ಇಸ್ಲಾಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದ ʼಸೆಟಾನಿಕ್‌ ವರ್ಸಸ್‌ʼ ಲೇಖಕ ಸಲ್ಮಾನ್‌ ರಶ್ದಿ

  • ರಕ್ಷಣೆ ನಿಲ್ಲಿಸಬಾರದು ಎಂದ ಬೋರಿಸ್‌ ಜಾನ್ಸನ್‌
  • ಹಲ್ಲೆಗೆ ಸ್ಪಷ್ಟವಾದ ಕಾರಣ ಇನ್ನೂ ತಿಳಿದುಬಂದಿಲ್ಲ

ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಖ್ಯಾತ ಲೇಖಕ ಸಲ್ಮಾನ್‌ ರಶ್ದಿ, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಕಣ್ಣು ಮತ್ತು ಯಕೃತ್(ಲಿವರ್)‌ ತೀವ್ರ ಘಾಸಿಗೊಂಡಿವೆ ಎಂದು ಅವರ ಆಪ್ತರು ತಿಳಿಸಿರುವುದಾಗಿ ವರದಿಯಾಗಿದೆ.

“ದ ಸಟಾನಿಕ್ ವರ್ಸೆಸ್” ಎಂಬ ಕಾದಂಬರಿ ವಿರುದ್ಧ 1980ರ ದಶಕದಲ್ಲಿ ಇರಾನ್ ಸಲ್ಮಾನ್ ರಶ್ದಿ ಅವರ ತಲೆದಂಡಕ್ಕೆ ಫತ್ವಾ ಹೊರಡಿಸಿತ್ತು. ಹೀಗಾಗಿ ಅವರು ಇರಾನ್‌ನಿಂದ ಜೀವ ಬೆದರಿಕೆ ಎದುರಿಸಿದ್ದರು. ಅಲ್ಲಿಂದ ನಿರಂತರವಾಗಿ ಜೀವ ಬೆದರಿಕೆ ಎದುರಿಸುತ್ತಿರುವ ಅವರು, ಬ್ರಿಟನ್‌ನಲ್ಲಿ ಆಶ್ರಯ ಪಡೆದಿದ್ದರು.

ಶುಕ್ರವಾರ ಪಶ್ಚಿಮ ನ್ಯೂಯಾರ್ಕ್‌ನ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಚಾಕುವಿನಿಂದ ಇರಿಯಲಾಗಿದೆ. ಉಪನ್ಯಾಸದ ವೇದಿಕೆಗೆ ನುಗ್ಗಿದ ವ್ಯಕ್ತಿಯೊಬ್ಬ ಲೇಖಕರ ಕುತ್ತಿಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣವೇ ಸಲ್ಮಾನ್ ರಶ್ದಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

“ಸಲ್ಮಾನ್ ರಶ್ದಿ ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಯಕೃತ್‌ಗೆ ಹಾನಿಯಾಗಿದೆ ಮತ್ತು ತೋಳಿನ ನರಗಳು ಕತ್ತರಿಸಿ ಹೋಗಿವೆ. ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಇದೆ” ಎಂದು ಅವರ ಏಜೆಂಟ್‌ ಆಂಡ್ರ್ಯೂ ವೈಲಿ ತಿಳಿಸಿರುವುದಾಗಿ 'ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

ಘಟನೆ ನಡೆದ ಸ್ಥಳದಲ್ಲಿ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯೂಜೆರ್ಸಿಯ ಫೇರ್‌ವ್ಯೂನ ಹದಿ ಮತರ್ (24) ಎಂದು ಗುರುತಿಸಲಾಗಿದೆ. ಬಂಧಿತನ ವಿಚಾರಣೆ ನಡೆಸಲಾಗುತ್ತಿದೆ, ಆದರೆ ಹಲ್ಲೆಗೆ ಸ್ಪಷ್ಟವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ರಾಜ್ಯ ಪೊಲೀಸ್ ಮೇಜರ್ ಯುಜೀನ್ ಸ್ಟಾನಿಸ್ಜೆವ್ಸ್ಕಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಆಗಿದ್ದೇನು?

