ಬೆಂಗಳೂರು; ದಾಖಲೆ ಕುಸಿತದ ಬಳಿಕ ಗಗನಕ್ಕೇರಿದ ಬಾಳೆಹಣ್ಣಿನ ದರ

Banana price one
  • ಸಗಟು ಮಾರುಕಟ್ಟೆಗಳಲ್ಲಿ ಏಲಕ್ಕಿ ಬಾಳೆ ಪ್ರತಿ ಕೆಜಿಗೆ ₹ 65 
  • ಹಾಪ್‌ಕಾಮ್ಸ್‌, ಚಿಲ್ಲರೆ ಅಂಗಡಿಗಳಲ್ಲಿ ₹ 90 ದಾಟಿದ ಬೆಲೆ

ಕೋವಿಡ್-19 ಸಾಂಕ್ರಾಮಿಕದ ಕಾರಣ ಕಳೆದ ಎರಡು ವರ್ಷಗಳಿಂದ ಬಾಳೆಹಣ್ಣಿನ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ಐದು ವರ್ಷಗಳಲ್ಲೇ ಕಳೆದೆರಡು ದಿನಗಳಿಂದ ಮೊದಲ ಬಾರಿಗೆ ಬಾಳೆಹಣ್ಣಿನ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.

ಬೆಂಗಳೂರಿನ ಸಗಟು ಮಾರುಕಟ್ಟೆಗಳಲ್ಲಿ ಏಲಕ್ಕಿ ಬಾಳೆಹಣ್ಣಿನ ಬೆಲೆ ಕೆಜಿಗೆ ₹ 65 ರಷ್ಟಿದೆ. ಹಾಪ್‌ಕಾಮ್ಸ್‌ ಸೇರಿದಂತೆ ಹಲವು ಚಿಲ್ಲರೆ ಅಂಗಡಿಗಳಲ್ಲಿ ₹ 90 ದಾಟಿದೆ. ಆನ್‌ಲೈನ್‌ ಮಾರುಕಟ್ಟೆಗಳಲ್ಲಿ ಕೆಜಿಗೆ ₹ 100ರ ಗಡಿ ದಾಟಿದೆ. ಮಾರುಕಟ್ಟೆಗಳಲ್ಲಿ ಇನ್ನೂ ಆರು ತಿಂಗಳ ಕಾಲ ಬಾಳೆಹಣ್ಣಿನ ದರ ಸ್ವಲ್ಪ ಹೆಚ್ಚು ಕಡಿಮೆ ಇಷ್ಟೇ ಬೆಲೆ ಇರುವ ನಿರೀಕ್ಷೆ ಇದೆ. ಐದು ವರ್ಷಗಳಲ್ಲಿ ಮೊದಲ ಬಾರಿಗೆ, ಬಾಳೆಹಣ್ಣಿನ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿವೆ.

ಮಾರುಕಟ್ಟೆಗಳಲ್ಲಿ ಬಾಳೆಹಣ್ಣಿನ ಆವಕ ಪ್ರಮಾಣ ತೀವ್ರವಾಗಿ ಇಳಿಕೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕೆಲ ವರ್ಷಗಳಿಂದ ಬೆಲೆ ಸಿಗದೇ ಕಂಗಾಲಾದ ರೈತರು ಬಾಳೆ ಬೆಳೆಯುವುದನ್ನು ಕೈಬಿಟ್ಟಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಈ ಸುದ್ದಿ ಓದಿದ್ದೀರಾ:? ಭದ್ರಾ ಮೇಲ್ದಂಡೆ ಯೋಜನೆ | ರಾಷ್ಟ್ರೀಯ ಯೋಜನೆ ಮಾನ್ಯತೆಗೆ ಶೀಘ್ರದಲ್ಲೇ ಕೂಡಿ ಬರಲಿದೆ ಕಾಲ

ಮಾರ್ಚ್‌ನಿಂದ ಈವರೆಗೆ ಬಾಳೆಹಣ್ಣಿನ ದರ ದುಪ್ಪಟ್ಟಾಗಿದ್ದು, ಚಿಲ್ಲರೆ ಅಂಗಡಿಗಳಲ್ಲಿ ಒಂದು ಕೆಜಿಗೆ 100 ರೂಪಾಯಿಯ ಆಸುಪಾಸಿದೆ. ಬೆಂಗಳೂರಿನ ಬಿನ್ನಿ ಮಿಲ್ ಬಾಳೆಹಣ್ಣು ಸಗಟು ಮಾರುಕಟ್ಟೆಗೆ ನಿತ್ಯ 250 ಟನ್ ಬಾಳೆಹಣ್ಣು ಆವಕವಾಗುತ್ತಿತ್ತು. ಆದರೆ ಪ್ರಸ್ತುತ 90 ರಿಂದ 100 ಟನ್ ಬಂದಿಳಿಯುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಕಾಲದಲ್ಲಿ ಲಾಕ್‌ಡೌನ್ ಪರಿಣಾಮ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇರದೇ ದರ ಕುಸಿತದಿಂದ ಕಳೆದೆರಡು ವರ್ಷಗಳಿಂದ ತೀವ್ರ ನಷ್ಟ ಅನುಭವಿಸಿದ್ದರಿಂದ ಬಾಳೆ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ. ಪೂರೈಕೆಯಲ್ಲಿ ವ್ಯತ್ಯಯವಾಗಲು ಇದು ಸಹ ಕಾರಣವೆಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ. 

