ಬೆಂಗಳೂರು | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ 65 ಬಗೆಯ ಹೂವು!

LALBHAG
  • ಹೂವು ಪ್ರದರ್ಶನದೊಂದಿಗೆ ಹಲವು ಬಗೆಯ ಸ್ಪರ್ಧೆ
  • ರಾಜ್‌ ಮತ್ತು ಪುನೀತ್‌ ಅವರ ನೆನಪಿನ ಪ್ರದರ್ಶನ

ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಈ ಬಾರಿ ನಡೆಯಲಿದೆ. ಫಲಪುಷ್ಪ ಪ್ರದರ್ಶನದ ಮೂಲಕ ಪ್ರವಾಸಿಗರ ಗಮನ ಸೆಳೆಯಲು ವಿಭಿನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ ಜಗದೀಶ್ ಹೇಳಿದರು. 

ಫಲಪುಷ್ಪ ಪ್ರದರ್ಶನದ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ ಅವರು, "ಪ್ರಸ್ತುತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ಎಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಮಾರಂಭಕ್ಕಾಗಿ ಆಗಸ್ಟ್ 5ರಿಂದ 15ರ ತನಕ ಲಾಲ್‌ಬಾಗ್‌ನ ಗಾಜಿನ ಮನೆಯು ಪುಷ್ಪಗಳಿಂದ ಅಲಂಕರಿಸಲ್ಪಡುತ್ತಿದೆ" ಎಂದರು. 

ಕೋವಿಡ್ ಸಾಂಕ್ರಾಮಿಕದ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿರುವ ಈ ಹೊತ್ತಿನಲ್ಲಿ 10 ದಿನಗಳ ಕಾಲ ಪುಷ್ಪ  ಪ್ರದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜ್‌ಕುಮಾರ್ ಮತ್ತು ಅವರ ಪುತ್ರ ಪುನೀತ್‌ ರಾಜ್‌ಕುಮಾರ್ ಸ್ಮರಣಾರ್ಥವಾಗಿ ಮೂರು ಪರಿಕಲ್ಪನೆಗಳೊಂದಿಗೆ ಪುಷ್ಪ ಪ್ರದರ್ಶನಕ್ಕೆ ಯೋಜನೆ ಕೈಗೊಳ್ಳಲಾಗಿದೆ ಎಂದು ಪ್ರದರ್ಶನದ ಉಸ್ತುವಾರಿ ಹೊತ್ತಿರುವ ಜಗದೀಶ್ ಹೇಳಿದರು.

ಈಗಾಗಲೇ ಪ್ರದರ್ಶನಕ್ಕಾಗಿ ತಯಾರಿ ವಿಜೃಂಭಣೆಯಿಂದ ನಡೆಯುತ್ತಿದ್ದು, 2 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನ ಕಲಾ ಸಂಘವು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ 212ನೇ ಫಲಪುಷ್ಪ ಪ್ರದರ್ಶನ ಇದಾಗಿದ್ದು, ಆಗಸ್ಟ್‌ 5 ರಂದು ರಾಜ್‌ ಕುಟುಂಬ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. 

ಏನೆಲ್ಲ ಪ್ರದರ್ಶನ?

ಗಾಜನೂರಿನಲ್ಲಿರುವ ರಾಜ್‌ಕುಮಾರ್ ಅವರ ಪೂರ್ವಜರ ಮನೆ, ಮೈಸೂರಿನ ಶಕ್ತಿಧಾಮ ಹಾಗೂ ರಾಜ್ ಕುಟುಂಬದ ನೇತ್ರದಾನ ಯೋಜನೆ, ಐತಿಹಾಸಿಕ ಚಿತ್ರವಾದ ಬೇಡರ ಕಣ್ಣಪ್ಪ ಹಾಗೂ ಯೋಗ ಇವೆಲ್ಲ ಅಂಶಗಳೊಡನೆ ಮೆಗಾಫ್ಲೋನಲ್ಲಿ ರಾಜ್ ಮತ್ತು ಪುನೀತ್ ಅವರ ಕುರಿತು ಫಲಪುಷ್ಪ ಪ್ರದರ್ಶನ ಮಾಡಲಾಗುವುದು ಎಂದು ಜಗದೀಶ್ ವಿವರಿಸಿದರು.