ಷಟೌಕ್ವಾ ಸಂಸ್ಥೆಯ ವೇದಿಕೆಯ ಮೇಲೆ ಅಸೋಸಿಯೇಟೆಡ್ ಪ್ರೆಸ್ ವರದಿಗಾರರೊಬ್ಬರು ಸಲ್ಮಾನ್ ರಶ್ದಿ ಅವರ ಪರಿಚಯ ಮಾಡುತ್ತಿದ್ದಂತೆ ಅಕ್ರಮಣಕಾರ ವೇದಿಕೆಗೆ ನುಗ್ಗಿ 10ರಿಂದ 15 ಬಾರಿ ಹೊಟ್ಟೆ ಮತ್ತು ಕುತ್ತಿಗೆಗೆ ಇರಿದಿದ್ದಾನೆ. ನಂತರ ಲೇಖಕರು ನೆಲಕ್ಕೆ ಉರುಳಿದ್ದಾರೆ.

ಸಲ್ಮಾನ್ ರಶ್ದಿ ಅವರ ಸಹಾಯಕ್ಕೆ ಧಾವಿಸಿದ ವೈದ್ಯ ಡಾ. ಮಾರ್ಟಿನ್ ಹ್ಯಾಸ್ಕೆಲ್ ಅವರು, “ರಶ್ದಿಯವವರಿಗೆ ಗಂಭಿರ ಗಾಯಗಳಾಗಿವೆ, ಆದರೆ ಚೇತರಿಕೊಳ್ಳಬಹುದು” ಎಂದು ಹೇಳಿದ್ದಾರೆ.

ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆದರಿಕೆ ಎದುರಿಸುತ್ತಿದ್ದ ಬರಹಗಾರ ಸಲ್ಮಾನ್ ರಶ್ದಿಗೆ ಆಶ್ರಯ ನೀಡಿರುವ ಸಂಸ್ಥೆಯ ಸಹ ಸಂಸ್ಥಾಪಕರಾದ ಹೆನ್ರಿ ರೀಸ್‌ ಅವರು ಕಾರ್ಯಕ್ರಮದ ಮೇಲ್ವಿಚಾರಕರಾಗಿದ್ದರು. ಅವರ ಮೇಲೂ ದಾಳಿ ಮಾಡಲಾಗಿದೆ. ರೀಸ್ ಅವರ ಮುಖಕ್ಕೆ ಗಾಯಗಳಾಗಿವೆ, ಚಿಕಿತ್ಸೆಯ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೀಸ್ ಮತ್ತು ರಶ್ದಿ ಅವರು, ಆ ವೇದಿಕೆಯಲ್ಲಿ ʼಬೆದರಿಕೆ ಎದುರಿಸುತ್ತಿರುವ ಲೇಖಕರುʼ ಮತ್ತು ಹಲವು ದೇಶಗಳ ʼಬಹಿಷ್ಕೃತ ಲೇಖಕರು ಮತ್ತು ಕಲಾವಿದರಿಗೆʼ ಅಮೆರಿಕವನ್ನು ಆಶ್ರಯತಾಣವಾಗಿ ಮಾಡುವ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. 

ದಶಕಗಳ ಕಾಲದಿಂದಲೂ ರಶ್ದಿ ಅವರು ಜೀವ ಬೆದರಿಕೆ ಎದುರಿಸುತ್ತಿದ್ದಾರೆ ಮತ್ತು ಅವರನ್ನು ಕೊಂದವರಿಗೆ ಮೂರು ದಶಲಕ್ಷ ಡಾಲರ್ ಬಹುಮಾನ ಘೋಷಿಸಲಾಗಿದೆ. ಆದರೂ ರಶ್ದಿ ಅವರಿಗೆ ಭದ್ರತೆಯನ್ನೇಕೆ ಒದಗಿಸಿಲ್ಲ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಸುಮಾರು 2500 ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಹೂದಿ ಬೋಧಕ ಚಾರ್ಲ್ಸ್ ಸೇವೆನರ್ ಕೂಡ ಭಾಗವಹಿಸಿದ್ದರು.