“ಈ ಹಿಂದೆ ಮಾರುಕಟ್ಟೆಗೆ ದೊಡ್ಡ-ದೊಡ್ಡ ಲಾರಿಗಳಲ್ಲಿ ಲೋಡ್‌ಗಟ್ಟಲೇ ಬಂದಿಳಿಯುತ್ತಿದ್ದ ಬಾಳೆಹಣ್ಣಿನ ಪ್ರಮಾಣವೀಗ ಕುಸಿದಿದ್ದು, ಸಣ್ಣ ಪಿಕ್-ಅಪ್ ವಾಹನಗಳಲ್ಲಿ ಬರುತ್ತಿದೆ” ಎಂದು ಬೆಂಗಳೂರಿನ ಕೆಆರ್ ಮಾರುಕಟ್ಟೆಯ ಬಾಳೆಹಣ್ಣು ಸಗಟು ವ್ಯಾಪಾರಿಯೊಬ್ಬರು ಹೇಳಿಕೊಂಡರು. 

ಬಾಳೆಹಣ್ಣುಗಳು ವಾರ್ಷಿಕ ಬೆಳೆಯಾದ್ದರಿಂದ ಬೆಲೆಗಳು ಶೀಘ್ರ ಕಡಿಮೆಯಾಗುವುದಿಲ್ಲ ಮತ್ತು ಮುಂದಿನ ವರ್ಷದ ಆರಂಭದ ವೇಳೆ ಕಡಿಮೆಯಾಗಬಹುದು. ಮುಂದಿನ ತಿಂಗಳಲ್ಲಿ ಶ್ರಾವಣ ಮಾಸ, ಮತ್ತಿತರ ಸಾಲು-ಸಾಲು ಹಬ್ಬಗಳ ಕಾಲದಲ್ಲಂತೂ ಬಾಳೆಹಣ್ಣಿನ ದರ ಇಳಿಕೆ ಸಾಧ್ಯವಿಲ್ಲ ಎಂಬುದು ವ್ಯಾಪಾರಸ್ಥರ ಅನುಭವ ಮಾತು. 

Image
Binny Mill Banana Market two

ಸಗಟು ಮಾರುಕಟ್ಟೆಗಳಲ್ಲಿ ಏಲಕ್ಕಿ ಬಾಳೆ ₹ 60- 65, ರೋಬಸ್ಟಾ ಕೆಜಿಗೆ ₹ 20-23 ರೂಪಾಯಿ ಇದೆ. ನೇಂದ್ರ ಬಾಳೆಗೆ ₹ 55- 60, ಸಿ ಹಂದರಕ್ಕೆ ₹ 40- 45 ಇದೆ. 
ಕಳೆದ ಏಳು ವರ್ಷಗಳ ಅವಧಿಯಲ್ಲೇ ಅಂದಾಜು ಶೇಕಡಾ 50ರಷ್ಟು ಬೆಲೆ ಏರಿಕೆಯಾಗಿದೆ ಎಂದು ಬಾಳೆಹಣ್ಣು ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೆ ಜಿ ಪುರುಷೋತ್ತಮ್ ಅವರು ತಿಳಿಸಿದ್ದಾರೆ. 

ಬಡವರು- ಮಧ್ಯಮ ವರ್ಗ, ಶ್ರೀಮಂತರೆಲ್ಲರಿಗೆ ಸುಲಭ ದರದಲ್ಲಿ ಕೈಗೆಟಕುವ ಹಣ್ಣುಗಳಲ್ಲಿ ಬಾಳೆಹಣ್ಣು ಒಂದು. ಆದರೆ ಬಹುತೇಕ ಜನಸಾಮಾನ್ಯರ ಆರೋಗ್ಯದ ಗುಟ್ಟು ಬಾಳೆಹಣ್ಣು ಗ್ರಾಹಕರ ಪಾಲಿಗೆ ದುಬಾರಿಯಾಗಿದೆ. ಊಟವಾದ ಮೇಲೆ ಒಂದು ಹಣ್ಣು ತಿಂದೇ ಮಲಗುವವರಿಗೆ ನಿದ್ದೆಗೆಡಿಸುವ ಸಂಗತಿ ಇದು.

ನಿಮಗೆ ಏನು ಅನ್ನಿಸ್ತು?
2 ವೋಟ್