
- 1979ರಲ್ಲಿ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ
- ಜಾಮೀನಿನ ಮೇಲೆ ಹೊರಗಿದ್ದ ಅಪರಾಧಿಗೆ ಜೈಲು ಶಿಕ್ಷೆ ಅನುಭವಿಸಲು ಆದೇಶ
43 ವರ್ಷಗಳ ಹಿಂದೆ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ವಿಧಿಸಿದ್ದ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ.
ಅತ್ಯಾಚಾರ ಪ್ರಕರಣದ ಸಾಕ್ಷಾಧಾರಗಳು ವಿಶ್ವಾಸಾರ್ಹವೆಂದಿರುವ ಹೈಕೋರ್ಟ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಅಪರಾಧಿಗೆ ಉಳಿದ ಶಿಕ್ಷೆಯನ್ನು ಅನುಭವಿಸಲು ಜೈಲಿಗೆ ಕಳುಹಿಸುವಂತೆ ಸೂಚಿಸಲಾಗಿದೆ.
ನ್ಯಾಯಮೂರ್ತಿ ಸಮಿತ್ ಗೋಪಾಲ್ ಅವರಿದ್ದ ಪೀಠವು ಆರೋಪಿಯ ವಯಸ್ಸು, ಆತ ಮಾಡಿದ ಅಪರಾಧದಲ್ಲಿ ಯಾವುದೇ ಪ್ರಯೋಜನವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದಿದೆ. ಈ ಮೂಲಕ ವಿಚಾರಣಾ ನ್ಯಾಯಾಲಯವು ನೀಡಿದ್ದ 6 ವರ್ಷಗಳ ಜೈಲು ಶಿಕ್ಷೆ ತೀರ್ಪು ಪ್ರಶ್ನಿಸಿ ಅಪರಾಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.
ಪ್ರಕರಣದ ಸಾಕ್ಷ್ಯವನ್ನು ಪರಿಶೀಲಿಸಿದ ನ್ಯಾಯಾಲಯ, ವೈದ್ಯರು ಮತ್ತು ತನಿಖಾಧಿಕಾರಿಯನ್ನು ಪರೀಕ್ಷಿಸಲಾಗಿಲ್ಲ ಎಂಬ ದೋಷಾರೋಪಣೆಯ ವಾದವನ್ನು ಆರಂಭದಲ್ಲಿ ತಿರಸ್ಕರಿಸಿತು. ಸಂತ್ರಸ್ತೆಯ ಬಟ್ಟೆಗಳ ಮೇಲಿನ ರಕ್ತದ ಕಲೆ, ಆಕೆಯ ವೈದ್ಯಕೀಯ ಪರೀಕ್ಷೆಯ ವರದಿ, ಸ್ಥಳ ಮಹಜರ್ ಹಾಗೂ ಚಾರ್ಜ್ಶೀಟ್ ಎಲ್ಲವನ್ನು ಪರಿಶೀಲಿಸಿದ ನ್ಯಾಯಾಲಯವು, ಆರೋಪಿಯು ತಾನು ಎಸಗಿದ್ದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಗಮನಿಸಿತು.
ಆರೋಪಿಯ ವಯಸ್ಸಿನ ವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು, ಮೇಲ್ಮನವಿದಾರನ ವಯಸ್ಸು ಶಿಕ್ಷೆಯ ಪ್ರಶ್ನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಕರಣವು ಸಮಂಜಸವಾಗಿದ್ದು, ಆರೋಪ ಸಾಬೀತಾಗಿದೆ. ಆದ್ದರಿಂದ ಆತ ಶಿಕ್ಷೆ ಪೂರ್ಣಗೊಳಿಸಬೇಕು ಎಂದಿದೆ.
ಈ ಸುದ್ದಿ ಓದಿದ್ದೀರಾ?: ‘ಚಿಲುಮೆ’ ಸಂಸ್ಥೆ ಮೂಲಕ ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಸರ್ಕಾರದ ಸಂಚು: ಸಿದ್ದರಾಮಯ್ಯ ಗಂಭೀರ ಆರೋಪ
ಏನಿದು ಪ್ರಕರಣ?
10 ವರ್ಷದ ಬಾಲಕಿಯು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ 1979ರ ಅಕ್ಟೋಬರ್ 4ರಂದು ನಡೆದಿತ್ತು.
ಈ ಘಟನೆ ನಡೆದ ದಿನವೇ, ಆರೋಪಿ ಓಂ ಪ್ರಕಾಶ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376ರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಅದೇ ವರ್ಷ ಡಿಸೆಂಬರ್ನಲ್ಲಿ ಆರೋಪಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಮೀರತ್ನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು 1982ರ ಜುಲೈ 2ರಂದು ಆರೋಪಿಯನ್ನು ತಪಿತಸ್ಥ ಎಂದು ಘೋಷಿಸಿ, ಆರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ವಿಚಾರಣಾ ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸಿ, ಅಪರಾಧಿಯೂ ಅದೇ ವರ್ಷ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದ ವೈದ್ಯರು ಮತ್ತು ತನಿಖಾಧಿಕಾರಿಯನ್ನು ವಿಚಾರಣೆ ನಡೆಸಿಲ್ಲ. ಹಾಗೆಯೇ ಪ್ರಕರಣದ ಪ್ರತ್ಯಕ್ಷದರ್ಶಿಗಳನ್ನೂ ವಿಚಾರಣೆ ವೇಳೆ ಹಾಜರು ಪಡಿಸಿರಲಿಲ್ಲ ಎಂಬುದು ಅಪರಾಧಿಯ ವಾದವಾಗಿತ್ತು.
ಶಿಕ್ಷೆಗೆ ಗುರಿಯಾದಾಗ ಅಪರಾಧಿಗೆ 28 ವರ್ಷ ವಯಸ್ಸಾಗಿತ್ತು. ಪ್ರಸ್ತುತ ಆತನ ವಯಸ್ಸು 68. ಪ್ರಕರಣದ ನಡೆದು 43 ವರ್ಷಗಳೇ ಕಳೆದಿವೆ. ಆದ್ದರಿಂದ ಅರ್ಜಿದಾರರನ್ನು ಈಗ ಜೈಲಿಗೆ ಕಳುಹಿಸುವುದು ಕಠಿಣವಾದುದು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.