ಆಪ್ತರ ಹೆಸರಿನಲ್ಲಿ ಅಮೃತ್‌ ಪೌಲ್‌ ಬೇನಾಮಿ ಆಸ್ತಿ ಸಂಪಾದನೆ ಆರೋಪ: ಸಿಐಡಿ ದಾಳಿ

psi recruitment scam
  • ಬೇನಾಮಿ ಆಸ್ತಿ ಖರೀದಿಗೆ ಅಕ್ರಮ ಹಣ ಹೂಡಿಕೆ ಆರೋಪ
  • ಅಮೃತ್‌ ಪೌಲ್‌ ಆಪ್ತರ ಮನೆ ಮೇಲೆ ಸಿಐಡಿ ದಾಳಿ, ದಾಖಲೆ ವಶಕ್ಕೆ

ಪಿಎಸ್‌ಐ ನೇಮಕ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪದಡಿ ಜೈಲು ಸೇರಿರುವ ಎಡಿಜಿಪಿ ಅಮೃತ್‌ ಪೌಲ್‌ ಅವರಿಗೆ ಅಕ್ರಮ ಆಸ್ತಿ ಸಂಪಾದನೆ ಉರುಳು ಸುತ್ತಿಕೊಂಡಿದೆ. 

ರಿಯಲ್‌ ಎಸ್ಟೇಟ್‌ ಉದ್ಯಮಿ, ಮಹಿಳಾ ರಾಜಕಾರಣಿ ಹಾಗೂ ರಾಸಾಯನಿಕ ಉತ್ಪನ್ನಗಳ ಕಂಪನಿ ಮಾಲೀಕರೊಬ್ಬರ ಹೆಸರಿನಲ್ಲಿ ಅಮೃತ್‌ ಪೌಲ್‌ ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅಮೃತ್‌ ಪೌಲ್‌ ಅವರ ಆಪ್ತರ ಮನೆ ಮೇಲೆ ಸಿಐಡಿ ದಾಳಿ ನಡೆಸಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯೆ ಕಲ್ಪನಾ ಆನಂದ್‌, ಅವರ ಪತಿ ಹುಸ್ಕೂರು ಆನಂದ್‌, ಜಕ್ಕೂರಿನ ಉದ್ಯಮಿ ಶಂಭುಲಿಂಗಪ್ಪ ಅವರ ನಿವಾಸಗಳು, ಕಚೇರಿಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. 

ಆನಂದ್‌ ಅವರು ದೊಡ್ಡಬೆಳವಂಗಲ ರಸ್ತೆಯಲ್ಲಿ ಲೇಔಟ್‌ ನಿರ್ಮಾಣ ಸೇರಿ ಹಲವು ಕಡೆ ಜಮೀನುಗಳನ್ನು ಖರೀದಿ ಮಾಡಿದ್ದಾರೆ. ಇದರಲ್ಲಿ ಅಮೃತ್‌ ಪೌಲ್‌ ಕೂಡ ಹಣ ಹೂಡಿಕೆ ಮಾಡಿರುವ ಅನುಮಾನವಿದೆ. ಹೀಗಾಗಿ ಅವರ ಹುಸ್ಕೂರಿನ ಮನೆ, ದೊಡ್ಡಬಳ್ಳಾಪುರದ ಅವರ ಕಚೇರಿಯಲ್ಲಿ ಶೋಧ ನಡೆಸಲಾಗಿದ್ದು, ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಈ ಸುದ್ದಿ ಓದಿದ್ದೀರಾ?: ಪಿಎಸ್‌ಐ ಅಕ್ರಮ | ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಜಾಮೀನು ಅರ್ಜಿ ವಜಾ

ಜಕ್ಕೂರು ನಿವಾಸಿ ಶಂಭುಲಿಂಗಪ್ಪ ಕೃಷಿ ರಸಾಯನಿಕ ಕಂಪನಿ ನಡೆಸುತ್ತಿದ್ದು, ಅವರಿಗೂ ಅಮೃತ್‌ ಪೌಲ್‌ಗೂ ಹಣಕಾಸಿನ ವ್ಯವಹಾರ ನಡೆದಿದೆ ಎಂದು ತಿಳಿದುಬಂದಿದೆ. 

ಆನಂದ್‌, ಶಂಭುಲಿಂಗಪ್ಪ ಅವರಿಗೆ ತನಿಖಾಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದು, ಕೆಲ ಆಸ್ತಿ ಖರೀದಿ ಸಂಬಂಧ ಸ್ಪಷ್ಟೀಕರಣ ಕೋರಿದ್ದಾರೆ. ಅಲ್ಲದೆ, ಇಂದು ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿದ್ದಾರೆ. 

ಏನಿದು ಪ್ರಕರಣ?

2021ರ ಅಕ್ಟೋಬರ್ 3ರಂದು ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳ 93 ಪರೀಕ್ಷಾ ಕೇಂದ್ರಗಳಲ್ಲಿ 545 ಅಭ್ಯರ್ಥಿಗಳು ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದವು. ಇದರಲ್ಲಿ ಪೊಲೀಸ್‌ ಅಧಿಕಾರಿಗಳು ಸೇರಿ ಘಟಾನುಘಟಿಗಳು ಭಾಗಿಯಾಗಿರುವ ದೂರುಗಳು ಕೇಳಿ ಬಂದಿದ್ದವು. ಈ ಸಂಬಂಧ ಸಿಐಡಿ ಅಮೃತ್‌ಪೌಲ್‌ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್