ತೀಸ್ತಾ ಸೆಟಲ್‌ವಾಡ್ ಮೇಲಿನ ಆರೋಪ ಅಸಂಬದ್ಧ, ಅಪ್ರಸ್ತುತ ಎಂದ ಸಿಜೆಪಿ

Teesta Setalvad
  • ಭಾರತದಲ್ಲಿ ಮಾನವ ಹಕ್ಕುಗಳಿಗಾಗಿ ಕಳೆದ 20 ವರ್ಷಗಳಿಂದ ಕಾರ್ಯನಿರತ ಸಿಜೆಪಿ
  • ತೀಸ್ತಾ ಅವರು ಅಹ್ಮದ್‌ ಪಟೇಲ್‌ ಅವರಿಂದ ಹಣ ಪಡೆದಿರುವ ಆರೋಪ ಅಸಂಬದ್ಧ

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಅವರ ಮೇಲಿನ ಪಿತೂರಿ ಆರೋಪಗಳು ಅಸಂಬದ್ಧ ಮತ್ತು ಅಪ್ರಸ್ತುತ ಎಂದು ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು (ಸಿಜೆಪಿ) ಸಂಸ್ಥೆಯು ಹೇಳಿದೆ. 

ಈ ಕುರಿತು ಪತ್ರ ಬರೆದಿರುವ ಸಂಸ್ಥೆಯ ಟ್ರಸ್ಟಿಗಳು, "ತೀಸ್ತಾ ಅವರ ಮೇಲೆ ಉದ್ದೇಶಪೂರ್ವಕವಾಗಿ ಆರೋಪಗಳನ್ನು ಹೊರಿಸಲಾಗಿದೆ" ಎಂದು ಆರೋಪಿಸಿದ್ದಾರೆ. 

ಸಿಜೆಪಿ ಸಂಸ್ಥೆಯು ಭಾರತಾದ್ಯಂತ ಮಾನವ ಹಕ್ಕುಗಳಿಗಾಗಿ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ತೀಸ್ತಾ ಅವರೂ ಸಿಜೆಪಿಯ ಟ್ರಸ್ಟಿಗಳಲ್ಲಿ ಒಬ್ಬರು. ಜೊತೆಗೆ ಕಾರ್ಯದರ್ಶಿಯೂ ಆಗಿದ್ದಾರೆ. 

2002ರ ಗುಜರಾತ್ ಗಲಭೆ ಸಂಬಂಧ ಪ್ರಧಾನಿ ಮೋದಿ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಲು ಪಿತೂರಿ ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂಬ ಆರೋಪದಲ್ಲಿ ಗುಜರಾತ್‌ ಪೊಲೀಸರು ಜೂನ್‌ 25ರಂದು ತೀಸ್ತಾ ಅವರನ್ನು ಬಂಧಿಸಿದ್ದರು.  ಸದ್ಯ ತೀಸ್ತಾ ಅಹ್ಮದಾಬಾದ್‌ನ ಸಬರಮತಿ ಮಹಿಳಾ ಕಾರಾಗೃಹದಲ್ಲಿದ್ದಾರೆ. 

“ತೀಸ್ತಾ ಬಂಧನದ ವೇಳೆ ಅವರ ಮೇಲೆ ನಡೆಸಿರುವ ಹಲ್ಲೆಯನ್ನು ಬಲವಾಗಿ ವಿರೋಧಿಸುತ್ತೇವೆ. ತೀಸ್ತಾ ಅವರ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಎಂದು ನಾವು ನಂಬುತ್ತೇವೆ. ಗುಜರಾತ್‌ ಗಲಭೆಯ ನಂತರ ಸಂತ್ರಸ್ತರಿಗೆ ನೆರವು ನೀಡಿದ್ದಕ್ಕಾಗಿ ಅವರನ್ನು ಗುರಿಯಾಗಿಸಲಾಗಿದೆ” ಎಂದು ಸಂಸ್ಥೆಯ ಟ್ರಸ್ಟಿ ಸೆಡ್ರಿಕ್‌ ಪ್ರಕಾಶ್‌ ಅವರು ಪತ್ರದಲ್ಲಿ ಆರೋಪಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಚರಂಡಿ, ಕೊಳಕು ತೊಟ್ಟಿಗಳ ಸ್ವಚ್ಛತೆ ವೇಳೆ 347 ಕಾರ್ಮಿಕರು ಸಾವು: ಕೇಂದ್ರ ಸರ್ಕಾರ

