ಕೋಪದ ಭರದಲ್ಲಿ ಶ್ರದ್ಧಾ ಕೊಲೆ ಮಾಡಿದೆ ಎಂದು ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡ ಅಫ್ತಾಬ್

  • ವಿಡಿಯೋ ಕಾನ್ಫರೆನ್ಸ್ ಮೂಲಕ ಆಫ್ತಾಬ್‌ನ ವಿಚಾರಣೆ ಮಾಡಿರುವ ನ್ಯಾಯಾಲಯ
  • ದೆಹಲಿ ಪೊಲೀಸರು ಇಂದು ಅಫ್ತಾಬ್‌ನಿಗೆ 'ಪಾಲಿಗ್ರಾಫ್' ಪರೀಕ್ಷೆ ನಡೆಸುವ ಸಾಧ್ಯತೆ 

ವಿಡಿಯೋ ಕಾನ್ಫರೆನ್ಸ್ ಮೂಲಕ ಆಫ್ತಾಬ್ ಪೂನಾವಾಲ ವಿಚಾರಣೆ ನಡೆಸಲಾಗಿದ್ದು, “ನಾನು ಕೋಪದಲ್ಲಿ ಶ್ರದ್ಧಾ ವಾಕರ್ ಕೊಲೆ ಮಾಡಿದೆ” ಎಂದು ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್‌ನ ಪೊಲೀಸ್ ಕಸ್ಟಡಿಯನ್ನು ಇನ್ನೂ 4 ದಿನಗಳವರೆಗೆ ವಿಸ್ತರಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ದೆಹಲಿಯ ಸಾಕೇತ್ ನ್ಯಾಯಾಲಯವು ಅಫ್ತಾಬ್ ಪೂನಾವಾಲನ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದೆ.

“ಶ್ರದ್ಧಾ ಅವರನ್ನು 28 ವರ್ಷದ ಅಫ್ತಾಬ್ ಕೊಲೆ ಮಾಡಿದ್ದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೇಹದ ಭಾಗಗಳನ್ನು ಮಧ್ಯರಾತ್ರಿಯ ನಂತರ ಕಾಡಿನಲ್ಲಿ ಎಸೆದಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ. ಶ್ರದ್ಧಾಳನ್ನು ಕೊಂದು, ಕತ್ತರಿಸಿದ ಆರೋಪಿ ಅಫ್ತಾಬ್ ಪೂನಾವಾಲನ 'ಪಾಲಿಗ್ರಾಫ್' ಪರೀಕ್ಷೆಯನ್ನು ದೆಹಲಿ ಪೊಲೀಸರು ಇಂದು ನಡೆಸುವ ಸಾಧ್ಯತೆಯಿದೆ.

ಕೊಲೆಯ ಆಯುಧ, ಶ್ರದ್ಧಾಳ ತಲೆಬುರುಡೆ, ಬಟ್ಟೆ ಹಾಗೂ ಫೋನ್ ಅನ್ನು ವಶಪಡಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಈವರೆಗೆ ಪೊಲೀಸರು ಕೆಲವು ಮೂಳೆಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ. ಭದ್ರತೆ ಗಮನದಲ್ಲಿಟ್ಟುಕೊಂಡು ಅಫ್ತಾಬ್‌ನನ್ನು ಮಂಗಳವಾರ ಮತ್ತೆ ವಿಡಿಯೋಗ್ರಫಿ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

"ಅಫ್ತಾಬ್ ಇಂದು ದೆಹಲಿ ನ್ಯಾಯಾಲಯದಲ್ಲಿ ಶ್ರದ್ಧಾಳನ್ನು ಆ ಕ್ಷಣದ ಕೋಪದಲ್ಲಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದರೂ, ಅದು ಸಂಪೂರ್ಣ ನಿಜವಲ್ಲ" ಎಂದು ಅವರು ಪೊಲೀಸರು ತಿಳಿಸಿದ್ದಾರೆ.

“ಅಫ್ತಾಬ್ ಪೊಲೀಸರೊಂದಿಗೆ ಸಹಕರಿಸುತ್ತಿದ್ದು, ದೇಹದ ಭಾಗಗಳನ್ನು ಎಸೆದ ಸ್ಥಳದ ನಕ್ಷೆಗಳನ್ನು ಸಹ ನೀಡಿದ್ದಾನೆ. ಆದರೆ, ಕೊಲೆ ನಡೆದು ಬಹಳ ದಿನಗಳು ಕಳೆದಿರುವ ಕಾರಣ ಅಫ್ತಾಬ್‌ಗೆ ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ. 

