ನ್ಯೂಯಾರ್ಕ್ | ಲೇಖಕ ಸಲ್ಮಾನ್ ರಶ್ದಿ ಮೇಲೆ ದುಷ್ಕರ್ಮಿಯಿಂದ ದಾಳಿ: 15ಕ್ಕೂ ಹೆಚ್ಚು ಇರಿತ

salman Rashdie
  • ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು
  • ಭಾಷಣ ಮಾಡಲು ವೇದಿಕೆ ಏರುತ್ತಿದ್ದ ವೇಳೆ ದಾಳಿ

ಅಮೆರಿಕದ ನ್ಯೂಯಾರ್ಕಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ವೇದಿಕೆ ಏರುತ್ತಿದ್ದ ವೇಳೆ ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರಿಗೆ ದುಷ್ಕರ್ಮಿಯೋರ್ವ ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ.

'ದೇಹದಲ್ಲಿ ಸುಮಾರು 15ರಷ್ಟು ಗಾಯಗಳಾಗಿದೆ. ಹೆಲಿಕಾಪ್ಟರ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಆರೋಗ್ಯದ ಸದ್ಯದ ಪರಿಸ್ಥಿತಿ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ' ಎಂದು ನ್ಯೂಯಾರ್ಕ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

ಶತಾಕ್ವ ಇನ್‌ಸ್ಟಿಟ್ಯೂಟ್‌ನಲ್ಲಿ ಬೆಳಿಗ್ಗೆ 11ಕ್ಕೆ (ಸ್ಥಳೀಯ ಕಾಲಮಾನ) ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸಲ್ಮಾನ್‌ ರಶ್ದಿ ಅವರನ್ನು ಪರಿಚಯಿಸುತ್ತಿದ್ದ ವೇಳೆ, ವೇದಿಕೆಯ ಮೇಲೆ ನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಅವರ ಮುಖಕ್ಕೆ ಗುದ್ದಿದ್ದಾನೆ. ಈ ವೇಳೆ ರಶ್ದಿ ನೆಲಕ್ಕುರುಳಿದಾಗ ಅವರ ಕುತ್ತಿಗೆಗೆ ಇರಿಯಲಾಯಿತು ಎಂದು ವರದಿಯಾಗಿದೆ.

'ರಶ್ದಿ ಅವರು ಬದುಕಿದ್ದಾರೆ. ಅವರನ್ನು ಏರ್‌ಲಿಫ್ಟ್‌ ಮಾಡಿ, ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರ್ಯಕ್ರಮದ ಸಮನ್ವಯಕಾರರ ಮೇಲೂ ಹಲ್ಲೆಯಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ನ್ಯೂಯಾರ್ಕ್‌ನ ಗವರ್ನರ್‌ ಕ್ಯಾತಿ ಹೌಚಲ್‌ ತಿಳಿಸಿದ್ದಾರೆ.

75 ವರ್ಷ ವಯಸ್ಸಿನ ಲೇಖಕನ ಬರಹಗಳು ಈ ಹಿಂದೆ ಹಲವಾರು ರೀತಿಯ ಬೆದರಿಕೆಗಳಿಗೆ ಕಾರಣವಾಗಿತ್ತು. ದೆಹಲಿ ಮೂಲದ ಲೇಖಕ ರಶ್ದಿ ಅವರು ತಮ್ಮ ಪ್ರಗತಿಪರ ಧೋರಣೆಯ ಕಾರಣಕ್ಕೆ ಕಳೆದ ಅರ್ಧ ಶತಮಾನದಿಂದಲೂ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. 1988ರಲ್ಲಿ ಹೊರತಂದ ಪುಸ್ತಕ 'ಸೆಟಾನಿಕ್ ವರ್ಸಸ್'  ಪುಸ್ತಕದಿಂದ ವಿವಾದ ಆರಂಭವಾಗಿತ್ತು. ಈ ಕಾದಂಬರಿಯನ್ನು ಹಲವು ಮುಸ್ಲಿಂ ರಾಷ್ಟ್ರಗಳು ಬಹಿಷ್ಕರಿಸಿದ್ದವು. ಅಲ್ಲದೆ ಅವರ ವಿರುದ್ಧ ಫತ್ವಾ ಕೂಡ ಹೊರಡಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
4 ವೋಟ್