ಅಸ್ಸಾಂ | 'ಫ್ಲಡ್ ಜಿಹಾದ್' ಆರೋಪ: ಪ್ರವಾಹಕ್ಕೆ ಕಾರಣರಾದರೆಂದು ಐವರು ಮುಸ್ಲಿಮರ ಬಂಧನ!

Assam Flood
  • 20 ದಿನಗಳ ಕಾಲ ಐವರನ್ನು ಬಂಧನದಲ್ಲಿಟ್ಟಿದ್ದ ಅಸ್ಸಾಂ ಪೊಲೀಸರು
  • ದೂರಿಗೆ ಯಾವುದೇ ಪುರಾವೆ ಇಲ್ಲ ಎಂದು ಜಾಮೀನಿನ ಮೇಲೆ ಬಿಡುಗಡೆ

ಅಸ್ಸಾಂನ ಗುವಾಹಟಿ ಸಮೀಪದ ಸಿಲ್ಚಾರ್‌ನ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಭಾರೀ ಪ್ರವಾಹಕ್ಕೆ 'ಫ್ಲಡ್ ಜಿಹಾದ್ (ಪ್ರವಾಹ ಜಿಹಾದ್)' ಕಾರಣ ಎಂದು ಆರೋಪಿಸಿ ಐವರು ಮುಸ್ಲಿಮರನ್ನು ಬಂಧಿಸಿದ್ದ ಘಟನೆ ವರದಿಯಾಗಿದೆ.

ಮುಸ್ಲಿಂ ಸಮುದಾಯದ ಐವರು ಪುರುಷರನ್ನು ಜುಲೈ 3 ರಂದು ಬಂಧಿಸಿ, ಸುಮಾರು 20 ದಿನಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಕೊನೆಗೆ ಯಾವುದೇ ಪುರಾವೆಗಳು ದೊರಕಿಲ್ಲ ಎಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

ಹೆಚ್ಚಾಗಿ ಮುಸ್ಲಿಮರೇ ವಾಸಿಸುತ್ತಿದ್ದ ಬೇತುಕಂಡಿಯ ಸಿಲ್ಚಾರ್‌ನ ಪ್ರದೇಶದಲ್ಲಿ ವಾಸಿಸುತ್ತಿದ್ದ ಐವರನ್ನು ಬಂಧಿಸಲಾಗಿತ್ತು. 

ಈ ಬಗ್ಗೆ ಬಿಬಿಸಿ ಸುದ್ದಿವಾಹಿನಿಯೊಂದಿಗೆ ತಮ್ಮ ನೋವು ಹಂಚಿಕೊಂಡ ಬಂಧಿತರಲ್ಲೋರ್ವರಾದ ನಝೀರ್ ಹುಸೇನ್ ಲಷ್ಕರ್, "ಅಸ್ಸಾಂನಲ್ಲಿ ಕಟ್ಟಡ ಕಾರ್ಮಿಕನಾಗಿ, ರಾಜ್ಯದಲ್ಲಿ ಪ್ರವಾಹ ರಕ್ಷಣೆಗಾಗಿ ನಿರ್ಮಿಸಲಾದ ಒಡ್ಡಿನ ಕಾಮಗಾರಿಯಲ್ಲಿ ದುಡಿದವನು ನಾನು. ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದ್ದ ಕಾರಣಕ್ಕೆ ಪೊಲೀಸರು ಬಂಧಿಸಿದರು. ನಾನು ಒಡ್ಡುಗಳನ್ನು ನಿರ್ಮಿಸಲು 16 ವರ್ಷಗಳನ್ನು ಕಳೆದಿದ್ದೇನೆ. ಅಂತಹ ಹಿನ್ನೆಲೆಯ ನಾನು, ಒಂದು ಒಡ್ಡನ್ನು ಏಕೆ ಹಾನಿಗೊಳಿಸುತ್ತೇನೆ?" ಎಂದು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತಮ್ಮ ನೋವು ತೋಡಿಕೊಂಡರು. 

ನಝೀರ್ ಹುಸೇನ್ ಲಷ್ಕರ್ ಜೊತೆಗೆ ಕಾಬೂಲ್ ಖಾನ್, ರಿಪೋನ್ ಖಾನ್, ನಿತು ಅಹ್ಮದ್ ಮತ್ತು ರಾಜು ದೇಬ್ ಎಂಬ ಐವರು ಮುಸ್ಲಿಮರನ್ನು ಬಂಧಿಸಲಾಗಿತ್ತು.