“ದಾಳಿಕೋರ ವೇದಿಕೆಗೆ ಓಡಿ ಬಂದು, ಸಲ್ಮಾನ್ ರಶ್ದಿ ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದಾಗ, ಎಲ್ಲರಿಗೂ ಏನು ನಡೆಯುತ್ತಿದೆ ಎನ್ನುವುದೇ ಗೊತ್ತಾಗಲಿಲ್ಲ. ನಂತರ ಚಾಕುವಿನಿಂದ ಇರಿಯುತ್ತಿದ್ದಾನೆ ಎಂಬುದು ಸ್ಪಷ್ಟವಾಯಿತು. ಸುಮಾರು 20 ಸೆಕೆಂಡ್‌ಗಳ ಕಾಲ ದಾಳಿಕೋರ ರಶ್ದಿ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಸೇವೆನರ್ ತಿಳಿಸಿದ್ದಾರೆ.

ದಾಳಿಕೋರ ಕಪ್ಪು ಬಟ್ಟೆ ಧರಿಸಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

“ಲೇಖಕರ ಸುತ್ತ ಅನೇಕ ವಿವಾದಗಳಿವೆ. ಅವರ ವಿವಾದಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಈ ನಕಲಿ ನಾಟಕ ತೋರಿಸಲಾಗುತ್ತಿದೆ ಎಂದು ಭಾವಿಸಿ ನಾವು ಕೆಲ ಕ್ಷಣಾ ಸುಮ್ಮನಿದ್ದೆವು. ಆದರೆ ಕೆಲ ಕ್ಷಣಗಳ ನಂತರ ಇದು ನಕಲಿಯಲ್ಲ ಅಸಲಿ ದಾಳಿ ಎಂದು ಅರಿವಾಗಿತ್ತು. ದಾಳಿಕೋರ ಪಾಸ್‌ ಪಡೆದು ಒಳಗೆ ಬಂದಿರುವುದು ದೃಢಪಟ್ಟಿದೆ” ಎಂದು ಸಂಸ್ಥೆಯ ಅಧ್ಯಕ್ಷ ಮೈಕಲ್ ಹಿಲ್ ಅವರು ಹೇಳಿದ್ದಾರೆ.

ದಾಳಿಗೆ ಎಲ್ಲೆಡೆಯಿಂದ ತೀವ್ರ ಖಂಡನೆ 

ದಾಳಿಯನ್ನು ವಿರೋಧಿಸಿದ ರಶ್ದಿ ಅವರ ಸ್ನೇಹಿತ, ಲೇಖಕ ಇಯಾನ್ ಮೆಕ್‌ವಾನ್ ಅವರು, "ರಶ್ದಿ ಅವರು ಮುಕ್ತ ಅಭಿವ್ಯಕ್ತಿ ಮತ್ತು ಉದಾರವಾದದ ಪ್ರಮುಖ ವಕ್ತಾರರು. ಇದು ವಾಕ್ ಸ್ವಾತಂತ್ರ್ಯದ ಮೇಲಿನ ಆಕ್ರಮಣ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ವಾಕ್ಯ ಪೂರ್ಣಗೊಳಿಸುವ ಮುನ್ನವೇ ಬ್ರೇಕಿಂಗ್‌ ನ್ಯೂಸ್‌: ಮಾಧ್ಯಮಗಳ ವಿರುದ್ಧ ಸಿಜೆಐ ಅಸಮಾಧಾನ

"ಸಲ್ಮಾನ್ ವಿಶ್ವಾದ್ಯಂತ ಬೆದರಿಕೆ ಎದುರಿಸಿದ್ದ ಬರಹಗಾರರು ಮತ್ತು ಪತ್ರಕರ್ತರಿಗೆ ಸ್ಫೂರ್ತಿಯಾಗಿದ್ದವರು" ಎಂದು ಮೆಕ್‌ವಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಅಮೆರಿಕ ಪೆನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಝೇನ್ ನೊಸೆಲ್, “ಮುಕ್ತ ಅಭಿವ್ಯಕ್ತಿ ಪ್ರತಿಪಾದಿಸಿದ ಗುಂಪಿನ ಅಧ್ಯಕ್ಷ ರಶ್ದಿ ಅವರು. ಈಗಿನ ದಾಳಿ ಕ್ರೂರ ಮತ್ತು ಭಯಾನಕ. ಆಘಾತಕಾರಿ ಘಟನೆ” ಎಂದು ಹೇಳಿದ್ದಾರೆ.

