ಭೀಮಾ ಕೋರೆಗಾಂವ್‌ ಪ್ರಕರಣ | ಕೊನೆಗೂ ನವ್ಲಾಖಾರನ್ನು ಗೃಹಬಂಧನಕ್ಕೆ ಕಳಿಸಿದ ಎನ್‌ಐಎ

Gautam Navlakha
  • ನವ್ಲಾಖಾ ಅವರ ಗೃಹಬಂಧನ ಇಂದಿನಿಂದ ಆರಂಭ
  • ಹಲವು ಷರತ್ತುಗಳೊಂದಿಗೆ ನವ್ಲಾಖಾಗೆ ಗೃಹ ಬಂಧನ 

ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದ ಒಂಭತ್ತು ದಿನಗಳ ಬಳಿಕ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಯನ್ನು ತಲೋಜಾ ಜೈಲಿನಿಂದ ಮುಂಬೈನಲ್ಲಿರುವ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌ವಾದಿ)ಗೆ ಸೇರಿದ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.

ನ.18(ಶುಕ್ರವಾರ)ರಂದು ಸುಪ್ರೀಂಕೋರ್ಟ್‌, 24 ಗಂಟೆಯೊಳಗೆ ನವ್ಲಾಖಾ ಅವರನ್ನು ಗೃಹ ಬಂಧನಕ್ಕೆ ವರ್ಗಾಯಿಸಬೇಕು ಎಂದು ಎನ್‌ಐಎಗೆ ಸೂಚಿಸಿತ್ತು. ಶನಿವಾರ ಬೆಳಗ್ಗೆ ಮುಂಬೈನ ವಿಶೇಷ ನ್ಯಾಯಾಲಯವು ನವ್ಲಾಖಾ ಅವರ ಗೃಹಬಂಧನಕ್ಕೆ ಅನುಕೂಲವಾಗುವಂತೆ ಮೆಮೊ ತಯಾರಿಸಿತ್ತು. ಬಳಿಕ ಅವರ ಬಿಡುಗಡೆ ಮಾಡಲಾಗಿದೆ. 

Eedina App

ನವ್ಲಾಖಾ ಅವರ ಗೃಹ ಬಂಧನಕ್ಕೆ ಎನ್‌ಐಎ ಆಕ್ಷೇಪ ವ್ಯಕ್ತಪಡಿಸಿತ್ತು. "ನವೆಂಬರ್‌ 10ರಂದು ನೀಡಿದ್ದ ಆದೇಶವನ್ನು 24ಗಂಟೆಯೊಳಗೆ ಕಾರ್ಯಗತಗೊಳಿಸಬೇಕು. ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್‌ಗಳನ್ನೂ ಎನ್‌ಐಎ ಸ್ಥಳಾಂತರಿಸಬಹುದು" ಎಂದು ಪೀಠವು ನಿನ್ನೆ ಹೇಳಿತ್ತು. ಇದೇ ವೇಳೆ, "ನಮ್ಮ ಆದೇಶವನ್ನು ಧಿಕ್ಕರಿಸಲು ನೀವು ಲೋಪದೋಷಗಳನ್ನು ಹುಡುಕಲು ಪ್ರಯತ್ನಿಸಿದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ" ಎಂದು ಪೀಠವು ಎನ್‌ಐಎಗೆ ಎಚ್ಚರಿಕೆ ನೀಡಿತ್ತು.

"ಇಡೀ ಪೊಲೀಸ್‌ ಪಡೆಗೆ ಒಬ್ಬ ಅನಾರೋಗ್ಯ ವ್ಯಕ್ತಿಯ ಮೇಲೆ ನಿಗಾ ವಹಿಸಲು ಸಾಧ್ಯವಾಗದಿದ್ದರೆ, ನಿಮ್ಮ ದೌರ್ಬಲ್ಯವೇನು ಎಂಬುದನ್ನು ನೀವೇ ಯೋಚಿಸಿ" ಎಂದು ಪೀಠವು ಎನ್‌ಐಎಗೆ ಚಾಟಿ ಬೀಸಿತ್ತು. 

AV Eye Hospital ad

ತಾವು ಚರ್ಮದ ಅಲರ್ಜಿ, ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಹೇಳಿದ್ದ ನವ್ಲಾಖಾ ಅವರು, ಕ್ಯಾನ್ಸರ್‌ಗೆ ತುತ್ತಾಗಿರುವ ಸಾಧ್ಯತೆಯಿದ್ದು, ಪತ್ತೆ ಹಚ್ಚುವಿಕೆಗಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಿದೆ ಎಂದು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದರು. 

2017, ಡಿಸೆಂಬರ್‌ 31ರ ಎಲ್ಗಾರ್‌ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಏಪ್ರಿಲ್‌ನಲ್ಲಿ ಪತ್ರಕರ್ತ ಗೌತಮ್‌ ನವ್ಲಾಖಾ ಸೇರಿ ಹಲವರನ್ನು ಬಂಧಿಸಲಾಗಿತ್ತು. ನವ್ಲಾಖಾ ಅವರನ್ನು ಆರಂಭದಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ನಂತರ ಬಂಧಿಸಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿತ್ತು.

ತಮ್ಮನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವ ಬದಲು ಗೃಹ ಬಂಧನದಲ್ಲಿ ಇರಿಸಬೇಕು ಎಂದು ಕೋರಿ ನವ್ಲಾಖಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ನಿರಾಕರಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಕಾನೂನು ಅರಿವು | ಪೊಲೀಸರಿಗೆ ದೂರು ಕೊಡಲು ಹೋಗುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ

ಏನಿದು ಪ್ರಕರಣ?

ಡಿಸೆಂಬರ್ 31, 2017ರಂದು ಮಹಾರಾಷ್ಟ್ರದ ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಮರುದಿನ ನಗರದ ಹೊರವಲಯದಲ್ಲಿರುವ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಆರೋಪಿಸಿದ್ದರು.

ಪುಣೆ ಪೊಲೀಸರು ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿದೆ ಎಂದು ಹೇಳಿದ್ದರು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app