ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ | ಎಬಿವಿಪಿ ಕಾರ್ಯಕರ್ತರಿಂದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ

  • ವಿದ್ಯುತ್ ಕಡಿತಗೊಳಿಸಿದ ಜೆಎನ್‌ಯು ವಿವಿ
  • ಆವರಣದೊಳಗೆ ಇಂಟರ್ನೆಟ್‌ ಸೇವೆ ಸ್ಥಗಿತ

ಪ್ರಧಾನಿ ನರೇಂದ್ರ ಮೋದಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಲು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಮೇಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಸಂಘವು ಬಿಬಿಸಿಯ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಸಾಕ್ಷ್ಯಚಿತ್ರವನ್ನು ವಿವಿ ಆವರಣದಲ್ಲಿ ಪ್ರದರ್ಶಿಸಲು ಮಂಗಳವಾರ ರಾತ್ರಿ ಸಜ್ಜಾಗಿತ್ತು. ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಲು ವಿವಿ ಆಡಳಿತ ವಿದ್ಯುತ್ ಕಡಿತಗೊಳಿಸಿದೆ. ಸಾಲದೆಂಬಂತೆ ವಿವಿ ಆಡಳಿತ ಇಂಟರ್ನ್‌ಟ್‌ ಸೇವೆ ಸ್ಥಗಿತಗೊಳಿಸಿದೆ.

ವಿವಿಯ ವಿರೋಧದ ನಡುವೆ ಜೆಎನ್‌ಯು ವಿದ್ಯಾರ್ಥಿಗಳು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸಲು ಮುಂದಾಗಿದ್ದಾರೆ. ಆ ವೇಳೆ ಎಬಿವಿಪಿ ಕಾರ್ಯಕರ್ತರು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಎಬಿವಿಪಿಯ ಈ ನಡೆ ಖಂಡಿಸಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ತಡರಾತ್ರಿ ನವದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಗಲಭೆಗಳ ಕುರಿತು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸುತ್ತಿದ್ದಾಗ ಕಲ್ಲು ತೂರಾಟ ನಡೆಸಿದವರ ವಿರುದ್ಧ ದೂರು ದಾಖಲಿಸಿದ್ದಾರೆ. 

ವಿದ್ಯಾರ್ಥಿಗಳು 'ಇನ್‌ಕ್ವಿಲಾಬ್‌ ಜಿಂದಾಬಾದ್‌' ಘೋಷಣೆ ಕೂಗುವ ಮೂಲಕ ಪ್ರತಿಭಟನಾ ಮೆರವಣಿಗೆ ಹೊರಟಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ | ಒಂದು ವಿವಿಯಲ್ಲಿ ಪ್ರದರ್ಶನ, ಮತ್ತೊಂದರಲ್ಲಿ ತಯಾರಿ

ಈ ಕುರಿತು ಮಾತನಾಡಿರುವ  ಐಶೆ ಘೋಷ್, "ಕಲ್ಲು ತೂರಾಟ ನಡೆಸಿದವರ ವಿರುದ್ಧ ನಾವು ದೂರು ದಾಖಲಿಸಿದ್ದೇವೆ. ಘಟನೆಯ ಕುರಿತು ತಕ್ಷಣವೇ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ ಎಲ್ಲ ವ್ಯಕ್ತಿಗಳ ಹೆಸರು ಮತ್ತು ವಿವರ ನೀಡಿದ್ದೇವೆ. ಸದ್ಯಕ್ಕೆ ಪ್ರತಿಭಟನೆ ಕೈಬಿಡುತ್ತಿದ್ದೇವೆ. ನಾವು ಜೆಎನ್‌ಯು ಪ್ರಾಕ್ಟರ್ ಕಚೇರಿಯಲ್ಲಿಯೂ ದೂರು ದಾಖಲಿಸುತ್ತೇವೆ" ಎಂದು ಹೇಳಿದ್ದಾರೆ.

ಜೆಎನ್‌ಯು ಉಪಕುಲಪತಿ ಶಾಂತಿಶ್ರೀ ಪಂಡಿತ್, “ವಿವಿಯಲ್ಲಿ ವಿದ್ಯುತ್ ದೋಷವಿತ್ತು. ಅಧ್ಯಾಪಕರ ನಿವಾಸಗಳು ಮತ್ತು ಇತರ ಸೌಲಭ್ಯಗಳಲ್ಲೂ ಸಹ ಬೆಳಕಿರಲಿಲ್ಲ. ಎಂಜಿನಿಯರಿಂಗ್ ವಿಭಾಗವು ಸಮಸ್ಯೆಯನ್ನು ಪರಿಶೀಲಿಸುತ್ತಿದೆ" ಎಂದು ಪಂಡಿತ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರವನ್ನು ನಿರ್ಬಂಧಿಸಿರುವ ಬೆನ್ನಲ್ಲೇ ವಿದ್ಯಾರ್ಥಿಗಳ ಗುಂಪು ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶನ ಮಾಡಿತ್ತು. ಜೆಎನ್‌ಯು ಆವರಣದಲ್ಲೂ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು. ಗಲಾಟೆಯ ನಡುವೆ ಪ್ರದರ್ಶನ ರದ್ದಾಗಿದೆ. ಆದರೆ, ಅನೇಕ ವಿದ್ಯಾರ್ಥಿಗಳು ಮೊಬೈಲ್ ಪೋನ್‌ಗಳ ಮೂಲಕ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app