ಈಗಾಗಲೇ ವಿದೇಶಗಳಿಂದ, ಶೀತವಲಯದಿಂದ ಹೀಗೆ ಒಟ್ಟಾರೆಯಾಗಿ 65 ಬಗೆಯ ಹೂವುಗಳನ್ನು ಇತರ ರಾಜ್ಯಗಳಾದ ತಮಿಳುನಾಡು, ಆಂಧ್ರದಿಂದ ತರಿಸಲಾಗಿದೆ ಎಂದರು.

ಈ ಬಾರಿ ಪ್ರದರ್ಶನದ ಶುಲ್ಕವನ್ನೂ ಹೆಚ್ಚಿಸಲಾಗಿದೆ, ಮಕ್ಕಳಿಗೆ 30 ರೂ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. 1ರಿಂದ 10ನೇ ತರಗತಿ ಶಾಲಾ ವಿದ್ಯಾರ್ಥಿಗಳು ಸಮವಸ್ತ್ರ ಮತ್ತು ಆಯಾ ವಿದ್ಯಾಸಂಸ್ಥೆಯ ಐಡಿಯೊಂದಿಗೆ ಬಂದರೆ ಮಾತ್ರ ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ. ಎಲ್ಲರಿಗೂ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ ಜಗದೀಶ್ ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಿಸಿದ ರಾಜ್ಯ ಚುನಾವಣೆ ಆಯೋಗ

ಪ್ರದರ್ಶನದ ಜೊತೆಗೆ ಸ್ಪರ್ಧೆ

ಆಗಸ್ಟ್ 12 ರಂದು ಡಾ. ಎಮ್. ಹೆಚ್ ಮರಿಗೌಡ ಅವರ ಸ್ಮಾರಕ ಭವನದಲ್ಲಿ ಸ್ಪರ್ಧೆ ಕೈಗೊಂಡಿದ್ದು, ಪ್ರದರ್ಶನದೊಂದಿಗೆ ಕೆಲವು ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಗಸ್ಟ್ 6 ರಂದು ಇಕಬಾನ ಶೋ ಏರ್ಪಡಿಸಿವೆ. ಕೆಲವು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಕುಂಡದಲ್ಲಿ ಬೆಳೆದ ತರಕಾರಿ ಮತ್ತು ಹೂವು ಸ್ಪರ್ಧೆ ಏರ್ಪಡಿಸಲಾಗಿದ್ದು, ಭಾಗವಹಿಸುವವರಿಗೆ ಬಹುಮಾನ ನೀಡಲಾಗುವುದು. ತೀರ್ಪುಗಾರರೇ ಖುದ್ದಾಗಿ ಸ್ಪರ್ಧಿಗಳ ಗಾರ್ಡನ್‌ಗಳಿಗೆ ತೆರಳಿ ಅವರ ತೋಟಗಾರಿಕೆಯ ಕೌಶಲ್ಯ ವೀಕ್ಷಿಸಿ ಬಹುಮಾನ ನೀಡುವರು. ರಾಜ್‌ಕುಮಾರ್, ಪುನೀತ್‌ ರಾಜಕುಮಾರ್ ಕುರಿತಾಗಿ ಪ್ರಬಂಧ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ.

ಈ ವರ್ಷದ ಲಾಲ್‌ಬಾಗ್‌ ಪುಷ್ಪ ಪ್ರದರ್ಶನ ಕಣ್ಮನ ಸೆಳೆಯುವಂತಿರುತ್ತದೆ, ಪ್ರವಾಸಿಗಳಿಗೆ, ಪುಷ್ಪಪ್ರಿಯರಿಗೆ ಇಷ್ಟವಾಗಲಿದೆ ಎಂದು ಜಗದೀಶ್ ಭರವಸೆ ವ್ಯಕ್ತಪಡಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್