10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಅಮೆಜಾನ್‌

  • ಕೆಲ ತ್ರೈಮಾಸಿಕಗಳಿಂದ ವರಮಾನ ಕೊರತೆ ಎದುರಿಸುತ್ತಿರುವ ಅಮೆಜಾನ್‌
  • ಶೇಕಡಾ ಒಂದರಷ್ಟು ಉದ್ಯೋಗಿಗಳ ಕಡಿತಕ್ಕೆ ಮುಂದಾದ ಇ-ಕಾಮರ್ಸ್‌ ದೈತ್ಯ

 

ಜಾಗತಿಕ ಟೆಕ್‌ ಕಂಪನಿಗಳಲ್ಲಿ ‘ಉದ್ಯೋಗಿಗಳ ವಜಾ’ ಪರ್ವ ಆರಂಭವಾಗಿದೆ. ಪ್ರಸ್ತುತ ಇ- ಕಾಮರ್ಸ್‌ ದೈತ್ಯ ಎಂದೇ ಕರೆಯುವ ಅಮೆಜಾನ್‌ ಕೂಡ ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

Eedina App

ಇದಕ್ಕೆ ಮೊದಲು, ಟ್ವಿಟರ್‌ ಖರೀದಿಸಿದ ಕೇವಲ ಒಂದು ವಾರದಲ್ಲಿಯೇ ಎಲಾನ್‌ ಮಸ್ಕ್‌ ಶೇ. 50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಅದರ ಬೆನ್ನಲ್ಲೇ ಫೇಸ್‌ಬುಕ್‌ನ ಮಾತೃ ಕಂಪನಿ ಮೆಟಾ ಕೂಡ ಶೇ. 13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. 

ಕಳೆದ ಕೆಲವು ತ್ರೈಮಾಸಿಕಗಳಿಂದ ವರಮಾನ ಕಡಿಮೆಯಾಗಿದೆ ಎಂದು ಅಮೆಜಾನ್‌ ಕಂಪನಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಕಂಪನಿಯ ವೆಚ್ಚ ಕಡಿತಗೊಳಿಸಲು ಈ ವಾರದಲ್ಲೇ ಸುಮಾರು 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

AV Eye Hospital ad

ಜಾಗತಿಕವಾಗಿ 1.6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿರುವ ಕಂಪನಿ ಅಮೆಜಾನ್. ಪ್ರಸ್ತುತ 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಲ್ಲಿ, ಶೇ. 1ರಷ್ಟು ಸಿಬ್ಬಂದಿಗಳು ಕಡಿಮೆಯಾಗಲಿದ್ದಾರೆ. ಅಮೆಜಾನ್‌ ಇತಿಹಾಸದಲ್ಲಿಯೇ ಅತಿದೊಡ್ಡ ಉದ್ಯೋಗ ಕಡಿತ ಇದಾಗಲಿದೆ. ಚಿಲ್ಲರೆ ಸಗಟು ವ್ಯಾಪಾರ ವಿಭಾಗ, ಮಾನವ ಸಂಪನ್ಮೂಲ ವಿಭಾಗ, ಸಾಧನಗಳ ತಂಡ ಹಾಗೂ ಅಲೆಕ್ಸಾ ವಾಯ್ಸ್‌ ಅಸಿಸ್ಟಿಂಟ್‌ ತಂಡ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ಉದ್ಯೋಗದಿಂದ ವಜಾಗೊಳ್ಳಲಿದ್ದಾರೆ.

ತಿಂಗಳ ಅವಧಿಯ ಪರಿಶೀಲನೆಯ ನಂತರ, ಕೆಲವು ಲಾಭದಾಯಕವಲ್ಲದ ಘಟಕಗಳ ಉದ್ಯೋಗಿಗಳಿಗೆ ಕಂಪನಿಯೊಳಗೆ ಇತರ ಅವಕಾಶಗಳನ್ನು ಹುಡುಕುವಂತೆ ಅಮೆಜಾನ್ ಎಚ್ಚರಿಸಿದೆ. ಅತಿಹೆಚ್ಚು ವ್ಯಾಪಾರ ನಡೆಯುವ ಸಮಯದಲ್ಲಿ ನಿಧಾನಗತಿಯ ಆದಾಯ ಹೊಂದಿರುವ ಬಗ್ಗೆ ಎಚ್ಚರಿಕೆ ನೀಡಿದ ಕೆಲವೇ ವಾರಗಳ ನಂತರ ಉದ್ಯೋಗಿಗಳ ವಜಾಗೊಳಿಸುವ ವರದಿ ಬಂದಿದೆ. ಇದು ಹೆಚ್ಚಿನ ಮಾರಾಟ ಕಾಣುವ ಅವಧಿ. ಏರುತ್ತಿರುವ ಬೆಲೆಗಳಿಂದಾಗಿ ಗ್ರಾಹಕರು ತಮ್ಮ ವ್ಯವಹಾರಗಳಲ್ಲಿ ಖರ್ಚು ಕಡಿಮೆ ಮಾಡುತ್ತಿರುವುದರಿಂದ ಇ-ಕಾಮರ್ಸ್ ತಾಣಗಳಲ್ಲಿ ಮಾರಾಟ ಕಡಿಮೆಯಾಗಿದೆ.