ಅಸ್ಸಾಂನಲ್ಲಿ ಮೊದಲು ಮೇ ತಿಂಗಳಲ್ಲಿ ಎರಡು ಅಲೆಗಳ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಈ ವರ್ಷ ಜೂನ್‌ನಲ್ಲಿ ಮಳೆಯು ನಿಗದಿತ ಅವಧಿಗಿಂತ ಮುಂಚೆಯೇ ಬಂದಿದ್ದರಿಂದ ವಾಡಿಕೆಗಿಂತ ಭಾರೀ ಪ್ರಮಾಣದಲ್ಲಿತ್ತು ಆದರೆ, ಈ ವರ್ಷದ ಅಸ್ಸಾಂ ಪ್ರವಾಹಕ್ಕೆ ಹೊಸ ತಿರುವು ನೀಡಿದ ಬಲಪಂಥೀಯ ವಿಚಾರಧಾರೆಯುಳ್ಳ ಮಾಧ್ಯಮಗಳು, ಈ ಪ್ರವಾಹಕ್ಕೆ ಮುಸ್ಲಿಮರು ಕಾರಣ ಎಂದು ಉಲ್ಲೇಖಿಸಿ, ಇದನ್ನು 'ಪ್ರವಾಹ ಜಿಹಾದ್' ಎಂದು ಕರೆದಿದ್ದವು.

Image
Assam flood

ಸಾಮಾಜಿಕ ಮಾಧ್ಯಮಗಳಲ್ಲಿ 'ಪ್ರವಾಹ ಜಿಹಾದ್'ನ ಪೋಸ್ಟ್‌ಗಳನ್ನು ಸೃಷ್ಟಿಸಿದ್ದಲ್ಲದೇ ಅದನ್ನು ವ್ಯಾಪಕವಾಗಿ ಪ್ರಸಾರ ಮಾಡಿದ್ದವು. ನಂತರ ಕೆಲವು ಸ್ಥಳೀಯ ಮಾಧ್ಯಮಗಳು ಇದನ್ನು ಪ್ರಕಟಿಸಿ, ಹಿಂದೂ ಬಹುಸಂಖ್ಯಾತ ನಗರವಾದ ಸಿಲ್ಚಾರ್ ಅನ್ನು ಉದ್ದೇಶಪೂರ್ವಕವಾಗಿ ಮುಳುಗಿಸುವಲ್ಲಿ ಮುಸ್ಲಿಮರ ಗುಂಪಿನ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.

ಪ್ರವಾಹದಿಂದ ರಕ್ಷಿಸಲು ಉದ್ದೇಶಿಸಲಾಗಿದ್ದ ಒಡ್ಡುಗಳನ್ನು ಮುಸ್ಲಿಮರು ಹಾನಿ ಮಾಡಿದ್ದಾರೆ. ಇದರಿಂದ ಈ ಬಾರಿ ಪ್ರವಾಹ ಬಂದಿದೆ. ಇದು 'ಫ್ಲಡ್ ಜಿಹಾದ್' ಎಂದು ದೂರಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಹಿಟ್ಲರ್ ಚುನಾವಣೆ ಗೆಲ್ಲುತ್ತಿದ್ದ ಎನ್ನುವುದು ಬೇಜವಾಬ್ದಾರಿಯುತ ಹೇಳಿಕೆ: ಬಿಜೆಪಿ ಟೀಕೆ

‘ಪ್ರವಾಹ ಜಿಹಾದ್’ ಹೇಳಿಕೆಯನ್ನು ತಳ್ಳಿಹಾಕಿದ್ದ ಸಿಲ್ಚಾರ್ ಪೊಲೀಸ್ ವರಿಷ್ಠಾಧಿಕಾರಿ ರಮಣದೀಪ್ ಕೌರ್, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದಾಗಿ ಕೆಲವರನ್ನು ವಿಚಾರಣೆಗಾಗಿ ಕರೆ ತರಲಾಗಿತ್ತು. ಆದರೆ ಅವರ ವಿರುದ್ಧ ಯಾವುದೇ ತಪ್ಪು ಕಂಡು ಬಂದಿಲ್ಲವಾದ್ದರಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಅಸ್ಸಾಂನಲ್ಲಿನ ಪ್ರವಾಹದ ಸಮಸ್ಯೆಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ವೈಫಲ್ಯಗಳನ್ನು ಮರೆಮಾಚಲಿಕ್ಕಾಗಿ "ಪ್ರವಾಹ ಜಿಹಾದ್" ನಂತಹ ಸಿದ್ಧಾಂತಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ.       

ನಿಮಗೆ ಏನು ಅನ್ನಿಸ್ತು?
11 ವೋಟ್