ತನಿಖಾಧಿಕಾರಿಯು ಅಫ್ತಾಬ್‌ನಿಂದ ಕೊಳದ ರೇಖಾಚಿತ್ರವನ್ನು ಸ್ವೀಕರಿಸಿದ್ದಾರೆ. ಮತ್ತಷ್ಟು ಮಾಹಿತಿ ಪಡೆಯಲು ವಶಕ್ಕೆ ಒಪ್ಪಿಸುವಂತೆ ತನಿಖಾಧಿಕಾರಿಗಳು ಕೇಳಿಕೊಂಡಿದ್ದಾರೆ. ದೇಹದ ಭಾಗಗಳ ಹುಡುಕಾಟಕ್ಕಾಗಿ ಮೆಹ್ರಾಲಿ ಅರಣ್ಯ ಮತ್ತು ದಕ್ಷಿಣ ದೆಹಲಿಯಲ್ಲಿರುವ ಮೈದಂಗರಿಗೆ ಅಫ್ತಾಬ್‌ನನ್ನು ಕರೆದೊಯ್ಯಲಾಗುವುದು ಎಂದು ವರದಿಯಾಗಿದೆ.

“ವಿಚಾರಣೆಯ ಸಮಯದಲ್ಲಿ, ಗುರುಗ್ರಾಮ್‌ನ ಡಿಎಲ್ಎಫ್ 3ನೇ ಹಂತದ ಪೊದೆಗಳಲ್ಲಿ ಶ್ರದ್ಧಾ ಅವರ ದೇಹವನ್ನು ಕತ್ತರಿಸಲು ಬಳಸಿದ ಗರಗಸ ಮತ್ತು ಬ್ಲೇಡ್ ಅನ್ನು ಎಸೆದಿದ್ದೇನೆ ಎಂದು ಆಫ್ತಾಬ್ ಹೇಳಿದ್ದಾನೆ” ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. 

ದೆಹಲಿ ಪೊಲೀಸ್ ತಂಡವು ಆ ಪೊದೆಗಳನ್ನು ಎರಡು ಬಾರಿ ಪರಿಶೀಲಿಸಿದೆ. ದೇಹ ಕತ್ತರಿಸಲು ಬಳಸಿದ ಸಾಧನಗಳನ್ನು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಕಸದ ಬುಟ್ಟಿಯಲ್ಲಿ ಎಸೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತನಿಖೆಯ ಮೊದಲ ದಿನದ ನಂತರ, ಕಳೆದ ಶುಕ್ರವಾರ, ದೆಹಲಿ ಪೊಲೀಸರು ಗುರುಗ್ರಾಮ್‌ನ ಪೊದೆಗಳಿಂದ ಕೆಲವು ಪುರಾವೆಗಳನ್ನು ಸಂಗ್ರಹಿಸಿದರು. ಅದನ್ನು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತನಿಖೆಗಾಗಿ ಕಳುಹಿಸಲಾಗಿದೆ. ಎರಡನೇ ದಿನ, ಕಳೆದ ಶನಿವಾರ, ದೆಹಲಿ ಪೊಲೀಸರು ಲೋಹ ಶೋಧಕಗಳೊಂದಿಗೆ ಗುರುಗ್ರಾಮ್‌ಗೆ ಹೋಗಿದ್ದರು. ಆದರೆ, ಏನು ಪತ್ತೆಯಾಗಿರಲಿಲ್ಲ. 

ಭಾನುವಾರ, ಪೊಲೀಸರು ಮೆಹ್ರೌಲಿ ಅರಣ್ಯದಿಂದ ಹೆಚ್ಚಿನ ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರದ್ಧಾ ಅವರ ತಂದೆಯ ಡಿಎನ್ಎ ಮಾದರಿಗಳಿಗೆ ಹೊಂದಿಕೆಯಾಗಲು ಅವರು ಇದುವರೆಗೆ ತಲೆಬುರುಡೆಯ ಬುಡ ಮತ್ತು ಶಿರಚ್ಛೇದಿತ ದವಡೆ ಸೇರಿದಂತೆ 18 ಮೂಳೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಒಂದು ಅಥವಾ ಎರಡು ವಾರಗಳಲ್ಲಿ ವರದಿ ಲಭ್ಯವಾಗಲಿದೆ ಎಂದು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ ಹೇಳಿದೆ.

