
- ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿರುವ ಘಟನೆ
- ರ್ಯಾಪಿಡೋ ಬೈಕ್ ಸವಾರ ಸೇರಿ ಇಬ್ಬರ ಬಂಧನ
ರ್ಯಾಪಿಡೋ ಬೈಕ್ ಸವಾರ ಮತ್ತು ಆತನ ಸ್ನೇಹಿತ ಕೇರಳ ಮೂಲದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ನಡೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕೇರಳ ಮೂಲದ ಯುವತಿ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರವೆಸಗಿದ್ದು, ವಿಚಾರವನ್ನು ಯಾರ ಬಳಿಯೂ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಯುವತಿ ನೀಡಿದ ದೂರಿನ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಹಾಬುದ್ದೀನ್, ಅಖ್ತರ್ ಎಂದು ಗುರುತಿಸಲಾಗಿದೆ.

ಬಿಟಿಎಂ ಲೇಔಟ್ನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ, ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಲು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಳು. ಪಿಕಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ?: ಸೈಲೆಂಟ್ ಸುನೀಲ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ: ಪಕ್ಷದ ಮೇಲಿನ ಟೀಕೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಸ್ಪಷ್ಟನೆ
ಪರಿಸ್ಥಿತಿಯ ಲಾಭ ಪಡೆದ ರ್ಯಾಪಿಡೋ ಬೈಕ್ ಸವಾರ, ಆರೋಪಿ ಶಹಾಬುದ್ದೀನ್, ಯುವತಿಯನ್ನು ರೂಮಿಗೆ ಕರೆದೊಯ್ದಿದ್ದಾನೆ. ಬಳಿಕ, ತನ್ನ ಸ್ನೇಹಿತನ ಜತೆ ಸೇರಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಪ್ರಜ್ಞೆ ಬಂದ ಬಳಿಕ ಯುವತಿಗೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಕಳಿಸಿದ್ದಾರೆ ಎನ್ನಲಾಗಿದೆ.
ಬಳಿಕ ಯುವತಿ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರನ್ನಾಧರಿಸಿ ಕ್ರಮ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.