ಬಿಬಿಎಂಪಿ| ಸಿದ್ದರಾಮಯ್ಯ ಜನ್ಮದಿನೋತ್ಸವಕ್ಕೆ ಫ್ಲೆಕ್ಸ್‌ ಅಳವಡಿಸಿದವರ ವಿರುದ್ಧ ಎಫ್‌ಐಆರ್ ದಾಖಲು

bbmp
  • ಇಬ್ಬರು ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ದಾಖಲು
  • ಬಸವೇಶ್ವರ ವೃತ್ತದಲ್ಲಿ ಫ್ಲೆಕ್ಸ್ ಅಳವಡಿಸಿದ್ದ ಆರೋಪಿಗಳು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಶುಭ ಕೋರಲು ಫ್ಲೆಕ್ಸ್ ಅಳವಡಿಸಿದ್ದ ಕಾಂಗ್ರೆಸ್ ಮುಖಂಡರ ವಿರುದ್ಧ ಬೆಂಗಳೂರಿನ ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೂ ಜಾಹಿರಾತು ಫಲಕ ಅಳವಡಿಸಿದರೆ ಎಫ್ಐಆರ್ ದಾಖಲಿಸಲಾಗುವುದು ಎಂದು ಈ  ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿತ್ತು. ಹೈಕೋರ್ಟ್ ನಿರ್ದೇಶನದ ಅನ್ವಯ ಪಾಲಿಕೆ ಇಂಥದ್ದೊಂದು ಆದೇಶ ಹೊರಡಿಸಿತ್ತು. 

ಆದರೂ ಸಹ ನಿಯಮ ಉಲ್ಲಂಘಿಸಿ ಸಿದ್ದರಾಮಯ್ಯ ಅವರ ಜನ್ಮದಿನಕ್ಕೆ ಫ್ಲೆಕ್ಸ್ ಅಳವಡಿಸಿ ಶುಭ ಕೋರಿದ್ದ, ಕಾಂಗ್ರೆಸ್ ಮುಖಂಡರಾದ ಟಿ.ಎಸ್ ರಮೇಶ್ ಬಾಬು ಮತ್ತು ಜಯಬಾಲ ಎಂಬುವವರ ವಿರುದ್ಧ ಬಿಬಿಎಂಪಿಯ ವಸಂತನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಬಿ.ವಿ ವೀಣಾ ದೂರು ನೀಡಿದ್ದು, ಅವರ ದೂರಿನ ಮೇರೆಗೆ ವಿಧಾನಸೌಧದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ನಿಯಮ ಉಲ್ಲಂಘಿಸಿ ಬಸವೇಶ್ವರ ವೃತ್ತದಲ್ಲಿ ಫ್ಲೆಕ್ಸ್ ಅಳವಡಿಸಿದ್ದರಿಂದ ನಗರದ ಸೌಂದರ್ಯ ಕುಗ್ಗಿದೆ. ಹೀಗಾಗಿ ಶೀಘ್ರವೇ ಅವುಗಳ ತೆರವಿಗೆ ಸೂಚನೆ ನೀಡಿ, ಪ್ಲೆಕ್ಸ್ ಅಳವಡಿಸಿದವರ ವಿರುದ್ಧ ದೂರು ದಾಖಲಿಸಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ವರಮಹಾಲಕ್ಷ್ಮಿ ಹಬ್ಬದ ವ್ಯಾಪಾರದ ಭರಾಟೆ: ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಗೆ ಮುಖ್ಯ ಆಯುಕ್ತರ ಸೂಚನೆ

ಈ ಹಿಂದೆ ಸಿ.ಟಿ. ರವಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ವಿಧಾನಸೌಧದ ಎದುರು ಫ್ಲೆಕ್ಸ್ ಅಳವಡಿಸಿದ್ದ ಆರೋಪಿಗಳಾದ ಜಿ. ಕಿಶನ್ ಗೌಡ್ರು ಹಾಗೂ ಎಲ್. ನರೇಂದ್ರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜುಲೈ 26ರಿಂದ ಇಲ್ಲಿಯವರೆಗೂ 2,519 ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಪಾಲಿಕೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಸಹ ನಿಯಮಗಳಿಗೆ ಕಿವಿಗೊಡದೆ ಫ್ಲೆಕ್ಸ್ ಅಳವಡಿಸಿ ನಿಯಮ ಉಲ್ಲಂಘಿಸಿದರೆ, ದಂಡ ವಿಧಿಸುವ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಫ್ಲೆಕ್ಸ್‌, ಬ್ಯಾನರ್ ತೆರವಿಗೆ ತಗುಲುವ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್