
- 46.5 ಅಡಿ ತುಂಬಿದ ತಿಪ್ಪಗೊಂಡನಹಳ್ಳಿ ಜಲಾಶಯ
- ಬೆಂಗಳೂರು ಜನತೆಗೆ ಕುಡಿಯುವ ನೀರು ಪೂರೈಸುತ್ತಿದ್ದ ಜಲಾಶಯಗಳು
ನಿರಂತರ ಮಳೆಯಿಂದಾಗಿ ಬೆಂಗಳೂರು ಬಳಿಯ ತಿಪ್ಪನಗೊಂಡನಹಳ್ಳಿಯ ಜಲಾಶಯ ಹತ್ತು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಜುಲೈ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ, ತಿಪ್ಪಗೊಂಡನಹಳ್ಳಿ ಜಲಾಶಯವು ಆಗಸ್ಟ್ 5ರ ವೇಳೆಗೆ 46.5 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 69 ಅಡಿಯಷ್ಟಿದೆ.
ಅಲ್ಲದೆ, ಹೆಸರಘಟ್ಟ ಜಲಾಶಯದ ಗರಿಷ್ಠ ಮಟ್ಟ 50 ಅಡಿಯಾಗಿದ್ದು, ಸದ್ಯ 19 ಅಡಿ ನೀರು ಭರ್ತಿಯಾಗಿದೆ. ಆಗಸ್ಟ್ ಮೊದಲನೇ ವಾರದಲ್ಲೇ ಇಷ್ಟು ನೀರು ತುಂಬಿರುವುದು ಸುಮಾರು 12 ವರ್ಷಗಳಿಂದೀಚೆಗೆ ಇದೇ ಮೊದಲು ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಂಗಳೂರಿನಿಂದ 35 ಕಿ.ಮೀ ದೂರದ ಮಾಗಡಿ ರಸ್ತೆ ಬಳಿ ಇರುವ ತಿಪ್ಪಗೊಂಡನಹಳ್ಳಿ ಜಲಾಶಯವನ್ನು 1933ರಲ್ಲಿ ನಿರ್ಮಿಸಲಾಗಿತ್ತು. ಜಲಾಶಯವು 2012ರವರೆಗೆ ಬೆಂಗಳೂರು ಜನತೆಗೆ ಕುಡಿಯುವ ನೀರು ಪೂರೈಸುತ್ತಿತ್ತು. ಆದರೆ, ನಂತರದ ವರ್ಷಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂದ ಕಾರಣ ನೀರು ಸರಬರಾಜು ನಿಲ್ಲಿಸಲಾಗಿತ್ತು.
ಪ್ರತಿ ವರ್ಷವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವೇಳೆಯಲ್ಲಿ ಸುಮಾರು 50 ಅಡಿ ನೀರು ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ ಆಗಸ್ಟ್ ಆರಂಭದಲ್ಲೇ ಹೆಚ್ಚು ನೀರು ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ದೋಷಪೂರಿತ ರಾಷ್ಟ್ರಧ್ವಜ ಮಾರಾಟ ಮಾಡಬೇಡಿ: ವಿಶೇಷ ಆಯುಕ್ತ ರಂಗಪ್ಪ
ಅರ್ಕಾವತಿ ನದಿಯ ಉಪ ನದಿಯಾದ ಕುಮುದ್ವತಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿದು ನೀರಿನ ಮಟ್ಟ ಹೆಚ್ಚಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ 10 ರಿಂದ 12 ಅಡಿ ನೀರು ಬಂದರೆ ಅದೇ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿಯ ನಿರಂತರ ಮಳೆಯಿಂದಾಗಿ, ದೊಡ್ಡಬಳ್ಳಾಪುರದ ಅರ್ಕಾವತಿ ನಡಿಯಿಂದ ಹೆಸರಘಟ್ಟ ಜಲಾಶಯಕ್ಕೆ ನೀರು ಹರಿದು ಬಂದಿದ್ದು, ಜಲಾಶಯದ ಮಟ್ಟ 19 ಅಡಿಯಷ್ಟು ಏರಿಕೆಯಾಗಿದೆ.
ಹಲವು ವರ್ಷಗಳಿಂದ ಕೋಡಿ ಬಿದ್ದಿದ್ದ ಕಾರ್ಕೋಳು ಕೆರೆ ಮತ್ತು ಬ್ಯಾತ ಕೆರೆ ಇದೀಗ ತುಂಬುವ ಹಂತದಲ್ಲಿದೆ. ಆಗಸ್ಟ್ ಮೊದಲ ವಾರದಲ್ಲೇ ಅಧಿಕ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ ಎಂದಿದ್ದಾರೆ ಅಲ್ಲಿನ ನಾಗರಿಕರು.