ಶೇ. 98ರಷ್ಟು ಉದ್ಯೋಗದ ಅಸಮಾನತೆಗೆ ಲಿಂಗ ತಾರತಮ್ಯ ಕಾರಣ: ಆಕ್ಸ್‌ಫಾಮ್‌ ವರದಿ

  • ಉದ್ಯೋಗದಲ್ಲಿ ಶೇ. 98ರಷ್ಟು ಅಸಮಾನತೆಗೆ ʻಲಿಂಗ ತಾರತಮ್ಯʼ ಕಾರಣ
  • ಗ್ರಾಮೀಣ ಪ್ರದೇಶದಲ್ಲಿ ಶೇ. 100ರಷ್ಟು ತಾರತಮ್ಯ ಎದುರಿಸುತ್ತಿರುವ ಮಹಿಳೆಯರು

ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಉದ್ಯೋಗದ ಅಸಮಾನತೆಗೆ ʻಲಿಂಗ ತಾರತಮ್ಯʼವೇ ಕಾರಣ ಎಂದು ಆಕ್ಸ್‌ಫಾಮ್‌ ಇಂಡಿಯಾ ವರದಿ ತಿಳಿಸಿದೆ. ಲಿಂಗ ತಾರತಮ್ಯದಿಂದಾಗಿಯೇ ಉದ್ಯೋಗದಲ್ಲಿ ಶೇ. 98ರಷ್ಟು ಅಸಮಾನತೆಯಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ.

ಲಿಂಗಾಧಾರಿತ ತಾರತಮ್ಯವು ಉದ್ಯೋಗದ ಅಸಮಾನತೆಗೆ ಕಾರಣ. ನಗರ ಪ್ರದೇಶಗಳಲ್ಲಿ ಮಹಿಳೆಯರು ಶೇ. 98ರಷ್ಟು ಅಸಮಾನತೆ ಎದುರಿಸುತ್ತಿದ್ದರೆ, ಗ್ರಾಮೀಣ ಪ್ರದೇಶದ ಮಹಿಳೆಯರು ಶೇ. 100 ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಆಕ್ಸ್‌ಫಾಮ್‌ ಇಂಡಿಯಾದ 'ಭಾರತೀಯ ತಾರತಮ್ಯ ವರದಿ 2022' ವಿವರಿಸಿದೆ.

ಭಾರತದಲ್ಲಿ, ಪುರುಷರಂತೆ ಮಹಿಳೆಯರು ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವ ಹೊಂದಿದ್ದರೂ, ಸಾಮಾಜಿಕ ಮತ್ತು ಉದ್ಯೋಗದಾತರ ಪೂರ್ವಗ್ರಹಗಳಿಂದಾಗಿ ಕಾರ್ಮಿಕ ಮಾರುಕಟ್ಟೆಯಲ್ಲಿ ತಾರತಮ್ಯಕ್ಕೆ ಒಳಗಾಗುತ್ತಾರೆ ಎಂಬುದನ್ನು ವರದಿ ಎತ್ತಿಹಿಡಿದಿದೆ.

ಹಣ ಗಳಿಕೆಯಲ್ಲಿ ಶೇ. 93ರಷ್ಟು ಅಂತರವು ಲಿಂಗ ತಾರತಮ್ಯದಿಂದಲೇ ಆಗಿದೆ. ಸ್ವಯಂ ಉದ್ಯೋಗದಲ್ಲಿರುವ ಪುರುಷರು ಮಹಿಳೆಯರಿಗಿಂತ ಎರಡೂವರೆ ಪಟ್ಟು ಹೆಚ್ಚು ಹಣ ಗಳಿಸುತ್ತಾರೆ. ಇದು, ಶೇ. 83ರಷ್ಟು ಲಿಂಗ ಆಧಾರಿತ ತಾರತಮ್ಯಕ್ಕೆ ಕಾರಣವಾಗಿದೆ. ಹಾಗೆಯೇ, ಪುರುಷ ಮತ್ತು ಮಹಿಳಾ ಕೂಲಿ ಕಾರ್ಮಿಕರ ಗಳಿಕೆಯ ನಡುವಿನ ಶೇ. 95ರಷ್ಟು ಅಂತರವು ತಾರತಮ್ಯದ ಕಾರಣದಿಂದಾಗಿರುತ್ತದೆ ಎಂದು ವರದಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಮಡಿಕೇರಿ | ‘ಮಾಣಿಕ್ಯ ಕೆರೆ’ ಅವೈಜ್ಞಾನಿಕ ಕಾಮಗಾರಿ: ಗ್ರಾಮ ಸಭೆಯಲ್ಲಿ ತಾರಕಕ್ಕೇರಿದ ವಾಗ್ವಾದ

ʻʻಕೂಲಿ ಕಾರ್ಮಿಕರಾಗಿ ಪುರುಷರು ತಿಂಗಳಿಗೆ 3,000 ರೂ ಗಳಿಸಿದರೆ, ಮಹಿಳೆಯರು ಅದಕ್ಕಿಂತ ಕಡಿಮೆ ಹಣ ಸಂಪಾದಿಸುತ್ತಾರೆ. ಈ ಕ್ಷೇತ್ರದಲ್ಲಿ ಹಣ ಸಂಪಾದನೆಯಲ್ಲಿರುವ ಅಂತರಕ್ಕೆ ಶೇ. 96ರಷ್ಟು ತಾರತಮ್ಯವೇ ಕಾರಣ” ಎಂದು ವರದಿ ವಿವರಿಸಿದೆ.

ʻಸಾಮಾಜಿಕ ನಿಯಮಗಳುʼ, ಪ್ರಯಾಣ, ಉದ್ಯೋಗದ ಸಮಯ, ಸುರಕ್ಷತೆಯ ಕೊರತೆ ಸೇರಿದಂತೆ ʻಕುಟುಂಬದ ಕಾರಣಗಳಿಂದʼ ಭಾರತದ ಮಹಿಳೆಯರು ಕಾರ್ಮಿಕ ಮಾರುಕಟ್ಟೆ ಪ್ರವೇಶಿಸುವುದಿಲ್ಲ ಎಂಬುದನ್ನು ವರದಿ ತಿಳಿಸಿದೆ.

'ಭಾರತ ತಾರತಮ್ಯ ವರದಿ 2022'ರ ಸಂಶೋಧನೆಗಳು 2004- 05ರಿಂದ 2019-20ರವರೆಗಿನ ಉದ್ಯೋಗ ಮತ್ತು ಕಾರ್ಮಿಕರ ಮೇಲಿನ ಸರ್ಕಾರದ ದತ್ತಾಂಶಗಳನ್ನು ಆಧರಿಸಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್