
- ಮಹಿಳೆಯರು ಪಾರ್ಕ್ ಪ್ರವೇಶಿಸುವುದನ್ನು ನಿಷೇಧಿಸಿದ ತಾಲಿಬಾನ್
- ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದಾರೆ ತಾಲಿಬಾನ್ ಮಹಿಳೆಯರು
ಮಹಿಳಾ ಹಕ್ಕುಗಳನ್ನು ದಮನಿಸುತ್ತಲೇ ಬಂದಿರುವ ತಾಲಿಬಾನ್, ಮಹಿಳೆಯರ ಮೇಲೆ ‘ನೈತಿಕ ಪೊಲೀಸ್ಗಿರಿ’ನಡೆಸುತ್ತಿದ್ದಾರೆ. ಪುರುಷನೊಬ್ಬನು ಜೊತೆಯಲ್ಲಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಓಡಾಡುವುದನ್ನು ನಿಷೇಧಿಸಿದ್ದ ತಾಲಿಬಾನಿಗಳು ಪ್ರಸ್ತುತ ಕಾಬೂಲ್ನಲ್ಲಿರುವ ಅಮ್ಯೂಸ್ಮೆಂಟ್ ಪಾರ್ಕ್ಗಳಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂದು ಆದೇಶಿಸಿದ್ದಾರೆ.
ಈ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿರುವ ಅಫ್ಘಾನ್ನ ಪ್ರಚಾರ ಸಚಿವಾಲಯದ ವಕ್ತಾರರು, ಮಹಿಳೆಯರು ಉದ್ಯಾನವನಗಳನ್ನು ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ದೃಢಪಡಿಸಿದರು. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಪಾರ್ಕ್ ಪ್ರವೇಶ ನಿಷೇಧದ ನಿಬಂರ್ಧಗಳು ಹೇಗಿರುತ್ತವೆ. ಅದು ಈ ಹಿಂದಿದ್ದ ನಿಯಮಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಮಹಿಳೆಯೊಬ್ಬರು ಮೊಮ್ಮಗನೊಂದಿಗೆ ಪಾರ್ಕ್ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೆ, ಪಾರ್ಕ್ನ ಪ್ರವೇಶದಲ್ಲಿಯೇ ಅವರನ್ನು ಮನೆಗೆ ಕಳುಹಿಸಲಾಗಿದೆ.
“ತಾಯಿಯೊಬ್ಬರು ತಮ್ಮ ಮಕ್ಕಳೊಂದಿಗೆ ಬಂದಾಗ, ಅವರನ್ನು ಉದ್ಯಾನವನಕ್ಕೆ ಪ್ರವೇಶಿಸಲು ಅನುಮತಿ ನೀಡಬೇಕು. ಏಕೆಂದರೆ ಮಕ್ಕಳು ಇಂತಹ ಪಾರ್ಕ್ಗಳನ್ನು ನೋಡಬೇಕು, ಆಟವಾಡಬೇಕು. ಪಾರ್ಕ್ ಪ್ರವೇಶಿಸಲು ಅನುಮತಿ ನೀಡುವಂತೆ ಒತ್ತಾಯಿಸಿದೆ. ಮನವಿ ಮಾಡಿದೆ. ಆದರೆ, ಅವರು ನಮ್ಮನ್ನು ಉದ್ಯಾನಕ್ಕೆ ಪ್ರವೇಶಿಸಲು ಅನುಮತಿಸಲಿಲ್ಲ. ಬೇಸರದಿಂದಲೇ ಪಾರ್ಕ್ ನೋಡದೇ ಮನೆಗೆ ಬಂದೆವು” ಎಂದು ಪಾರ್ಕ್ಗೆ ಹೋಗದೇ ಹಿಂತಿರುಗಿದ ಮಹಿಳೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಕೇಂದ್ರದಿಂದ ಟಿ ವಿ ಚಾನೆಲ್ಗಳಿಗೆ ಮಾರ್ಗಸೂಚಿ ಬಿಡುಗಡೆ; ನಿತ್ಯ 30 ನಿಮಿಷ ರಾಷ್ಟ್ರೀಯ ಹಿತಾಸಕ್ತಿ ಕಾರ್ಯಕ್ರಮ ಪ್ರಸಾರ ಕಡ್ಡಾಯ
ಕಳೆದ ವರ್ಷ ಆಗಸ್ಟ್ನಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಮರಳಿದ ನಂತರ, ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ಈ ಹಿಂದೆ ಹೇರಿದ್ದ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಆ ಭರವಸೆ ನೀಡಿದ ಕೆಲವೇ ದಿನಗಳಲ್ಲಿ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದ್ದರು. ಉದ್ಯೋಗಸ್ಥ ಮಹಿಳೆಯರ ಮೇಲೂ ಸಂಪೂರ್ಣ ನಿಯಂತ್ರಣ ಸಾಧಿಸಿ, ಉದ್ಯೋಗದಿಂದ ತೆಗೆದುಹಾಕಿದ್ದರು. ಮೂಲಭೂತವಾದಿ ಇಸ್ಲಾಂ ಆಡಳಿತವನ್ನು ವಿರೋಧಿಸಿ, ಮಹಿಳೆಯರ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ, ಮಹಿಳೆಯರು ಅಫ್ಘಾನ್ನ ಹಲವಾರು ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ.
ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ, ಅಫ್ಘಾನಿಸ್ತಾನದ ಮಹಿಳೆಯರು ಪುರುಷರೊಬ್ಬರು ಜೊತೆಯಲ್ಲಿ ಇಲ್ಲದೇ ತಮ್ಮ ಮನೆಗಳಿಂದ ಹೊರಬರಲು ಅನುಮತಿಯನ್ನು ನಿರಾಕರಿಸಲಾಗಿದೆ. ಸರ್ಕಾರಿ ಇಲಾಖೆಗಳ ಅಧಿಕೃತ ಹುದ್ದೆಗಳನ್ನು ಹೊಂದಿರುವ ಮಹಿಳೆಯರ ಬದಲಿಗೆ ಆ ಸ್ಥಾನವನ್ನು ತುಂಬಲು ಅವರ ಮನೆಗಳಿಂದ ಪುರುಷರನ್ನು ನಾಮನಿರ್ದೇಶನ ಮಾಡಲು ತಿಳಿಸಲಾಗಿತ್ತು.
ಈಗಾಗಲೇ ಕೆಲವು ತಾಲಿಬಾನ್ ಅಧಿಕಾರಿಗಳು ಮಹಿಳೆಯರು ಸ್ಮಾರ್ಟ್ಫೋನ್ ಬಳಸುವುದನ್ನು ನಿಷೇಧಿಸಲಾಗಿದ್ದು, ಮಾಧ್ಯಮದಲ್ಲಿ ಕೆಲಸ ಮಾಡಿದ ಸುಮಾರು 80 ಪ್ರತಿಶತ ಮಹಿಳೆಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.