ಈ ಸುದ್ದಿ ಓದಿದ್ದೀರಾ?: ನವದೆಹಲಿ | ಹಂದಿ ಸಾಕಾಣಿಕೆಯಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟುಗಳ ಕುರಿತು ವರದಿ ಕೇಳಿದ ಸುಪ್ರೀಂ

ಅಮೆಜಾನ್ ಇತ್ತೀಚಿನ ತಂತ್ರಜ್ಞಾನ ಕಂಪನಿಯಾಗಿದ್ದು, ಸಂಭಾವ್ಯ ಆರ್ಥಿಕ ಕುಸಿತ ತಡೆಯಲು ಉದ್ಯೋಗಿ ಕಡಿತಕ್ಕೆ ಮುಂದಾಗಿದೆ. ಕೋವಿಡ್‌ ನಂತರ ಗ್ರಾಹಕರು ಆನ್‌ಲೈನ್‌ನಿಂದ ಆಫ್‌ಲೈನ್‌ ಖರೀದಿಯತ್ತ ಮುಖಮಾಡಿದ್ದಾರೆ. ಇದರಿಂದ ಇ- ಕಾಮರ್ಸ್ ಲೋಕದಲ್ಲಿ ತೀಕ್ಷ್ಣವಾದ ನಿಧಾನಗತಿ ಪ್ರಗತಿ ಆರಂಭವಾಯಿತು. ಅಮೆಜಾನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಜಾಸ್ಸಿ ನಿಧಾನಗತಿಯ ಪ್ರಗತಿ ಮತ್ತು ಆರ್ಥಿಕ ಅನಿಶ್ಚಿತತೆಯ ಮಧ್ಯೆ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ.

11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿರುವ ಮೆಟಾ

ಆದಾಯ ಕುಸಿತದ ನಂತರ ಕಂಪನಿ ವೆಚ್ಚವನ್ನು ಕಡಿಮೆ ಮಾಡಲು 11,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ ಇಂದು (ನವೆಂಬರ್‌ 9) ಪ್ರಕಟಿಸಿತ್ತು.

"ಮೆಟಾ ಇತಿಹಾಸದಲ್ಲಿ ನಾವು ಜಾರಿಗೆ ತಂದ ಕೆಲವು ಬೇಸರದ, ಪ್ರಯಾಸದಾಯಕ ಬದಲಾವಣೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮ ತಂಡದ ಗಾತ್ರವನ್ನು ಶೇ. 13ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದೇವೆ. ನಮ್ಮ ತಂಡದಲ್ಲಿದ್ದ ಪ್ರತಿಭಾವಂತ ಉದ್ಯೋಗಿಗಳಲ್ಲಿ ಸುಮಾರು 11,000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಕೆಲಸದಿಂದ ಕೈಬಿಡಲು ನಿರ್ಧರಿಸಲಾಗಿದೆ” ಎಂದು ಮೆಟಾದ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್‌ ಜುಕರ್‌ಬರ್ಗ್‌ ಬ್ಲಾಗ್‌ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಟ್ವಿಟರ್‌ ಸ್ವಾಧೀನದ ಬೆನ್ನಲ್ಲೇ ಉದ್ಯೋಗಿಗಳಿಗೆ ‘ವಜಾ’ ಮಾಡಿದ್ದ ಎಲಾನ್‌ ಮಸ್ಕ್‌

ಟ್ವಿಟರ್‌ನ ಹೊಸ ಮಾಲೀಕ ಎಲಾನ್‌ ಮಸ್ಕ್‌ ಕಂಪನಿ ಸ್ವಾಧೀನಪಡಿಸಿಕೊಂಡ ಒಂದು ವಾರದೊಳಗೆ, ನವೆಂಬರ್‌ 4ರಂದು ವಿಶ್ವಾದ್ಯಂತ ಕಂಪನಿಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದರು. ಭಾರತ ಮೂಲದ ಮಾಜಿ ಸಿಇಒ ಪರಾಗ್ ಅಗರವಾಲ್, ವಿಜಯಾ ಗದ್ದೆ ಸೇರಿದಂತೆ ಇತರ ಕೆಲವು ಉನ್ನತ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ತಮ್ಮ ಭಾರತದಲ್ಲಿಯೂ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app