ಸರ್ಕಾರಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಯುಐಡಿಎಐ ಸುತ್ತೋಲೆ

  • ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಬದಲು ಪರ್ಯಾಯ ವ್ಯವಸ್ಥೆ
  • ವಿಐಡಿ ಬಳಸಿಕೊಂಡು ದೃಢೀಕರಣ ಕೊಡಲು ಸರ್ಕಾರಿ ಘಟಕಗಳಿಗೆ ಒಪ್ಪಿಗೆ

ನಾನಾ ಸಹಾಯಧನ ಸೇರಿದಂತೆ ಸರ್ಕಾರದ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಅಥವಾ ದಾಖಲಾತಿಯನ್ನು ಕಡ್ಡಾಯಗೊಳಿಸಿ ಆಗಸ್ಟ್‌ 11ರಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.

“ದೇಶದ ಶೇ.99ಕ್ಕಿಂತ ಹೆಚ್ಚು ವಯಸ್ಕರು ತಮ್ಮ ಹೆಸರಿನಲ್ಲಿ ಆಧಾರ್ ಸಂಖ್ಯೆ ಹೊಂದಿದ್ದಾರೆ. ಆಧಾರ್ ಕಾಯಿದೆಯ ಸೆಕ್ಷನ್ 7ರ ಪ್ರಕಾರ, ಈವರೆಗೆ ಆಧಾರ್ ಸಂಖ್ಯೆ ಹೊಂದಿರದವರಿಗೆ, ಸರ್ಕಾರದ ಸಹಾಯಧನ ಮತ್ತು ಇತರೆ ಸರ್ಕಾರಿ ಸೇವೆಗಳನ್ನು ಒದಗಿಸಲು ಪರ್ಯಾಯ ಗುರುತಿನ ಚೀಟಿ ನೀಡಲಾಗುತ್ತದೆ. ಆ ಮೂಲಕ ಅವರು ಸೇವೆಯನ್ನು ಪಡೆಯಬಹುದು” ಎಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ.

ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಇಲ್ಲದವರು, ನೋಂದಣಿಗೆ ಅರ್ಜಿ ಸಲ್ಲಿಸಬಹುದು ಮತ್ತು ಆಧಾರ್ ಸಂಖ್ಯೆಯನ್ನು ನೀಡುವವರೆಗೆ ಪರ್ಯಾಯ ಮತ್ತು ಕಾರ್ಯಸಾಧ್ಯವಾಗುವ ಗುರುತಿನ ಚೀಟಿಯ ಮೂಲಕ ಪ್ರಯೋಜನಗಳು, ಸಬ್ಸಿಡಿಗಳು ಹಾಗೂ ಸೇವೆಗಳನ್ನು ಪಡೆಯಬಹುದು ಎಂದು ಹೊಸ ಸುತ್ತೋಲೆ ಹೇಳುತ್ತದೆ.

ಈ ಸುದ್ದಿ ಓದಿದ್ದೀರಾ? ಆಧಾರ್‌ ನಂಬಲರ್ಹ ಐಡಿ ಅಲ್ಲ; ಆತಂಕಕಾರಿ ನ್ಯೂನತೆಗಳನ್ನು ಬಿಚ್ಚಿಟ್ಟ ಸಿಎಜಿ ವರದಿ

ಈ ಹಿಂದೆ ನಿವಾಸಿಗಳಿಗೆ ವರ್ಚುವಲ್ ಐಡೆಂಟಿಫೈಯರ್ (ವಿಐಡಿ) ಸೌಲಭ್ಯವನ್ನು ಯುಐಡಿಎಐ ಒದಗಿಸಿತ್ತು. ಇದು ತಾತ್ಕಾಲಿಕ ಮತ್ತು ಹಿಂತೆಗೆದುಕೊಳ್ಳಬಹುದಾದ 16 ಅಂಕಿಯ ಸಂಖ್ಯೆಯಾಗಿದ್ದು ಇದನ್ನು ಆಧಾರ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಲಾಗಿದೆ. ದೃಢೀಕರಣ ಮತ್ತು ಇ-ಕೆವೈಸಿ ಸೇವೆಗಳಿಗೆ ಆಧಾರ್ ಬದಲಿಗೆ ಈ ಸಂಖ್ಯೆ ಬಳಸಬಹುದು. ವಿಐಡಿ ಬಳಸಿಕೊಂಡು ದೃಢೀಕರಣ ಒದಗಿಸಲಾಗಿದೆಯೇ ಎಂಬುವುದನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರಿ ಕಾರ್ಯಲಯಗಳಿಗೆ ವಿನಂತಿಸಲಾಗುತ್ತದೆ.

ಆದಾಗ್ಯೂ, ವಿಐಡಿ ಬಳಸಿಕೊಂಡು ದೃಢೀಕರಣವನ್ನು ಸರ್ಕಾರಿ ಘಟಕಗಳು ಕೊಡಬಹುದು ಎಂದು ಇತ್ತೀಚಿನ ಯುಐಡಿಎಐ ಸುತ್ತೋಲೆ ಹೇಳುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್