ಬಾಗ್ಮನೆ ಟೆಕ್‌ಪಾರ್ಕ್‌ ಒತ್ತುವರಿ ತೆರವು | ಲೋಕಾಯುಕ್ತ ಮಧ್ಯಪ್ರವೇಶಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ

  • ಲೋಕಾಯುಕ್ತ ಕಾಯ್ದೆಯಡಿ ರಾಜಕಾಲುವೆ ಒತ್ತುವರಿಗೆ ತಡೆ ನೀಡಬಹುದೇ?
  • ಇನ್ನು ಮುಂದೆ ವ್ಯಾಪ್ತಿ ಮೀರಿ ಲೋಕಾಯುಕ್ತ ಮಧ್ಯ ಪ್ರವೇಶಿಸುವಂತಿಲ್ಲ

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರ ಸಂಬಂಧ ಬಾಗ್ಮನೆ ಟೆಕ್‌ಪಾರ್ಕ್ ಸಂಸ್ಥೆ ದೂರು ಆಧರಿಸಿ, ಲೋಕಾಯುಕ್ತರು ನಡೆಸುತ್ತಿರುವ ಪರ್ಯಾಯ ವಿಚಾರಣೆಗೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ಹಿರೇಮಠ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

"ರಾಜಕಾಲುವೆ ತೆರವಿಗೆ ಈಗಾಗಲೇ ಹೈಕೋರ್ಟ್ ಆದೇಶಿಸಿದೆ. ಲೋಕಾಯುಕ್ತ, ಕಾಯ್ದೆ ಮೀರಿ ಮಧ್ಯೆ ಪ್ರವೇಶಿಸಿದ್ದು ಏಕೆ? ಲೋಕಾಯುಕ್ತ ಕಾಯ್ದೆಯಡಿ ರಾಜಕಾಲುವೆ ಒತ್ತುವರಿಗೆ ತಡೆ ನೀಡುವ ಅಧಿಕಾರವಿದೆಯೇ? ರಾಜಕಾಲುವೆ ಒತ್ತುವರಿ ತೆರವಿಗೆ ಲೋಕಾಯುಕ್ತ ತಡೆ ನೀಡಬಹುದೇ? ಒಂದು ವೇಳೆ ಸಮಸ್ಯೆ ಲೋಕಾಯುಕ್ತದಲ್ಲಿ ಬಗೆಹರಿಯುತ್ತದೆ ಎಂದಾದರೆ, ಜನರು ಲೋಕಾಯುಕ್ತಕ್ಕೇ ಹೋಗಬಹುದಲ್ಲವೇ?" ಎಂದು ನ್ಯಾಯಪೀಠ ಪ್ರಶ್ನಿಸಿತು. ಅಲ್ಲದೆ, ವ್ಯಾಪ್ತಿ ಮೀರಿ ಆದೇಶ ನೀಡಬಾರದು ಎಂದ ಹೈಕೋರ್ಟ್‌, ಲೋಕಾಯುಕ್ತ ಆದೇಶಕ್ಕೆ ತಡೆ ನೀಡಿದೆ.  

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ನಡೆಯುತ್ತಿದ್ದು, ಬಾಗ್ಮನೆ ಟೆಕ್‌ಪಾರ್ಕ್ ಕೂಡಾ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಬಿಬಿಎಂಪಿ ಸರ್ವೆ ಮಾಡಿ ಗುರುತು ಮಾಡಿತ್ತು. ಈ ವಿಚಾರವಾಗಿ ಬಾಗ್ಮನೆ ಟೆಕ್‌ಪಾರ್ಕ್, "ತೆರವು ಕಾರ್ಯಾಚರಣೆಗೂ ಮುನ್ನ ಬಿಬಿಎಂಪಿ ನೋಟಿಸ್ ಜಾರಿ ಮಾಡಿಲ್ಲ" ಎಂದು ಆರೋಪಿಸಿ ಲೋಕಾಯುಕ್ತರಿಗೆ ದೂರು ನೀಡಿತ್ತು.‌

ಈ ಸುದ್ದಿ ಓದಿದ್ದೀರಾ?: ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಭಾಸ್ಕರ್ ರಾವ್

ಸೆ.12ರಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಈ ಮನವಿಯನ್ನು ಪರಿಗಣಿಸಿ, "ರಾಜಕಾಲುವೆ ಒತ್ತುವರಿ ತೆರವುಗೊಳಿಸಿದರೆ, ಸಂಸ್ಥೆ ಸುತ್ತ ಪ್ರವಾಹದ ನೀರು ತುಂಬಬಹುದು ಎಂಬ ಆತಂಕ ಬಾಗ್ಮನೆ ಟೆಕ್‌ಪಾರ್ಕ್‌ ಸಂಸ್ಥೆಗಿದೆ. ಹಾಗಾಗಿ, ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಪ್ರಾಧಿಕಾರಗಳು ತಾರತಮ್ಯ ಮಾಡಬಾರದು. ರಾಜಕಾಲುವೆ ಒತ್ತುವರಿ ತೆರವು ಪ್ರಕ್ರಿಯೆಗೆ ಸ್ವಲ್ಪ ಕಾಲಾವಕಾಶ ಬೇಕಿದೆ" ಎಂದು ಹೇಳಿ ಪ್ರಕರಣವನ್ನು ಮುಂದೂಡಿತ್ತು. 

"ಲೋಕಾಯುಕ್ತ ನೀಡಿರುವ ಈ ಆದೇಶ ಅಸಾಂವಿಧಾನಿಕ. ಈ ನಿರ್ದೇಶನ ಹೈಕೋರ್ಟ್‌ಗಳ ಅಧಿಕಾರವನ್ನು ದುರ್ಬಲಗೊಳಿಸುವುದು ಅಥವಾ ಪ್ರಶ್ನಿಸುವುದೇ ಆಗಿದೆ" ಎಂದು ಎಸ್‌ ಆರ್‌ ಹಿರೇಮಠ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180