ಬಿಬಿಎಂಪಿ | ಮೀಸಲಾತಿಗೆ ತಡೆ ನೀಡಿದರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ; ಚುನಾವಣಾ ಆಯೋಗದ ಪ್ರತಿಪಾದನೆ

  • ಜರೂರಾಗಿ ಬಿಬಿಎಂಪಿ ಚುನಾವಣೆ ನಡೆಸುವ ಅನಿವಾರ್ಯತೆಯಿದೆ 
  • ವಿಚಾರಣೆ ವಿಳಂಬವಾದರೆ ಸುಪ್ರೀಂ ಕೋರ್ಟಿನ ಮಾರ್ಗಸೂಚಿ ಉಲ್ಲಂಘನೆ

ಬಿಬಿಎಂಪಿಗೆ ಜರೂರಾಗಿ ಚುನಾವಣೆ ನಡೆಸಬೇಕಿದ್ದು, ಮೀಸಲಾತಿ ಪಟ್ಟಿ ಪ್ರಕಟಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೆ ಅದು ಸುಪ್ರೀಂ ಕೋರ್ಟಿನ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಕರ್ನಾಟಕ ಹೈಕೋರ್ಟ್ ಮುಂದೆ ಪ್ರತಿಪಾದಿಸಿದೆ. 

ಎಸ್ ಬಿ ಗುರುರಾಜ್ ಸೇರಿದಂತೆ ಹಲವರು ವಾರ್ಡ್ ವಿಂಗಡಣೆ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ರಾಜ್ಯ ಚುನಾವಣಾ ಆಯೋಗ ಪ್ರತಿನಿಧಿಸುವ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಈ ವಾದ ಮಂಡಿಸಿದ್ದಾರೆ.

ಈಗಾಗಲೇ ಬಿಬಿಎಂಪಿ ಚುನಾವಣೆ ವಿಳಂಬವಾಗಿದೆ. ತುಂಬಾ ಜರೂರಾಗಿ ಚುನಾವಣೆ ನಡೆಸುವ ಅನಿವಾರ್ಯತೆ ಇದೆ. ವಿಚಾರಣೆ ವಿಳಂಬವಾದರೆ, ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿ ಉಲ್ಲಂಘನೆಯಾಗುತ್ತದೆ ಎಂದು ಹಿರಿಯ ವಕೀಲ ಕೆ ಎನ್ ಫಣೀಂದ್ರ ನ್ಯಾಯಾಲಯದ ಗಮನಕ್ಕೆ ತಂದರು. 

"ಮೇ 20 ಜುಲೈ 28 ರಂದು ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ಅನ್ವಯ ನಾವು ಈಗಾಗಲೇ ಮತದಾರರ ಪಟ್ಟಿಯನ್ನು ತಯಾರಿಸಲು ಕ್ರಮ ಕೈಗೊಂಡಿದ್ದೇವೆ. ಈಗ ಏನಾದರೂ ಹೈಕೋರ್ಟ್ 198 ವಾರ್ಡ್‌ಗಳನ್ನೇ ಮುಂದುವರಿಸಲು ಹೇಳಿದರೆ, ಕಷ್ಟವಾಗುತ್ತದೆ. ಯಾಕೆಂದರೆ, ಸಾರ್ವಜನಿಕರ ತೆರಿಗೆ ಹಣದಿಂದ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ. 198 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದ ವೇಳೆ ಮತದಾರರ ಪಟ್ಟಿ ತಯಾರಿ ಸೇರಿ ವಿವಿಧ ಕಾರ್ಯಗಳಿಗೆ ಮೂರು ಕೋಟಿ ರೂಪಾಯಿ ಖರ್ಚಾಗಿತ್ತು. ಇದೀಗ ಮತ್ತೆ ಹಣ ಖರ್ಚು ಮಾಡಿ, ಮತದಾರರ ಪಟ್ಟಿ ತಯಾರಿಸುತ್ತಿದ್ದೇವೆ. ಒಂದು ವೇಳೆ ತಡೆಯಾಜ್ಞೆ ನೀಡಿದರೆ, ಮತ್ತೆ ಸಾರ್ವಜನಿಕರ ಹಣ ಪೋಲಾಗಲಿದೆ" ಎಂದರು.

ಅಲ್ಲದೆ, "ಬಿಬಿಎಂಪಿ ಚುನಾವಣೆ ಕಳೆದ ವರ್ಷವೇ ನಡೆಸಬೇಕಿತ್ತು. ಸಂವಿಧಾನದ ಪ್ರಕಾರ ಚುನಾವಣಾ ಆಯೋಗವು ಈಗ ಚುನಾವಣೆ ನಡೆಸಲೇಬೇಕಿದೆ" ಎಂದು ಹೇಳಿದರು.‌

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ದಾಖಲೆ ಸೃಷ್ಟಿಸಿದ ಮೆಟ್ರೋ; ಆಗಸ್ಟ್ 15ರಂದು 5.74 ಲಕ್ಷ ಪ್ರಯಾಣಿಕರ ಸಂಚಾರ

"ಬಿಬಿಎಂಪಿ ಕಾಯಿದೆ ಪ್ರಕಾರವೇ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ. ಎಲ್ಲ ವಾರ್ಡ್‌ಗಳು ಆಯಾಯ ವಿಧಾನಸಭಾ ಕ್ಷೇತ್ರದಲ್ಲೇ ಇವೆ. ಪ್ರತಿ ವಾರ್ಡ್‌ನಲ್ಲಿ ಸರಿಸುಮಾರು 35 ಸಾವಿರ ಜನರು ಇರುವಂತೆ ವಿಂಗಡಿಸಲಾಗಿದೆ. ಅರ್ಜಿದಾರರು ಆರೋಪಿಸುವಂತೆ ಯಾವುದೇ ವಾರ್ಡ್‌ ವಿಂಗಡಿಸಲಾಗಿಲ್ಲ" ಎಂದರು. 

ಅರ್ಜಿಗೆ ರಾಜ್ಯ ಸರ್ಕಾರವೂ ಆಕ್ಷೇಪಣೆ ವ್ಯಕ್ತಪಡಿಸಿದ್ದು, ವಾರ್ಡ್ ವಿಂಗಡಣೆಯನ್ನು ಸಮರ್ಥಿಸಿಕೊಂಡಿದೆ. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್