
- ಮೃತ್ಯುಂಜಯ ಸ್ವಾಮೀಜಿ ಸೇರಿ ಮೂವರಿಗೆ ನ್ಯಾಯಾಂಗ ಬಂಧನ ವಿಸ್ತರಣೆ
- ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಧನಲಕ್ಷ್ಮಿ ಅವರಿಂದ ಆದೇಶ
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ನ.29ರವರೆಗೆ ವಿಸ್ತರಿಸಿ ಮಾಗಡಿಯ ಒಂದನೇ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ.
ಮಾಗಡಿ ತಾಲೂಕಿನ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಎಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಹಾಗೂ ಕಣ್ಣೂರು ಮಠದ ವಕೀಲ ಮಹಾದೇವಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶೆ ಎಂ ಧನಲಕ್ಷ್ಮಿ ಅವರು ಆದೇಶಿಸಿದ್ದಾರೆ.
ಬಸವಲಿಂಗ ಸ್ವಾಮೀಜಿಗೆ ಬ್ಲಾಕ್ ಮೇಲ್ ಮತ್ತು ಹನಿಟ್ರ್ಯಾಪ್ ಮಾಡಿದ ಆರೋಪದಡಿ ಈ ಮೂವರನ್ನೂ ಅ.30ರಂದು ರಾಮನಗರ ಪೊಲೀಸರು ಬಂಧಿಸಿದ್ದರು.
ಬಂಡೆಮಠದ ಶ್ರೀಗಳಿಗೂ ಮತ್ತು ಕಣ್ಣೂರು ಮಠದ ಸ್ವಾಮೀಜಿಗೂ ವೈಷಮ್ಯ ಇತ್ತು ಎನ್ನಲಾಗಿದೆ. ಅವರಿಬ್ಬರೂ ಪೂರ್ವಾಶ್ರಮದಲ್ಲಿ ಸೋದರ ಸಂಬಂಧಿಗಳಾಗಿದ್ದರು. ಎರಡೂ ಮಠಗಳ ನಡುವೆ ಆಸ್ತಿಗೆ ಸಂಬಂಧಿಸಿದ ವಿವಾದ ಇತ್ತು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಬಳಸಿಕೊಂಡು ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಹನಿಟ್ರ್ಯಾಪ್ ಮಾಡಿಸಿದ್ದರು ಎನ್ನುವ ಆರೋಪಗಳು ಕೇಳಿಬಂದಿದ್ದವು.
ಬಸವಲಿಂಗ ಸ್ವಾಮೀಜಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಯುವತಿ ಅಶ್ಲೀಲ ವೀಡಿಯೋ ಸೆರೆ ಹಿಡಿದಿದ್ದರು. ಅದನ್ನು ಪಡೆದಿದ್ದ ವಕೀಲ ಮಹಾದೇವಯ್ಯ ತುಮಕೂರಿನಲ್ಲಿ ಸಿ ಡಿ ಮಾಡಿಸಿ ಸಂಬಂಧಪಟ್ಟವರಿಗೆ ಹಂಚಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಏನಿದು ಪ್ರಕರಣ?
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆಂಪಾಪುರದ ಬಂಡೆಮಠದಲ್ಲಿ ಅ.23ರಂದು ಪೂಜಾ ಕೊಠಡಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬಂಡೆಮಠದ ಸ್ವಾಮೀಜಿಯ ಮೃತದೇಹ ಪತ್ತೆಯಾಗಿತ್ತು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕಾಪಿ ಮಾಡಿದ್ದಕ್ಕೆ ನಿಂದಿಸಿದ ಶಿಕ್ಷಕಿ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಸ್ವಾಮೀಜಿಯ ಮೃತದೇಹವಿದ್ದ ಜಾಗದಲ್ಲಿ ಅವರು ಬರೆದಿದ್ದರು ಎನ್ನಲಾದ ಮೂರು ಪುಟಗಳ ಡೆತ್ನೋಟ್ ಪತ್ತೆಯಾಗಿತ್ತು. ಅದರಲ್ಲಿ, "ಸ್ವಾಮೀಜಿಯಾಗಿ ಇಪ್ಪತ್ತೈದು ವರ್ಷ ಕಳಂಕರಹಿತ ಜೀವನ ನಡೆಸಿದ್ದೆ. ಆದರೆ, ಇತ್ತೀಚೆಗೆ ಕೆಲವರು ಪದೇಪದೆ ಚಿತ್ರಹಿಂಸೆ ನೀಡುತ್ತಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದರು.