ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ| ಡಿಕೆಶಿ ಕೋರಿಕೆಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಕಾಲಾವಕಾಶ ನೀಡಿದ ಹೈಕೋರ್ಟ್

dks
  • ‌ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶಕ್ಕೆ ಕೋರಿಕೆ
  • ವಿಚಾರಣೆಯನ್ನು ಆಗಸ್ಟ್‌ 29ಕ್ಕೆ ಮುಂದೂಡಿದ ಹೈಕೋರ್ಟ್

ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪ ಕುರಿತು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕರ್ನಾಟಕ ಹೈಕೋರ್ಟ್ ಕಾಲಾವಕಾಶ ನೀಡಿದೆ.

ಡಿಕೆಶಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಆಗ ಶಿವಕುಮಾರ್‌ ಪರ ಹಿರಿಯ ವಕೀಲ ಸಿ ಎಚ್‌ ಜಾಧವ್‌ ಅವರು “ಮುಂಚಿತವಾಗಿ ಆಕ್ಷೇಪಣೆಯನ್ನು ನಮಗೆ ನೀಡಲು ಆದೇಶಿಸಬೇಕು” ಎಂದು ಕೋರಿದರು. ಇದಕ್ಕೆ ಒಪ್ಪಿದ ಪೀಠವು ಆಕ್ಷೇಪಣೆಯನ್ನು ಮುಂಚಿತವಾಗಿ ಅರ್ಜಿದಾರರ ವಕೀಲರಿಗೆ ನೀಡಬೇಕು ಎಂದು ಆದೇಶಿಸಿದ್ದು, ವಿಚಾರಣೆಯನ್ನು ಆಗಸ್ಟ್‌ 29ಕ್ಕೆ ಮುಂದೂಡಿತು.‌

ಈ ಸುದ್ದಿ ಓದಿದ್ದೀರಾ?: ಯುಪಿಪಿಎಸ್‌ಸಿಯಲ್ಲಿ ಮಾಜಿ ಸೈನಿಕರಿಗೆ ಶೇ.5ರಷ್ಟು ಮೀಸಲಾತಿಗೆ ಆದೇಶ ನೀಡಿದ ಹೈಕೋರ್ಟ್

“ನನ್ನ ವಿರುದ್ಧ 2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ನಿಗ್ರಹ ತಡೆ ಕಾಯಿದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ ಕಾನೂನು ಬಾಹಿರವಾಗಿದೆ. ಈ ಪ್ರಕರಣದ ಎಫ್‌ಐಆರ್‌ನಲ್ಲಿ ನನ್ನ ಕುಟುಂಬದ ಸದಸ್ಯರ ಹೆಸರನ್ನೂ ಸೇರ್ಪಡೆ ಮಾಡಿರುವುದು ತಪ್ಪು. ಭ್ರಷ್ಟಾಚಾರ ನಿಗ್ರಹ ತಡೆ ಕಾಯಿದೆ ಕೇವಲ ಸಾರ್ವಜನಿಕ ಸೇವಕರಿಗೆ ಮಾತ್ರವೇ ಅನ್ವಯ ಆಗುತ್ತದೆ. ಕುಟುಂಬದ ಸದಸ್ಯರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿರುವುದು ಕಾನೂನಿಗೆ ವಿರುದ್ಧ. ಆದ್ದರಿಂದ, ಎಫ್‌ಐಆರ್‌ ರದ್ದುಗೊಳಿಸಬೇಕು” ಎಂದು ಶಿವಕುಮಾರ್‌ ಅರ್ಜಿಯಲ್ಲಿ ಕೋರಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್