ಬೆಂಗಳೂರು | ಹನಿಟ್ರ್ಯಾಪ್‌ ಖೆಡ್ಡಾಗೆ ಬಿದ್ದ 72 ವರ್ಷದ ವೃದ್ಧ; 14 ಲಕ್ಷ ರೂ. ಕಳೆದುಕೊಂಡ!

Honeytrap
  • ವಿಮೆ ಮಾಡಿಸುವ ಸೋಗಿನಲ್ಲಿ ವೃದ್ಧನಿಗೆ ಖೆಡ್ಡಾ 
  • ಸಿಸಿಬಿ ಅಧಿಕಾರಿಗಳ ಹೆಸರಲ್ಲಿ ಬೆದರಿಸಿ ಹಣ ವಸೂಲಿ

ಬೆಂಗಳೂರಿನ 72 ವರ್ಷದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿಸಿ, ಸಿಸಿಬಿ ಪೊಲೀಸರ ಸೋಗಿನಲ್ಲಿ 14.90 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"ಎಚ್ಎಸ್‌ಆರ್ ಲೇಔಟ್ ನಿವಾಸಿಯಾಗಿರುವ ಉದ್ಯಮಿ, ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ವಿಮೆ ಮಾಡಿಸುವ ಸೋಗಿನಲ್ಲಿ ಪರಿಚಯವಾಗಿದ್ದ ಯುವತಿಯರು ಹನಿಟ್ರ್ಯಾಪ್‌ ಮಾಡಿ ಹಣ ದೋಚಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಯುವತಿಯರು ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.  

"ವಿಮೆ ಕಂಪನಿ ಪ್ರತಿನಿಧಿಗಳು ಎಂದು ಹೇಳಿದ್ದ ಯುವತಿಯರು, ಉದ್ಯಮಿ ಜತೆ ಸಲುಗೆ ಬೆಳೆಸಿ ವಾಟ್ಸಾಪ್‌ ಚಾಟಿಂಗ್‌, ವಿಡಿಯೋ ಕಾಲ್‌ ಮಾಡುತ್ತಿದ್ದರು. ಆಗಾಗ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. 

ಸಿಸಿಬಿ ಹೆಸರಲ್ಲಿ ಬೆದರಿಕೆ

ಆಗಸ್ಟ್ 3ರಂದು ಉದ್ಯಮಿಗೆ ಕರೆ ಮಾಡಿದ್ದ ಯುವತಿ, ಭೇಟಿಯಾಗಬೇಕು ಎಂದು ಹೇಳಿ ಹೊಸೂರು ರಸ್ತೆಗೆ ಕರೆಸಿಕೊಂಡಿದ್ದಳು. ಸ್ಥಳಕ್ಕೆ ಬಂದ ಉದ್ಯಮಿಯ ಕಾರು ಅಡ್ಡಗಟ್ಟಿದ್ದ ಇಬ್ಬರು, "ಯುವತಿಯರ ಜೊತೆಗಿನ ವಾಟ್ಸಪ್‌ ಚಾಟಿಂಗ್ ಮತ್ತು ವಿಡಿಯೋ ತೋರಿಸಿ ಉದ್ಯಮಿಗೆ ಬೆದರಿಸಿದ್ದರು ಎನ್ನಲಾಗಿದೆ. ವೃದ್ಧನಿಂದ ಕಾರಿನ ಕೀ, ಮೊಬೈಲ್‌ ಕಸಿದ ಆರೋಪಿಗಳು, ತಾವು ಸಿಸಿಬಿ ಅಧಿಕಾರಿಗಳು ಎಂದು ಹೇಳಿ ಬಂಧಿಸುವ ಬೆದರಿಕೆ ಒಡ್ಡಿದ್ದರು. ಬಂಧಿಸಬಾರದು ಎಂದರೆ, ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರಂತೆ. ಹೆದರಿದ ಉದ್ಯಮಿ 50 ಸಾವಿರ ರೂ. ನೀಡಿದ್ದರು. ಅದೂ ಸಾಲಲಿಲ್ಲವೆಂದು ಹಂತ ಹಂತವಾಗಿ ಆರೋಪಿಗಳು 14.90 ಲಕ್ಷ ರೂಪಾಯಿ ವಸೂಲಿ ಮಾಡಿದ್ದರು ಎನ್ನಲಾಗಿದೆ. ಕಿರುಕುಳದಿಂದ ಬೇಸತ್ತ ಉದ್ಯಮಿ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಕರ್ನಾಟಕ ಹೈಕೋರ್ಟ್‌ಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

ಈ ಕುರಿತು ಈ ದಿನ.ಕಾಂ ಜತೆ ಮಾತನಾಡಿದ ಹಲಸೂರು ಗೇಟ್‌ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌, "ಯುವತಿಯರಿಂದ ಕೆಲ ಫೋಟೋ ಪಡೆದು ಇಬ್ಬರು ಆರೋಪಿಗಳು ಉದ್ಯಮಿಗೆ ಬೆದರಿಸಿದ್ದಾರೆ. ಬಳಿಕ ಅವರಿಂದ ಹಂತ ಹಂತವಾಗಿ ಹಣ ವಸೂಲಿ ಮಾಡಿದ್ದಾರೆ. ಆರೋಪಿಗಳ ಕಿರುಕುಳ ತಾಳಲಾರದೆ, ಉದ್ಯಮಿಯು ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸಿದ್ದೇವೆ. ಆತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ" ಎಂದರು. 

ನಿಮಗೆ ಏನು ಅನ್ನಿಸ್ತು?
0 ವೋಟ್