ಈ ಸುದ್ದಿ ಓದಿದ್ದೀರಾ? ಕೆಲವು ವೆಬ್‌ ಸರಣಿಗಳು ಯುವಕರನ್ನು ಹಿಂಸೆಗೆ ಪ್ರಚೋದಿಸುತ್ತಿವೆ | ಸಮೀಕ್ಷೆ

ಕಳೆದ ವಾರ ಪೊಲೀಸರು ಅಫ್ತಾಬ್‌ನ ಫ್ಲಾಟ್‌ನಿಂದ ಭಾರವಾದ ಮತ್ತು ಚೂಪಾದ ಕತ್ತರಿಸುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಶ್ರದ್ಧಾ ವಾಕರ್ ಅವರ ದೇಹವನ್ನು ಕತ್ತರಿಸಲು ಬಳಸಿರಬಹುದು ಎಂದು ಅವರು ಶಂಕಿಸಿದ್ದಾರೆ. 

ಆರು ತಿಂಗಳ ಹಿಂದಿನ ಕೊಲೆಯ ತನಿಖೆಗಳು 'ಫೋರೆನ್ಸಿಕ್' ವರದಿಗಳು, ಕರೆಗಳ ಮಾಹಿತಿ ಹಾಗೂ ಸಾಕ್ಷಿಗಳಿಲ್ಲದ ಕಾರಣ ಸಾಂದರ್ಭಿಕ ಪುರಾವೆಗಳನ್ನು ಆಧರಿಸಿವೆ ಎಂದು ಮೂಲಗಳು ಹೇಳುತ್ತವೆ. ಶೇ. 80ರಷ್ಟು ತನಿಖೆ ಪೂರ್ಣಗೊಂಡಿದೆ ಎಂದು ದೆಹಲಿ ಪೊಲೀಸರು ಇಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಸಾಕ್ಷ್ಯಗಳು ಇನ್ನೂ ನಾಪತ್ತೆಯಾಗಿರುವುದರಿಂದ ಮುಂದಿನ ಕೆಲವು ದಿನಗಳು ತನಿಖೆಗೆ ನಿರ್ಣಾಯಕವಾಗಿದೆ.

ಈ ಮಧ್ಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸೋಮವಾರ (ನ.21) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ವಸೂಲಾತಿ ಸ್ಥಳಗಳಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕರ ಉಪಸ್ಥಿತಿಯು ಸಾಕ್ಷ್ಯವನ್ನು ಹಾಳುಮಾಡುತ್ತದೆ ಎಂದು ಆರೋಪಿಸಿದೆ. ಹತ್ಯೆ ನಡೆದ ಸ್ಥಳವನ್ನು ದೆಹಲಿ ಪೊಲೀಸರು ೀವರೆಗೆ ಸೀಲ್ ಮಾಡಿಲ್ಲ. ಈ ಜಾಗಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮ ಸಿಬ್ಬಂದಿ ನಿರಂತರವಾಗಿ ಪ್ರವೇಶಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಆದರೆ, ಇಂದು ದೆಹಲಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ. 

'ಡೇಟಿಂಗ್ ಆ್ಯಪ್‌'ನಲ್ಲಿ ಶ್ರದ್ಧಾಳಿಗೆ ಪರಿಚಯವಾಗಿದ್ದ ಅಫ್ತಾಬ್ ಇದಕ್ಕೂ ಮೊದಲು ಹಲವು ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ, ಆತನ ಮೇಲೆ ಅನುಮಾನಗೊಂಡು ತನ್ನನ್ನು ಮದುವೆಯಾಗೆಂದು ಶ್ರದ್ಧಾ ಒತ್ತಾಯಿಸುತ್ತಿದ್ದಳು. ಆದರೆ, ಅದಕ್ಕೆ ಅಫ್ತಾಬ್ ಒಪ್ಪಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಕಳೆದ ಮೇ ತಿಂಗಳಲ್ಲಿ ಅಫ್ತಾಬ್ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180