'ಪೇ ಸಿಎಂ' ಪೋಸ್ಟರ್ | ಐವರ ಬಂಧನ ; ಪ್ರಕರಣದ ತನಿಖೆ ಸಿಸಿಬಿ ಹೆಗಲಿಗೆ

  • ಬೊಮ್ಮಾಯಿ ವಿರುದ್ಧ ʼಪೇ ಸಿಎಂ ಪೋಸ್ಟರ್‌ʼ ಅಭಿಯಾನ
  • ಐವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಪೊಲೀಸರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಬೆಂಗಳೂರಿನಲ್ಲಿ ಪೇ ಸಿಎಂ ಪೋಸ್ಟರ್‌ಗಳನ್ನು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದಾರೆ. 

ಹೈಗ್ರೌಂಡ್ಸ್‌ ಠಾಣಾ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಂಧಿತರನ್ನು ಕಾಳಕಯ್ಯ ಅಲಿಯಾಸ್‌ ಸಂಜಯ್‌ (23), ವಿಶ್ವಮೂರ್ತಿ (33), ಮದನ್‌ ಕುಮಾರ್‌, ಸಿದ್ದಯ್ಯ (21), ವಿನೋದ್‌ ಕುಮಾರ್‌(18) ಎಂದು ಗುರುತಿಸಲಾಗಿದೆ.

ಇನ್ನೂ, ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ನಗರ ಪೊಲೀಸ್‌ ಆಯುಕ್ತ ಸಿ ಎಚ್‌ ಪ್ರತಾಪ್‌ ರೆಡ್ಡಿ ಆದೇಶಿಸಿದ್ದಾರೆ. ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳುವ ಮಾರ್ಗದ ಮೇಖ್ರಿ ಸರ್ಕಲ್, ಜಯಮಹಲ್ ರಸ್ತೆ, ಶೇಷಾದ್ರಿಪುರ ಹಾಗೂ ಹೈ ಗ್ರೌಂಡ್ಸ್‌ ಠಾಣಾ ವ್ಯಾಪ್ತಿಯ ಗೋಡೆಗಳಿಗೆ 'ಪೇ ಸಿಎಂ' ಹೆಸರಿನ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. 

ಈ ಸುದ್ದಿ ಓದಿದ್ದೀರಾ?: ಪೇ ಸಿಎಂ ಪೋಸ್ಟರ್ ಅಭಿಯಾನ | ಕಾಂಗ್ರೆಸ್ಸಿಗರ ಮೇಲೆ ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ

ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಜೆ ಸಿ ನಗರ, ಸಂಜಯನಗರ, ಶೇಷಾದ್ರಿಪುರಂ, ಸದಾಶಿವನಗರ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದ ಆರೋಪದ ಮೇರೆಗೆ ಐದು ಎಫ್ಐಆರ್‌ಗಳು ದಾಖಲಾಗಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್