ರಶ್ದಿಯವರ 1988ರ ಕಾದಂಬರಿ ಮುಸ್ಲಿಂ ಸಮುದಾಯವನ್ನು ಅವಮಾನಿಸಿದೆ, ಅದೊಂದು ಧರ್ಮನಿಂದನೆ ಎಂದು ಅನೇಕ ಮುಸ್ಲಿಮರು ಅಭಿಪ್ರಾಯಪಟ್ಟಿದ್ದರು. ಭಾರತದಲ್ಲಿ ಜನಿಸಿದ ರಶ್ದಿ ವಿರುದ್ಧ ಜಗತ್ತಿನಾದ್ಯಂತ ಅನೇಕ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.

"ಸಲ್ಮಾನ್‌ ರಶ್ದಿ ಮೇಲಿನ ದಾಳಿ ಸುದ್ದಿ ಕೇಳಿ ಆಘಾತವಾಗಿದೆ. ಇಂತಹದ್ದು ನಡೆಯುತ್ತೆ ಎಂದು ನಾನು ಊಹಿಸಿಯೇ ಇರಲಿಲ್ಲ. 1989ರಿಂದ ಅವರು ಪಶ್ಚಿಮ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದರು ಮತ್ತು ಅವರಿಗೆ ಜೀವಭಯವಿತ್ತು. ಅಂಥವರ ಮೇಲೆ ಇಂತಹ ಭೀಕರ ದಾಳಿ ನಡೆಯುತ್ತದೆ ಎಂದಾದರೆ, ಇಸ್ಲಾಂ ಬಗ್ಗೆ ವಿಮರ್ಶಾತ್ಮಕವಾಗಿರುವ ಯಾರ ಮೇಲಾದರೂ ದಾಳಿ ನಡೆಯಬಹುದು. ನನಗೆ ಭಯವಾಗಿದೆ" ಎಂದು ತಮ್ಮ ಬರಹಗಳ ಕಾರಣಕ್ಕೆ ಇಸ್ಲಾಂ ಮೂಲಭೂತವಾದಿಗಳ ಫತ್ವಾಕ್ಕೆ ಗುರಿಯಾಗಿರುವ ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್‌ ಟ್ವೀಟ್‌ ಮಾಡಿದ್ದಾರೆ.

ರಕ್ಷಣೆ ನಿಲ್ಲಿಸಬಾರದು ಎಂದ ಬೋರಿಸ್ ಜಾನ್ಸನ್

ದಾಳಿಯನ್ನು ಖಂಡಿಸಿ ಟ್ವೀಟ್‌ ಮಾಡಿರುವ ಬೋರಿಸ್ ಜಾನ್ಸನ್, "ರಶ್ದಿ ಅವರು ತಮ್ಮ ಹಕ್ಕು ಚಲಾಯಿಸಿದ್ದಕ್ಕಾಗಿ ಅವರ ಮೇಲೆ ದಾಳಿ ನಡೆದಿದೆ. ಆದರೆ ಆ ಹಕ್ಕಿನ ರಕ್ಷಣೆಯನ್ನು ನಾವೆಂದೂ ಬಿಡಬಾರದು" ಎಂದು ಹೇಳಿದ್ದಾರೆ.

ಕೊಲೆ, ನಿಷೇಧ, ಸಾವು, ಬಹುಮಾನ

ಮುಂಬೈನಲ್ಲಿ ಜನಿಸಿದ ಸಲ್ಮಾನ್‌ ರಶ್ದಿ ತಮ್ಮ ಸೃಜನಶೀಲತೆ ಮತ್ತು ಪ್ರಗತಿಪರ ಧೋರಣೆಯ ಕಾರಣಕ್ಕೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಲೇಖಕ. ತಮ್ಮ ಪ್ರಗತಿಪರ ಧೋರಣೆಯ ಕಾರಣಕ್ಕಾಗಿಯೇ ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದವರು.

