ಅಗ್ನಿಪಥ ಯೋಜನೆ | ಜೂ.24ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ದೇಶವ್ಯಾಪಿ ಪ್ರತಿಭಟನೆ

SKM
  • ಜಿಲ್ಲೆ, ತಾಲೂಕು ಕಚೇರಿ ಮುಂದೆ ಶಾಂತಿಯುತ ಧರಣಿ - ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಕೆ
  • 'ಅಗ್ನಿಪಥ್‌ ಯೋಜನೆ' - ರೈತರ ಮೇಲೆ ಸೇಡು ತೀರಿಸಿಕೊಳ್ಳುವ ಮತ್ತೊಂದು ದುರುದ್ದೇಶದ ನಡೆ

ಅಗ್ನಿವೀರರ ನೇಮಕಾತಿ ಆರಂಭವಾಗುವ ಜೂನ್ 24ರಂದು ದೇಶಾದಾದ್ಯಂತ ಎಲ್ಲ ಜಿಲ್ಲೆ, ತಾಲ್ಲೂಕು ಕಚೇರಿಗಳ ಮುಂದೆ ಪ್ರತಿಭಟನಾ ಸಭೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.

ಹರಿಯಾಣದ ಕರ್ನಾಲ್‌ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಮನ್ವಯ ಸಮಿತಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಅಂದು "ಜೈ ಜವಾನ್ ಜೈ ಕಿಸಾನ್ "ಘೋಷಣೆಗಳೊಂದಿಗೆ ಶಾಂತಿಯುತ ಪ್ರತಿಭಟನಾ ಧರಣಿ ನಡೆಸಿದ ನಂತರ ಸಶಸ್ತ್ರ ಪಡೆಯ ಕಮಾಂಡರ್‌, ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲು ಕಿಸಾನ್‌ ಮೋರ್ಚಾ ನಿರ್ಧರಿಸಿದೆ.

ಯುವ ಸಮುದಾಯ, ಸಾಮೂಹಿಕ ಸಂಘಟನೆಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ದೇಶದಾದ್ಯಂತ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಮಾಡಿದೆ.

ಸಶಸ್ತ್ರ ಪಡೆ ನೇಮಕಾತಿಗೆ ತರಲಾದ 'ಅಗ್ನಿಪಥ' ಯೋಜನೆ ವಿರುದ್ಧ ದೇಶ ವ್ಯಾಪಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಬೆಂಬಲಿಸಿ ಸಂಯುಕ್ತ ಕಿಸಾನ್ ಮೋರ್ಚಾವೂ ಪ್ರತಿಭಟನೆ ಹಮ್ಮಿಕೊಂಡಿದೆ.

'ಅಗ್ನಿಪಥ' ರೈತ ವಿರೋಧಿ, ದೇಶ ವಿರೋಧಿ ಮಿಲಿಟರಿ ಯೋಜನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಸಂಯುಕ್ತ ಮೋರ್ಚಾ, ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುವಂತೆ ರೈತ ಸಮುದಾಯಕ್ಕೆ ವಿನಂತಿಸಿದೆ.

'ಜೈ ಜವಾನ್‌-ಜೈ ಕಿಸಾನ್' ಘೋಷಣೆಯ ಸ್ಫೂರ್ತಿಯನ್ನು ಧ್ವಂಸ ಮಾಡಲು ಕೇಂದ್ರಸರ್ಕಾರ ಕಟಿಬದ್ಧವಾದಂತಿದೆ. ಈ ಹೋರಾಟದಲ್ಲಿ ಸೈನಿಕರ ಹೆಗಲಿಗೆ-ಹೆಗಲಾಗಿ ನಿಲ್ಲುವುದು ರೈತ ಚಳವಳಿಯ ಕರ್ತವ್ಯವಾಗಿದೆ ಎಂದು ಕಿಸಾನ್‌ ಮೋರ್ಚಾ ಭಾವಿಸಿದೆ. ಹೀಗಾಗಿ ಜೂನ್ 24ರಂದು ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.

'ಅಗ್ನಿಪಥ' ಯೋಜನೆ ಜಾರಿಗೆ ತರುವ ಮೂಲಕ ದೇಶದ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ರಾಷ್ಟ್ರದ ಭದ್ರತೆ, ನಿರುದ್ಯೋಗಿ ಯುವಕರ ಕನಸಿಗೆ ಕಲ್ಲು ಹಾಕುತ್ತಿದೆ. ದೇಶದ ರೈತ ಕುಟುಂಬಗಳ ಕನಸಿಗೆ ತೀವ್ರ ಭಂಗ ಉಂಟು ಮಾಡಿದೆ. ದೇಶದ ಯೋಧರೆಂದರೆ ಸಮವಸ್ತ್ರ ಧರಿಸಿದ ರೈತರು ಎಂದು ಅಭಿಪ್ರಾಯ ಪಡುತ್ತದೆ.

ಈ ಸುದ್ದಿ ಓದಿದ್ದೀರಾ:? ಮೈಸೂರು | ಪ್ರಧಾನಿ ಕಾರ್ಯಕ್ರಮದಲ್ಲಿ ಹಸಿರು ಶಾಲಿಗೆ ನಿರ್ಬಂಧ!

