100 ಮೀಟರ್‌ ಓಟದಲ್ಲಿ ಚಿನ್ನದ ಪದಕ; 94ರ ಪ್ರಾಯದ ಭಗವಾನಿ ದೇವಿ ಸಾಧನೆ

  • 100 ಮೀಟರ್‌ ಓಟದಲ್ಲಿ 94ರ ಪ್ರಾಯದ ಅಜ್ಜಿಯ ಚಿನ್ನದ ಸಾಧನೆ
  • ಶಾಟ್‌ಪುಟ್‌ನಲ್ಲಿಯೂ ಕಂಚಿನ ಪದಕ ಜಯಿಸಿದ್ದಾರೆ ಭಗವಾನಿ ದೇವಿ

ಭಾರತದ 94 ವರ್ಷದ ಓಟಗಾರ್ತಿ ಭಗವಾನಿ ದೇವಿ ದಾಗರ್‌ ಅವರು ಇತ್ತೀಚೆಗೆ ಫಿನ್‌ಲ್ಯಾಂಡ್‌ನ ಟಂಪೆರೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಭಗವಾನಿ ಅವರು 100 ಮೀಟರ್‌ ಓಟದ ಸ್ಪರ್ಧೆಯಲ್ಲಿ 24.54 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗಳಿಸಿದ್ದಾರೆ. ಹಾಗೆಯೇ ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗಳಿಸಿರುವ 94 ವರ್ಷದ ಅಜ್ಜಿ ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ.

“ಭಾರತದ 94 ವರ್ಷದ ಭಗವಾನಿ ದೇವಿ ಅವರು ಸಾಧನೆಗೆ ವಯಸ್ಸು ಅಡ್ಡಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 100 ಮೀಟರ್‌ ಓಟದಲ್ಲಿ ಚಿನ್ನದ ಪದಕ ಗಳಿಸಿರುವ ಭಗವಾನಿ ಅವರು ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ನಿಜವಾಗಿಯೂ ಇದು ಶ್ಲಾಘನೀಯ ಪ್ರಯತ್ನʼʼ ಎಂದು ಕೇಂದ್ರ ಯುವ ಮತ್ತು ಕ್ರೀಡಾ ಸಚಿವಾಲಯವು ಟ್ವೀಟ್‌ ಮಾಡಿದೆ.

ʻʻಫಿನ್‌ಲ್ಯಾಂಡ್‌ನಲ್ಲಿ ನಡೆದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಚಿನ್ನ ಮತ್ತು ಕಂಚಿನ ಪದಕ ಗಳಿಸಿದ ಭಗವಾನಿ ದೇವಿ ದಾಗರ್‌ ಜೀ ಅವರ ಬಗ್ಗೆ ಹೆಮ್ಮೆ ಎನಿಸುತ್ತಿದೆ. 94ರ ಹರೆಯದಲ್ಲಿ ಎಂತಹ ಸಾಧನೆ!ʼʼ ಎಂದು ಗೋಯಲ್‌ ಟ್ವೀಟ್‌ ಮಾಡಿದ್ದಾರೆ.

ʻʻ94ರ ಹರೆಯದ ಭಗವಾನಿ ಅವರು ಇಡೀ ವಿಶ್ವಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಫಿನ್‌ಲ್ಯಾಂಡ್‌ನ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಸೇರಿದಂತೆ 3 ಪದಕಗಳನ್ನು ಗೆದ್ದ ಭಗವಾನಿ ದೇವಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ಈ ಸಾಧನೆ ಯುವಕರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಲಿದೆʼʼ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಅಜ್ಜಿಯ ಸಾಧನೆಯನ್ನು ಅಭಿನಂದಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರಾಷ್ಟ್ರೀಯ ಶಿಕ್ಷಣ ನೀತಿ | ಮಕ್ಕಳ ಸಹಜ ಜೀವನಶೈಲಿಗೆ ಮೊಟ್ಟೆ ಸೇವನೆ ಸಮಸ್ಯೆ: ತಜ್ಞರ ಶಿಫಾರಸು!

ಅಜ್ಜಿಯ ಸಾಧನೆ ಇದೇ ಮೊದಲನೆಯದಲ್ಲ. ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ದೆಹಲಿ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಗವಾನಿ ಅವರು 100 ಮೀಟರ್‌ ಓಟ, ಶಾಟ್‌ಪುಟ್‌ ಮತ್ತು ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗಳಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್