ಅವರ ಪುಸ್ತಕದ ವಿರುದ್ಧ ಭುಗಿಲೆದ್ದ ಗಲಭೆಗಳಲ್ಲಿ ಸುಮಾರು 45 ಜನ ಸಾವನ್ನಪ್ಪಿದ್ದಾರೆ. ಪುಸ್ತಕವನ್ನು ಅನುವಾದಿಸಿದ ಕಾರಣಕ್ಕೆ ಜಪಾನ್‌ ಅನುವಾದಕ ಕೊಲೆಯಾಯಿತು. ಮತ್ತೊಬ್ಬ ಇಟಾಲಿಯನ್ ಲೇಖಕ ಬದುಕುಳಿದರು. 1993ರಲ್ಲಿ ಪುಸ್ತಕದ ನಾರ್ವೇಜಿಯನ್ ಪ್ರಕಾಶಕರ ಮೇಲೆ ಮೂರು ಭಾರಿ ಗುಂಡು ಹಾರಿಸಲಾಗಿದೆ.

ರಶ್ದಿ ಅವರ “ದ ಸೆಟಾನಿಕ್ ವರ್ಸೆಸ್” ಪುಸ್ತಕವನ್ನು ಇರಾನ್‌ನಲ್ಲಿ ನಿಷೇಧಿಸಲಾಗಿದೆ. ಅಲ್ಲಿನ ಅಯತೊಲ್ಲಾ ರುಹೊಲ್ಲಾ ಖೊಮೇನಿ ಸರ್ಕಾರ 1989ರಲ್ಲಿ ರಶ್ದಿ ತಲೆದಂಡಕ್ಕಾಗಿ ಫತ್ವಾ ಹೊರಡಿಸಿತ್ತು. ಅದೇ ವರ್ಷ ಖೊಮೇನಿ ನಿಧನರಾದರು. 

ಇಂಗ್ಲೆಂಡ್ ಮತ್ತು ಅಮೆರಿಕದ ರಕ್ಷಣೆಯಲ್ಲಿ ಅನೇಕ ವರ್ಷಗಳ ಕಾಲ ರಶ್ದಿ ಅವರು ತಲೆಮರೆಸಿಕೊಂಡಿದ್ದರು. ಅದಾದ ನಂತರ ಅವರ ಅಭಿಪ್ರಾಯ ಬದಲಾಗಲಿಲ್ಲ. 2012ರಲ್ಲಿ ಭಾಷಣ ಮಾಡುತ್ತಾ “ಭಯೋತ್ಪಾದನೆ ನಿಜವಾಗಿಯೂ ಭಯದ ಕಲೆಯಾಗಿದೆ” ಎಂದಿದ್ದರು.

ಇರಾನ್‌ನಲ್ಲಿ ರಶ್ದಿ ಅವರ ಹತ್ಯೆಗೆ ಹಣ ಸಂಗ್ರಹಿಸಲಾಗಿತ್ತು. 2012ರಲ್ಲಿ, ರಶ್ದಿ ಅವರು ಫತ್ವಾ ಕುರಿತು "ಜೋಸೆಫ್ ಆಂಟನ್" ಎಂಬ ಆತ್ಮಚರಿತ್ರೆಯನ್ನು ಪ್ರಕಟಿಸಿದರು. ಜೋಸೆಫ್ ಆಂಟನ್ ಎಂಬುದು ರಶ್ದಿ ಅವರು ತಲೆಮರೆಸಿಕೊಂಡಾಗ ಬಳಸುತ್ತಿದ್ದ ರಹಸ್ಯ ಹೆಸರು.

ರಶ್ದಿ ಅವರು ತಮ್ಮ ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿ "ಮಿಡ್‌ನೈಟ್ಸ್ ಚಿಲ್ಡ್ರನ್" ಬರಹದಿಂದಲೂ ಪ್ರಾಮುಖ್ಯತೆಗೆ ಪಡೆದರು. ಆದರೆ ಅವರ ಹೆಸರು "ದಿ ಸೆಟಾನಿಕ್ ವರ್ಸಸ್" ನಂತರ ವಿಶ್ವಾದ್ಯಂತ ಪ್ರಸಿದ್ಧವಾಯಿತು.

ನಿಮಗೆ ಏನು ಅನ್ನಿಸ್ತು?
2 ವೋಟ್