ಲೇಖಕ ಸಲ್ಮಾನ್ ರಶ್ದಿ ಮೇಲಿನ ದಾಳಿ ಸರಿಯಲ್ಲ: ಮುಸ್ಲಿಂ ಧರ್ಮಗುರು

ಖ್ಯಾತ ಲೇಖಕ ಸಲ್ಮಾನ್‌ ರಶ್ದಿ ಅವರ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮುಸ್ಲಿಮ್‌ ಧರ್ಮ ಗುರು ಒಬ್ಬರು ಪ್ರತಿಕ್ರಿಯಿಸಿ ಹಲ್ಲೆಯನ್ನು ಖಂಡಿಸಿದ್ದಾರೆ.

“ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಮತ್ತು ವಿವಾದಾತ್ಮಕ ಬರಹಗಾರ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿ ಸರಿ ಎಂದು ಹೇಳಲಾಗುವುದಿಲ್ಲ” ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಶನಿವಾರ ಹೇಳಿದ್ದಾರೆ.

ಮುಂಬೈ ಮೂಲದ ವಿವಾದಿತ ಲೇಖಕ, ʼದಿ ಸೆಟಾನಿಕ್ ವರ್ಸಸ್ʼ ಕೃತಿಯ ನಂತರ ಅನೇಕ ವರ್ಷಗಳ ಕಾಲ ಮುಸ್ಲಿಂ ರಾಷ್ಟ್ರಗಳಿಂದ ಅವರು ಜೀವ ಬೆದರಿಕೆ ಎದುರಿಸಿದ್ದರು. ಶುಕ್ರವಾರ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 24 ವರ್ಷದ ದುಷ್ಕರ್ಮಿಯೋರ್ವ ಚಾಕುವಿನಿಂದ ಇರಿದಿದ್ದಾನೆ.

“ಪ್ರವಾದಿ ಮೊಹಮ್ಮದ್ ಪೈಗಂಬರ್ ಶಾಂತಿಯ ಸಂದೇಶವನ್ನು ನೀಡಿದ್ದಾರೆ. ಹೀಗಾಗಿ ಅವರು ತೋರಿಸಿದ ಹಾದಿಯಲ್ಲಿ ಮುಸ್ಲಿಮರು ನಡೆಯಬೇಕು” ಎಂದು ಹಲ್ಲೆಯನ್ನು ಖಂಡಿಸಿದರು.

ಅಖಿಲ ಭಾರತ ಶಿಯಾ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಮೌಲಾನಾ, ಸೇಮ್ ಮೆಹದಿ, "ಮೂರು ದಶಕಗಳ ಹಿಂದೆ ಶಿಯಾ ಧರ್ಮಗುರು ಮತ್ತು ನಾಯಕ ಅಯತೊಲ್ಲಾ ಖೊಮೇನಿ ರಶ್ದಿ ವಿರುದ್ಧ ಫತ್ವಾ ಹೊರಡಿಸಿದ್ದರು. ಆದ್ದರಿಂದ, ಶಿಯಾ ಸಮುದಾಯದವರು ಅಭಿಪ್ರಾಯ ಕೊಡಲು ಇದು ಸೂಕ್ತವಲ್ಲ” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್