿಟರ್‌ನ ಹೊಸ ನೀತಿಗಳ ಪರಿಣಾಮದ ಕುರಿತು ಮೌಲ್ಯಮಾಪನ ಮಾಡಲು ʻಸ್ವತಂತ್ರ ಮೇಲ್ವಿಚಾರಣಾ ಸಂಸ್ಥೆʼಯನ್ನು ಸ್ಥಾಪಿಸುವಂತೆ ಈ ಅಧ್ಯಯನ ವರದಿಯು ಶಿಫಾರಸು ಮಾಡಿದೆ.

ಇಸ್ಲಾಮೋಫೋಬಿಯಾ ಎಂದರೆ ಇಸ್ಲಾಂ ಧರ್ಮ ಅಥವಾ ಸಾಮಾನ್ಯವಾಗಿ ಮುಸ್ಲಿಮರ ವಿರುದ್ಧ ಭಯ ಸೃಷ್ಟಿಸುವುದಾಗಿದೆ. ಆ ಸಮುದಾಯದ ಮೇಲಿನ ದ್ವೇಷ ಮತ್ತು ಪೂರ್ವಾಗ್ರಹದಿಂದಾಗಿ ಯಾರೇ ಒಬ್ಬ ವ್ಯಕ್ತಿ ಅಥವಾ ಒಂದು ಮುಸ್ಲಿಂ ಸಂಸ್ಥೆ ತಪ್ಪೆಸೆಗಿದರೆ ಇಡೀ ಸಮುದಾಯದಕ್ಕೆ ಅದನ್ನು ಹೊಣೆ ಮಾಡಿ ದೂಷಿಸುವುದಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್