ವಂಚನೆ ಪ್ರಕರಣ| ದೆಹಲಿ ಪೊಲೀಸರಿಂದ ಬಾಲಿವುಡ್‌ ನಟಿ ನೋರಾ ಫತೇಹಿ ವಿಚಾರಣೆ

Nora fatehi
  • ಸುಕೇಶ್‌ ಚಂದ್ರಶೇಖರ್‌ನಿಂದ ಬೆಲೆ ಬಾಳುವ ಉಡುಗೊರೆ ಪಡೆದ ಆರೋಪ
  • ಫತೇಹಿ ಅವರ ಗೊಂದಲದ ಹೇಳಿಕೆ ಕುರಿತು ಪೊಲೀಸರಿಂದ ವಿಚಾರಣೆ

ವಂಚಕ ಸುಕೇಶ್‌ ಚಂದ್ರಶೇಖರ್‌ ಮುಖ್ಯ ಆರೋಪಿಯಾಗಿರುವ ₹200 ಕೋಟಿ ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರು ಶುಕ್ರವಾರ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಈಗಾಗಲೇ "ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ" ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇದೀಗ ಇದೇ ಪ್ರಕರಣದ ಭಾಗವಾಗಿ ದೆಹಲಿ ಪೊಲೀಸರು ನೋರಾ ಫತೇಹಿ ಅವರನ್ನೂ ವಿಚಾರಣೆ ನಡೆಸಿದ್ದಾರೆ. ನೋರಾ ಫತೇಹಿ ಅವರಿಗೆ ಬೆಲೆ ಬಾಳುವ ವಾಚ್‌, ಬ್ಯಾಗ್ , ಬಿಎಂಡಬ್ಲ್ಯೂ ಕಾರು ಹಾಗೂ ನಗದು ಹಣವನ್ನು ಉಡುಗೊರೆಯಾಗಿ ನೀಡಿರುವುದಾಗಿ ಸುಕೇಶ್‌ ಚಂದ್ರಶೇಖರ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ನೋರಾ ಫತೇಹಿ ಅವರ ವಿಚಾರಣೆ ನಡೆಸಿದ್ದಾರೆ.

Eedina App

ನೋರಾ ಫತೇಹಿ, ಕಳೆದ ಡಿಸೆಂಬರ್‌ನಲ್ಲಿ ನಾನು "ಸುಕೇಶ್‌ನಿಂದ ಯಾವುದೇ ಉಡುಗೊರೆ ಪಡೆದಿಲ್ಲ" ಎಂದು ಪೊಲೀಸರಿಗೆ ಹೇಳಿದ್ದರು. ಆದರೆ, ನಂತರದ ದಿನಗಳಲ್ಲಿ ಬೆಲೆ ಬಾಳುವ ಬ್ಯಾಗ್‌ ಮತ್ತು ವಾಚ್‌ ಪಡೆದಿದ್ದಾಗಿ ಹೇಳಿದ್ದರು. ನಂತರ ಬಿಎಂಡಬ್ಲ್ಯೂ ಕಾರು ನನಗೆ ಅವಶ್ಯ ಇಲ್ಲದಿರುವುದರಿಂದ ಸುಕೇಶ್‌ಗೆ ವಾಪಸ್‌ ನೀಡಿರುವುದಾಗಿಯೂ ಹೇಳಿದ್ದರು. ಫತೇಹಿ ಅವರ ಗೊಂದಲದ ಹೇಳಿಕೆ ಕುರಿತು ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಜಾರ್ಖಂಡ್‌ | ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಮತ್ತು ಜಿಲ್ಲಾಧಿಕಾರಿ ನಡುವೆ ಟ್ವೀಟ್‌ ಸಮರ

AV Eye Hospital ad

"ಸುಕೇಶ್‌ ಚಂದ್ರಶೇಖರ್‌ ಹಲವಾರು ಬಾಲಿವುಡ್‌ ನಟಿಯರಿಗೆ ಉಡುಗೊರೆಗಳನ್ನು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಅದಕ್ಕಾಗಿಯೇ ನೋರಾ ಫತೇಹಿ ಅವರನ್ನೂ ವಿಚಾರಣೆ ನಡೆಸಿದೆವು. ನೋರಾ ಫತೇಹಿ ಆರೋಪಿಯೋ, ಸಾಕ್ಷಿಯೋ ಎಂಬುದನ್ನು ತನಿಖೆ ನಂತರ ನಿರ್ಧರಿಸುತ್ತೇವೆ. ಇನ್ನೂ ಇಬ್ಬರು-ಮೂವರು ಬಾಲಿವುಡ್‌ ನಟಿಯರ ವಿಚಾರಣೆ ಬಾಕಿಯಿದೆ. ನಾವು ಜಾಕ್ವೆಲಿನ್‌ ಫರ್ನಾಂಡಿಸ್‌ ಅವರನ್ನೂ ವಿಚಾರಣೆ ನಡೆಸುತ್ತೇವೆ" ಎಂದು ದೆಹಲಿ ಅಪರಾಧ ವಿಭಾಗದ ವಿಶೇಷ ಪೊಲೀಸ್‌ ಆಯುಕ್ತ ರವೀಂದ್ರ ಸಿಂಗ್‌ ಯಾದವ್‌ ಹೇಳಿರುವುದಾಗಿ ಎನ್‌ಡಿ ಟಿವಿ ವರದಿ ಮಾಡಿದೆ.  

ಜೀವ ಬೆದರಿಕೆ ಹಿನ್ನೆಲೆಯಲ್ಲಿ ತಿಹಾರ್‌ ಜೈಲಿನಿಂದ ವಂಚಕ ಸುಕೇಶ್ ಚಂದ್ರಶೇಖರ್‌ ಮತ್ತು ಆತನ ಪತ್ನಿಯನ್ನು ದೆಹಲಿಯ ಮಂಡೋಲಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app