94 ಯೂಟ್ಯೂಬ್‌ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ದೃಢೀಕರಿಸಿದ ಕೇಂದ್ರ ಸರ್ಕಾರ

  • ಸುಳ್ಳು ಸುದ್ದಿ ಹರಡುತ್ತಿದ್ದ 94 ಯೂಟ್ಯೂಬ್‌ ಚಾನೆಲ್‌ಗಳಿಗೆ ನಿರ್ಬಂಧ
  • ಮಾಹಿತಿ ತಂತ್ರಜ್ಞಾನ ಕಾಯ್ದೆ-2020ರ ಸೆಕ್ಷನ್‌ 69 (ಎ) ಅಡಿ ಕ್ರಮ 

ಕಳೆದ ಒಂದು ವರ್ಷದಲ್ಲಿ 94 ಯೂಟ್ಯೂಬ್‌ ಚಾನೆಲ್‌, 19 ಸಾಮಾಜಿಕ ಜಾಲತಾಣದ ಅಕೌಂಟ್‌ಗಳು ಹಾಗೂ 747 ಯುಆರ್‌ಎಲ್ (ಯುನಿಫಾರ್ಮ್‌ ರಿಸೋರ್ಸ್‌ ಲೊಕೇಟರ್ಸ್) ಲಿಂಕ್‌ಗಳನ್ನು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ  ಕಾರಣ ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್ ಗುರುವಾರ ತಿಳಿಸಿದರು.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಠಾಕೂರ್, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರದ ಮೂಲಕ ದೇಶದ ಸಾರ್ವಭೌಮತೆಗೆ ವಿರುದ್ಧವಾಗಿ ಕೆಲಸ ಮಾಡುವ ಸಂಸ್ಥೆಗಳ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ-2020ರ ಸೆಕ್ಷನ್‌ 69 (ಎ) ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ?: ಕೇಂದ್ರ ಸರ್ಕಾರ ಜಾಹೀರಾತಿಗಾಗಿ ಖರ್ಚು ಮಾಡಿದ್ದು ಬರೋಬ್ಬರಿ 911.17 ಕೋಟಿ ರೂಪಾಯಿ; ಅನುರಾಗ್ ಠಾಕೂರ್

ಕೋವಿಡ್-19 ಸಂಬಂಧಿತ ನಕಲಿ ಸುದ್ದಿಗಳ ಪ್ರಸಾರವನ್ನು ಪರಿಶೀಲಿಸುವ ಸಲುವಾಗಿ, 2020ರ ಮಾರ್ಚ್ 31ರಂದು ಪ್ರೆಸ್ ಬ್ಯೂರೋ ಆಫ್‌ ಇಂಡಿಯಾ (ಪಿಐಬಿ) ಸತ್ಯ ಪರಿಶೀಲನಾ ಘಟಕವನ್ನು ಅನ್ನು ರಚಿಸಿದೆ. ಈ ಘಟಕವು ಸಕ್ರಿಯವಾಗಿದ್ದು, ಈವರೆಗೆ ಸುಮಾರು 34,125 ಕ್ರಿಯಾಶೀಲ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹೊಂದಿದ್ದ 875 ಪೋಸ್ಟ್‌ಗಳನ್ನು ಪಿಐಬಿ ಅಳಿಸಿಹಾಕಿರುವುದಾಗಿ ಅವರು ಮಾಹಿತಿ ನೀಡಿದರು.  

ದೇಶ ವಿರೋಧಿ ಕಾರ್ಯಚಟುವಟಿಕೆ ನಡೆಸುತ್ತಿರುವ ಡಿಜಿಟಲ್ ಚಾನೆಲ್‌ಗಳು, ವೆಬ್‌ತಾಣ ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೇಲಿನ ನಿಯಂತ್ರಣವನ್ನು ಕಳೆದ ಡಿಸೆಂಬರ್‌ನಿಂದ ಆರಂಭಿಸಲಾಯಿತು.ಈ ನಿಬಂಧನೆಗಳ ಅಡಿಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ 20 ಯೂಟ್ಯೂಬ್ ಚಾನೆಲ್‌ಗಳು ಮತ್ತು ಎರಡು ವೆಬ್‌ತಾಣಗಳನ್ನು ನಿರ್ಬಂಧಿಸಲು ಸಚಿವಾಲಯವು ನಿರ್ದೇಶನಗಳನ್ನು ನೀಡಿತು. ಅಂದಿನಿಂದ, ಸಚಿವಾಲಯವು ಡಿಜಿಟಲ್ ಮಾಧ್ಯಮ ಚಾನೆಲ್‌ ಳನ್ನು ಹಂತ ಹಂತವಾಗಿ ನಿರ್ಬಂಧಿಸುತ್ತಿದೆ.

320 ಮೊಬೈಲ್‌ ಅಪ್ಲಿಕೇಶನ್‌ಗಳಿಗೆ ನಿರ್ಬಂಧ

ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಈವರೆಗೆ 320 ಮೊಬೈಲ್‌ ಅಪ್ಲಿಕೇಶನ್‌ಗಳನ್ನು (ಆ್ಯಪ್) ನಿರ್ಬಂಧಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮಪ್ರಕಾಶ್‌ ಅವರು ಕಳೆದ ಮಾರ್ಚ್‌ ತಿಂಗಳಲ್ಲಿ ಹೇಳಿದ್ದರು.

ದೇಶದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಈ ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂದಿದ್ದ ಅವರು, ಈ ಹಿಂದೆ ನಿರ್ಬಂಧಿಸಲಾಗಿದ್ದ ಆ್ಯಪ್‌ಗಳು ಪುನಃ ಸಕ್ರಿಯವಾಗಿರುವುದು ಕಂಡುಬಂದಿದ್ದು, ಅಂತಹ 49 ಆ್ಯಪ್‌ಗಳನ್ನು ಫೆಬ್ರವರಿಯಲ್ಲಿ ಮತ್ತೆ  ನಿಷೇಧಿಸಿರುವುದಾಗಿ ವಿವರಿಸಿದ್ದರು.

ಚೀನಾ ಮೂಲದ ಆ್ಯಪ್‌ಗಳಿಗೂ ನಿರ್ಬಂಧ

ಕಳೆದ ವರ್ಷ ಜೂನ್‌ನಲ್ಲಿ, ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆಯನ್ನು ಉಲ್ಲೇಖಿಸಿ ಭಾರತವು ಟಿಕ್‌ಟಾಕ್, ವೀಚಾಟ್ ಮತ್ತು ಹೆಲೋನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ 59 ಚೀನೀ ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿತ್ತು.

ಚೀನಾದೊಂದಿಗೆ ಗಡಿ ವಿವಾದ ಉದ್ವಿಗ್ನಗೊಂಡ ನಂತರ ಭಾರತವು ಕಳೆದ ಒಂದು ವರ್ಷದಿಂದ ಸುಮಾರು 300 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಪೂರ್ವ ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಜೂನ್ 2020ರಲ್ಲಿ ಮೊದಲ ಸುತ್ತಿನ ನಿಷೇಧವನ್ನು ಘೋಷಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
2 ವೋಟ್