
- ಚೆನ್ನೈನ ಗೋವಿಂದಸಾಮಿ ನಗರದಲ್ಲಿ ನಡೆದ ಘಟನೆ
- ಸುಪ್ರೀಂ ಕೋರ್ಟ್ ಆದೇಶದಂತೆ ಅಧಿಕಾರಿಗಳಿಂದ ತೆರವು ಕೆಲಸ
ಕಾಲುವೆಗೆ ಹತ್ತಿರವಿದ್ದ ನಿವೇಶನಗಳನ್ನು ತೆರವು ಮಾಡಲು ಬಂದ ಅಧಿಕಾರಿಗಳ ಎದುರಲ್ಲೇ ವ್ಯಕ್ತಿಯೊಬ್ಬರು ಪ್ರತಿಭಟಿಸಿ, ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನ ಗೋವಿಂದಸಾಮಿ ನಗರದಲ್ಲಿ ನಡೆದಿದೆ.
ಗೋವಿಂದಸಾಮಿ ನಗರದ ಕನ್ನಯ್ಯನ್ (60) ಆತ್ಮಹತ್ಯೆ ಮಾಡಿಕೊಂಡವರು.
ಜಲ ಸಂಪನ್ಮೂಲ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದಂತೆ ಬಕಿಂಗ್ಹ್ಯಾಮ್ ಕಾಲುವೆಯ ಹತ್ತಿರವಿದ್ದ ನಿವೇಶನಗಳನ್ನು ತೆರವು ಮಾಡಲು ಬಂದಿದ್ದರು. ಏಪ್ರಿಲ್ 28 ರಂದು ಒತ್ತುವರಿ ಕೆಲಸ ಪ್ರಾರಂಭಿಸುವಾಗ ಸ್ಥಳೀಯ ನಿವಾಸಿಗಳ ಒಪ್ಪಿಗೆ ಪಡೆದುಕೊಂಡಿದ್ದರು. ಸ್ಥಳೀಯರು ತೆರವು ಕೆಲಸಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದರು ಎಂದು ವರದಿಯಾಗಿದೆ.
“ಸೋಮವಾರ ಸುಪ್ರೀಂ ಕೋರ್ಟ್ ತೆರವು ಕಾರ್ಯದ ವಿಚಾರವಾಗಿ ತಮ್ಮ ಅಹವಾಲು ಕೇಳುವ ನಿರೀಕ್ಷೆ ಇದೆ. ನಮಗೆ ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಕನ್ನಯ್ಯನ್ ಅಂಗಲಾಚಿದರು. ಅಧಿಕಾರಿಗಳು ದರ್ಪದಿಂದ ತೆರವು ಕೆಲಸ ಮುಂದುವರಿಸಿದರು. ಇದರಿಂದ ಬೇಸತ್ತು ಅಧಿಕಾರಿಗಳ ಎದುರಲ್ಲೇ ಮೈಗೆ ಬೆಂಕಿ ಹಚ್ಚಿಕೊಂಡರು " ಎಂದು ಸ್ಥಳೀಯರು ಹೇಳಿದ್ದಾರೆ.
ಕನ್ನಯ್ಯನ್ ಅವರ ಸುಟ್ಟ ಸ್ಥಿತಿಯಲ್ಲಿದ್ದಾಗಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಇದರಿಂದಾಗಿ ತೆರವು ಕಾರ್ಯವನ್ನು ಅಧಿಕಾರಿಗಳು ಅರ್ಧಕ್ಕೆ ನಿಲ್ಲಿಸಿ ತೆರಳಿದರು.
ಈ ಸುದ್ದಿ ಓದಿದ್ದೀರಾ? ರಾಷ್ಟ್ರಪತಿ ಅನುಮೋದನೆಗೆ ಹೋದ ತಮಿಳುನಾಡಿನ ನೀಟ್ ವಿರೋಧಿ ಮಸೂದೆ
ತೆರವು ಕೆಲಸ ಪ್ರಾರಂಭವಾದ ನಂತರ ಅಲ್ಲಿನ ಹಲವಾರು ನಿವಾಸಿಗಳು ರೈಲ್ವೆ ನಿಲ್ದಾಣಗಳಲ್ಲಿ ಉಳಿದುಕೊಂಡು ಬಾಡಿಗೆ ಮನೆ ಹುಡುಕುತ್ತಿದ್ದಾರೆ. ಮುಂದೆ ಪುನರ್ವಸತಿ ಸೈಟ್ಗಳನ್ನು ಅದೇ ಬ್ಲಾಕ್ನಲ್ಲಿ ಕಟ್ಟಲು ತಮಿಳುನಾಡಿನ 'ಅರ್ಬನ್ ಹ್ಯಾಬಿಟೆಟ್ ಡೆವಲಪ್ಮೆಂಟ್ ಬೋರ್ಡ್’ ಗೆ ಮನವಿ ಮಾಡಿದ್ದಾರೆ.
ಗೋವಿಂದಸಾಮಿ ನಗರದ ಬ್ಲಾಕ್ನಲ್ಲಿ ಜಮೀನು ಹೊಂದಿರುವ ಉದ್ಯಮಿ ಒಬ್ಬರು ಸಲ್ಲಿಸಿರುವ ಪ್ರಕರಣದ ಮೇಲೆ ಸುಪ್ರೀಂ ಕೋರ್ಟ್ ತೆರವು ಕಾರ್ಯಾಚರಣೆ ಮಾಡಲು ಆದೇಶಿಸಿದೆ.