ಬೆಂಗಳೂರು | ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು: ರಾತ್ರಿ ಇಡೀ ನಿದ್ರೆಗೆಟ್ಟ ಜನರು

rain in banglore
  • ನಗರದ ಹಲವು ಭಾಗಗಳಲ್ಲಿ ವಿದ್ಯುತ್‌ ಕಡಿತದ ಸಮಸ್ಯೆ
  • ರಾಜಕಾಲುವೆಗಳು ಉಕ್ಕಿ ಬಡಾವಣೆಗಳಿಗೆ ನುಗ್ಗಿದ ನೀರು

ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಹರಸಾಹಸ ಪಟ್ಟಿದ್ದಾರೆ. ವಾಹನ ದಟ್ಟಣೆ ಉಂಟಾಗಿ ಜನರು ಮನೆಗೆ ಮರಳಲು ಹೈರಾಣಾಗಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರವೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. 

ನಗರದಲ್ಲಿ ಸೋಮವಾರ ಸಂಜೆಯಿಂದ ಶುರುವಾದ ಮಳೆ, ಮಂಗಳವಾರ ಸಂಜೆಯವರೆಗೆ ಕೊಂಚ ಬಿಸಿಲು ಕಂಡಿತ್ತು. ಆದರೆ, ಸಂಜೆ ಮತ್ತೆ ಧಾರಾಕಾರ ಮಳೆ ಸುರಿದು, ರಾಜಕಾಲುವೆಗಳು ತುಂಬಿ ಹರಿದಿವೆ. ಹಲವಾರು ಮನೆಗಳಿಗೆ ನೀರು ನುಗ್ಗಿದೆ. ನೀರಿನ ನಡುವೆಯೇ ಜನರು ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ. 

ನಗರದ ಬಹುತೇಕ ಚರಂಡಿಗಳು ತುಂಬಿ ಹರಿದು, ರಸ್ತೆಗಳಲ್ಲಿ ನೀರು ನುಗ್ಗಿದೆ. ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ತಮ್ಮ ದಿನದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜನರು ಬಸ್‌ಗಾಗಿ ಗಂಟೆಗಟ್ಟಲೇ ನಿಲ್ದಾಣದಲ್ಲಿ ಕಾಯುವಂತಾಗಿತ್ತು.

 ನಗರದ ಹಲವು ಭಾಗಗಳಲ್ಲಿ ವಿದ್ಯುತ್‌ ಕಡಿತದ ಸಮಸ್ಯೆ ಎದುರಾಗಿದೆ. ಮರಗಳು ಧರೆಗುರುಳಿವೆ. ರಾಜರಾಜೇಶ್ವರಿ ನಗರದಲ್ಲಿ 38 ಮಿ.ಮೀ ಮಳೆಯಾಗಿದ್ದು, ನಾಯಂಡಹಳ್ಳಿ, ಉತ್ತರಹಳ್ಳಿ, ವಿದ್ಯಾಪೀಠ, ಜಯನಗರ, ಗೊಟ್ಟಿಗೆರೆ, ನಾಗರಬಾವಿ, ಕೆಂಗೇರಿ, ಗಾಳಿ ಆಂಜನೇಯ ದೇವಸ್ಥಾನ, ಸಂಪಂಗಿರಾಮನಗರದಲ್ಲಿ ಇನ್ನಿತರ ಭಾಗಗಳು ಬಹುತೇಕ ಜಲಾವೃತಗೊಂಡಿದ್ದವು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವೀಕ್ಷಣಾಲಯದಲ್ಲಿ 33.9 ಮಿಮೀ ಮಳೆ ದಾಖಲಾಗಿದೆ.

ಕಳೆದ ಮೂರು ದಿನಗಳಿಂದಲೂ ಭಾರೀ ಮಳೆಯಾಗುತ್ತಿದ್ದು, ನಗರದ ಹಲವು ಭಾಗಗಳಲ್ಲಿ ಒಂದು ಗಂಟೆಯಲ್ಲಿ 70 ಮಿ.ಮೀಗೂ ಹೆಚ್ಚಿನ ಮಳೆ ಸುರಿದಿದೆ. ರಾಜಕಾಲುವೆಗಳಲ್ಲಿ ಹರಿವು ಹೆಚ್ಚಾಗಿ ಬಡಾವಣೆಗಳಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ; ಜನರ ಪರದಾಟ

ನಗರದ ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್‌ನಲ್ಲಿ ಸುಮಾರು 144 ಮನೆಗಳಿಗೆ ಚರಂಡಿ ನೀರು ನುಗಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು, ಬೈಕ್‌ಗಳು ನೀರಿನಲ್ಲಿ ಮುಳುಗಡೆಯಾಗವೆ. ಯಲಹಂಕ, ಶ್ರೀರಾಮಪುರ, ಕುಮಾರಸ್ವಾಮಿ ಲೇಔಟ್, ಯಲಚೇನಹಳ್ಳಿ ಮತ್ತು ಉತ್ತರ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಂತ್ರಣ ಕೊಠಡಿಗೆ ಹಲವು ದೂರುಗಳು ಬಂದಿವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್