“ನಾವು ಗುಜರಾತ್‌ ಪೊಲೀಸ್‌ ದಾಖಲಿಸಿದ ಎಫ್‌ಐಆರ್‌ ಮತ್ತು ಜಾಮೀನು ಅರ್ಜಿಗೆ ಉತ್ತರವಾಗಿ ಸಲ್ಲಿಸಿರುವ ಪ್ರಮಾಣಪತ್ರವನ್ನು ಗಮನಿಸಿದ್ದೇವೆ. ಇದರಲ್ಲಿ ತೀಸ್ತಾ ಅವರು ಪಿತೂರಿಗಾಗಿ ಅಹ್ಮದ್‌ ಪಟೇಲ್‌ ಅವರಿಂದ ಹಣ ಪಡೆದಿದ್ದಾರೆ ಎಂಬ ಆರೋಪವು ಅಸಂಬದ್ಧ. ಅಲ್ಲಿ ಯಾವುದೇ ಪಿತೂರಿ ಇರಲಿಲ್ಲ” ಎಂದು ಸೆಡ್ರಿಕ್‌ ಹೇಳಿದ್ದಾರೆ. 

“ಗೋಧ್ರಾ ಗಲಭೆಯ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದು ಸೆಟಲ್‌ವಾಡ್‌ ಅವರ ಗುರಿಯಾಗಿತ್ತು. ಸಂತ್ರಸ್ತರಿಗೆ ಸಹಾಯ ಮಾಡುವುದು ಒಂದು ಅಪರಾಧವಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

“ತೀಸ್ತಾ ದಾಖಲೆಗಳನ್ನು ತಿರುಚಿದ್ದಾರೆ, ಸುಳ್ಳು ಸಾಕ್ಷ್ಯಗಳನ್ನು ಹುಟ್ಟುಹಾಕಿದ್ದಾರೆ ಎಂಬುದನ್ನು ನಾವು ನಂಬುವುದಿಲ್ಲ. ಅವರು ಸತ್ಯವನ್ನು ಮಾತ್ರ ನುಡಿದಿದ್ದಾರೆ. ಸಂತ್ರಸ್ತರ ಪರ ನ್ಯಾಯಕ್ಕಾಗಿ ಹೋರಾಡಿದ್ದಾರೆ” ಎಂದು ಸೆಡ್ರಿಕ್‌ ಅವರು ತೀಸ್ತಾರನ್ನು ಬೆಂಬಲಿಸಿದ್ದಾರೆ. 

“ನಾವು ತೀಸ್ತಾ ಅವರ ಪರ ನಿಲ್ಲುತ್ತೇವೆ. ಈ ದೇಶದ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೆ. ಅವರು ಶೀಘ್ರ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ. ಜೊತೆಗೆ ಅವರ ಮೇಲಿನ ಪ್ರಕರಣ ರದ್ದಾಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಸೆಡ್ರಿಕ್‌ ತಿಳಿಸಿದ್ದಾರೆ. 

ಈ ಪತ್ರದಲ್ಲಿ ಸೆಡ್ರಿಕ್‌ ಜೊತೆ ಇತರ ಟ್ರಸ್ಟಿಗಳಾದ ಚಿತ್ರಾ ಪಾಲೀಕರ್‌, ಡಾಲ್ಫಿ ಡಿಸೋಜಾ, ಗುಲಾಮ್‌ ಎಂ ಪೆಶಿಮಾಮ್, ಜಾವೇದ್‌ ಆನಂದ್‌, ರಘುನಂದನ್‌ ಮಾಲುಸ್ತೆ ಮತ್ತು ಶಕುಂತಲಾ ಕುಲಕರ್ಣಿ ಸಹಿ ಹಾಕಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್