ಬಹುತೇಕ ಸೈನಿಕರು ರೈತ ಕುಟುಂಬಗಳಿಂದ ಬಂದವರು. ಸೇನಾಸೇರ್ಪಡೆ ಅವಕಾಶವೆಂಬುದು ಲಕ್ಷಾಂತರ ರೈತ ಕುಟುಂಬಗಳ ಹೆಮ್ಮೆ, ಆರ್ಥಿಕ ಭದ್ರತೆ ಆಧಾರದ ಧ್ಯೋತಕವಾಗಿದೆ. "ಒಂದು ರ‍್ಯಾಂಕ್ ಒಂದು ಪಿಂಚಣಿ " ಭರವಸೆ ಮೇರೆಗೆ ವಿಜಯೋತ್ಸವ ಪ್ರಚಾರಾಂದೋಲನಕ್ಕೆ ಮಾಜಿ ಸೈನಿಕರನ್ನು ಅಣಿಗೊಳಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಗ 'ನೋ ರ‍್ಯಾಂಕ್ ನೋ ಪೆನ್ಸನ್' (ಶ್ರೇಣಿಯೂ ಇಲ್ಲ; ಪಿಂಚಣಿಯೂ ಇಲ್ಲ) ಎಂಬ ಈ ಯೋಜನೆ ಆರಂಭಿಸಿರುವುದು ದೇಶ ತಲೆ ತಗ್ಗಿಸುವ ವಿಷಯವಾಗಿದೆ ಎಂದಿದೆ.

ಸೈನ್ಯದ ನಿಯಮಿತ ನೇಮಕಾತಿಯಲ್ಲಾಗಿರುವ ಬೃಹತ್ ಪ್ರಮಾಣದ ಕಡಿತವು ಸೈನ್ಯದಲ್ಲಿ ಸೇವೆ ಸಲ್ಲಿಸುವ ಹಲವು ವರ್ಷಗಳ ಕನಸು ಕಾಣುತ್ತಿದ್ದ ರೈತರ ಮಕ್ಕಳಿಗೆ ಬಗೆದ ದ್ರೋಹವಾಗಿದೆ. ಈ ಯೋಜನೆಯ "ಅಖಿಲ ಭಾರತ ಎಲ್ಲ ಶ್ರೇಣಿ" ನಿಯಮದಡಿ ನೇಮಕಾತಿಯಲ್ಲಿ ರೈತ ಚಳವಳಿ ಕ್ರಿಯಾಶೀಲವಾಗಿರುವ ಪ್ರದೇಶಗಳ ನೇಮಕಾತಿ ಪ್ರಮಾಣವನ್ನು ದೊಡ್ಡ ರೀತಿಯಲ್ಲಿ ಕಡಿತ ಮಾಡಿರುವುದು ಆಕಸ್ಮಿಕವಾಗಿ ಆಗಿರುವಂಥದ್ದಲ್ಲ. ರೈತ ಚಳವಳಿಯ ಕಾರಣದಿಂದ ಸೋತು ಕಂಗಾಲಾಗಿದ್ದ ಈ ಸರ್ಕಾರ, ರೈತರ ಮೇಲೆ ಸೇಡು ತೀರಿಸಿಕೊಳ್ಳಲು ಆರಂಭಿಸಿದ ಮತ್ತೊಂದು ದುರುದ್ದೇಶದ ಆಟವಾಗಿದೆ ಎಂದು ಕಿಸಾನ್‌ ಮೋರ್ಚಾ ಆರೋಪಿಸಿದೆ. 

ಯೋಜನೆ ವಿರೋಧಿಸಿ ದೇಶದಲ್ಲಿ ಯುವಕರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಲು ಈ ಶಾಂತಿಯುತ ಪ್ರತಿಭಟನೆಯ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಮಾಡಿಕೊಳ್ಳುತ್ತದೆ. ದೇಶದ ಎಲ್ಲ ಸಾಮೂಹಿಕ ಸಂಘಟನೆಗಳು, ಸಮೂಹ ಚಳವಳಿಗಳು, ರಾಜಕೀಯ ಪಕ್ಷಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆಯಲ್ಲಿ ವಿನಂತಿಸಿದೆ. 

ಸಂಯುಕ್ತ ಕಿಸಾನ್ ಮೋರ್ಚಾದ ಮುಂದಿನ ರಾಷ್ಟ್ರೀಯ ಸಭೆ ಜುಲೈ 3 ಭಾನುವಾರದಂದು ಗಾಜಿಯಾಬಾದ್‌ನಲ್ಲಿ ನಡೆಯಲಿದೆ. ಮುಂದಿನ ಕಾರ್ಯಕ್ರಮ ಮತ್ತು ಸಂಘಟನೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. 

ಸಂಯುಕ್ತ ಕಿಸಾನ್‌ ಮೋರ್ಚಾದ ಡಾ ದರ್ಶನ್ ಪಾಲ್, ಹನನ್ನ್ ಮೊಲ್ಲಾ , ಜಗ್‌ಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರಹಾನ್‌, ಶಿವಕುಮಾರ್ ಶರ್ಮಾ (ಕಕ್ಕಾಜಿ) ಯಧುವೀರ್ ಸಿಂಗ್, ಯೋಗೇಂದ್ರ ಯಾದವ್, ಇತರರು ಸಭೆಯಲ್ಲಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್