ಬಾಗ್ಮನೆ ಒತ್ತುವರಿ ತೆರವಿಗೆ ತಡೆ | ಲೋಕಾಯುಕ್ತ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಎಸ್‌ ಆರ್‌ ಹಿರೇಮಠ್

sr hiremutt
  • 'ಹೈಕೋರ್ಟ್‌ ಮಾಡಬೇಕಿದ್ದ ಕೆಲಸವನ್ನು ಲೋಕಾಯುಕ್ತ ಮಾಡಿದೆ': ದೂರು
  • 'ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಲೋಕಾಯುಕ್ತರು ನಡೆದುಕೊಂಡಿದ್ದಾರೆ': ಆರೋಪ

ಬೆಂಗಳೂರಿನ ಬಾಗ್ಮನೆ ಟೆಕ್‌ಪಾರ್ಕ್‌ ಬಳಿಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೂರು ವಾರಗಳ ಕಾಲ ಮುಂದೂಡುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಲೋಕಾಯುಕ್ತ ನೀಡಿದ ನಿರ್ದೇಶನವನ್ನು ರದ್ದುಗೊಳಿಸುವಂತೆ ಕೋರಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲ ಗೌತಮ್‌ ರಮೇಶ್‌, ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಕೋರಿದರು. ನ್ಯಾಯಪೀಠ ಸೆಪ್ಟೆಂಬರ್‌ 26ರಂದು ಅರ್ಜಿ ವಿಚಾರಣೆ ನಡೆಸಲು ಸಮ್ಮತಿಸಿದೆ.

ಅರ್ಜಿಯಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್‌, ಬಿಬಿಎಂಪಿ ಆಯುಕ್ತ, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಮೆಸರ್ಸ್‌ ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜಿಯಲ್ಲಿ, "ಕರ್ನಾಟಕ ಲೋಕಾಯುಕ್ತ ಕಾಯ್ದೆ-1994ರ ಅನ್ವಯ ಲೋಕಾಯುಕ್ತವು ಸಾರ್ವಜನಿಕ ಆಡಳಿತ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ದೂರುಗಳ ಮೇಲೆ ಕ್ರಮ ಕೈಗೊಳ್ಳಬೇಕು. ಆದರೆ, ಈಗಿರುವ ಲೋಕಾಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಮತ್ತು ಸಾಂವಿಧಾನಿಕ ಹೈಕೋರ್ಟ್‌ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸಿದೆ" ಎಂದು ಉಲ್ಲೇಖಿಸಲಾಗಿದೆ.

ಈ ಕುರಿತು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ ಸಮಾಜ ಪರಿವರ್ತನಾ ಸಮುದಾಯದ ಎಸ್‌ ಆರ್‌ ಹಿರೇಮಠ, "ಲೋಕಾಯುಕ್ತವು ತನ್ನ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯ ನಿರ್ವಹಿಸುತ್ತಿದೆ. ಹೈಕೋರ್ಟ್‌ ಮಾಡಬೇಕಿದ್ದ ಕೆಲಸವನ್ನು ಲೋಕಾಯುಕ್ತ ಮಾಡಿದೆ. ಇದು ಕಾನೂನುಬಾಹಿರ. ಬಾಗ್ಮನೆ ಟೆಕ್‌ಪಾರ್ಕ್‌ನವರು ತಮ್ಮನ್ನು ತಾವು ಪಾರು ಮಾಡಿಕೊಳ್ಳಲು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸರ್ವೆ ಮಾಡಲು ಬಂದ ಅಧಿಕಾರಿಗಳ ವಿರುದ್ಧವೇ ಪ್ರಕರಣವನ್ನು ದಾಖಲಿಸಿದ್ದಾರೆ. ಇದನ್ನು ಪರಿಶೀಲಿಸಿದ ಲೋಕಾಯುಕ್ತರು ರಜಾ ದಿನವನ್ನೂ ಲೆಕ್ಕಿಸದೆ, ವಿಚಾರಣೆ ನಡೆಸಿ ಒತ್ತುವರಿ ತೆರವಿಗೆ ತಡೆಯಾಜ್ಞೆ ನೀಡಿದ್ದಾರೆ. ಇವೆಲ್ಲವೂ ವ್ಯಾಪ್ತಿ ಮೀರಿದ ವಿಚಾರ. ಈ ಹಿನ್ನೆಲೆಯಲ್ಲಿ ನಾನು ಹೈಕೋರ್ಟ್‌ಗೆ ಪಿಐಎಲ್‌ ದಾಖಲಿಸಿದೆ" ಎಂದರು.

ಈ ಸುದ್ದಿ ಓದಿದ್ದೀರಾ?: ಮುಂಗಾರು ಅಧಿವೇಶನ | ಕಂದಾಯ, ಶಿಕ್ಷಣ ಇಲಾಖೆಯ ಹಲವು ವಿಧೇಯಕ ಮಂಡನೆ: ವಿಧಾನಸಭೆಯಲ್ಲಿ ಅನುಮೋದನೆ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಎಚ್ಚೆತ್ತುಕೊಂಡ ಬಿಬಿಎಂಪಿ, ರಾಜಕಾಲುವೆ ಒತ್ತುವರಿ ತೆರವಿಗೆ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಅದರಂತೆ, ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಬಾಗ್ಮನೆ ಟೆಕ್ ಪಾರ್ಕ್ ವಿರುದ್ಧವೂ ಕ್ರಮ ಜರುಗಿಸಲು ಮುಂದಾಗಿತ್ತು. ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದ ಬಾಗ್ಮನೆ, "ತೆರವು ಕಾರ್ಯಾಚರಣೆಗೂ ಮುನ್ನ ಬಿಬಿಎಂಪಿ ನೋಟಿಸ್‌ ಜಾರಿ ಮಾಡಿಲ್ಲ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಮತ್ತೊಂದು ರಿಯಲ್‌ ಎಸ್ಟೇಟ್‌ ಕಂಪನಿಗೆ ಬಿಬಿಎಂಪಿ ಸಹಕಾರ ನೀಡಿದೆ. ಬಿಬಿಎಂಪಿಯು ತಾರತಮ್ಯದಿಂದ ಒತ್ತವರಿ ತೆರವು ಮಾಡಿದರೆ ಬಾಗ್ಮನೆ ಸಮೀಪ ನೀರು ತುಂಬಿಕೊಳ್ಳುವ ಸಾಧ್ಯತೆಯಿದೆ" ಎಂದು ಆಕ್ಷೇಪಿಸಿತ್ತು. ಬಾಗ್ಮನೆಯ ಮನವಿ ಪರಿಗಣಿಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್‌ ಪಾಟೀಲ್‌, "ಪ್ರಾಧಿಕಾರಗಳು ಅಕ್ರಮ ಕಟ್ಟಡ ತೆರವು ವೇಳೆ ಕಾನೂನು ಪಾಲಿಸಬೇಕು" ಎಂದು ಆದೇಶಿಸಿದ್ದರು. ಇದರ ವಿರುದ್ಧ ಎಸ್‌ ಆರ್‌ ಹಿರೇಮಠ್‌ ಅವರು ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್