
- ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದಲ್ಲಿ ದಾಳಿ
- ರೌಡಿಶೀಟರ್ಗಳ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳ ತಂಡ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 86 ರೌಡಿಶೀಟರ್ಗಳ ಮನೆಗಳ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ ಎಸ್ ಡಿ ಶರಣಪ್ಪ ನೇತೃತ್ವದಲ್ಲಿ ಸಿಸಿಬಿಯ ಐವರು ಎಸಿಪಿ, 19 ಮಂದಿ ಇನ್ಸ್ಪೆಕ್ಟರ್ಗಳು ಹಾಗೂ 160 ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಂಡ ಬುಧವಾರ ಮುಂಜಾನೆ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್ಗಳ ಮನೆ ಮೇಲೆ ದಾಳಿ ನಡೆಸಿದೆ.
ದಾಳಿ ವೇಳೆ ಕುಖ್ಯಾತ ರೌಡಿ ನವೀನ್, ಸಿಸಿಬಿ ಪೊಲೀಸರನ್ನು ಕಂಡು ಹೆದರಿ ಓಡಿ ಹೋಗಿದ್ದಾನೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕುಶಲಕರ್ಮಿಗಳಿಗೆ ಸರ್ಕಾರದ ನೆರವು; ₹50 ಸಾವಿರ ಸಹಾಯಧನ
"ಈ ಎಲ್ಲ ರೌಡಿಶೀಟರ್ಗಳು ಕೊಲೆ, ಕೊಲೆಗೆ ಯತ್ನ, ದರೋಡೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇವರ ಮೇಲೆ ನಿಗಾ ವಹಿಸುವ ಮತ್ತು ರೌಡಿ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ. ದಾಳಿ ವೇಳೆ ರೌಡಿಶೀಟರ್ ಈಗ ಏನು ಕೆಲಸ ಮಾಡಿಕೊಂಡಿದ್ದಾರೆ, ಅವರ ಮೊಬೈಲ್ ಸಂಖ್ಯೆ, ಎಷ್ಟು ಮನೆಗಳಿವೆ, ಎಷ್ಟು ಕಚೇರಿಗಳಿವೆ; ಅವರು ಯಾರೊಂದಿಗಾದರೂ ಸಂಪರ್ಕ ಹೊಂದಿದ್ದಾರೆಯೇ ಹೀಗೆ ಪ್ರತಿಯೊಂದು ಮಾಹಿತಿ ಪಡೆದು ಅದನ್ನು ದಾಖಲಿಸಿಕೊಳ್ಳಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.