ಶಾಲೆಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ಹೇಳಿಕೆ: ಚರ್ಚೆ ಹುಟ್ಟು ಹಾಕಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್

  • ಸಂವಿಧಾನ ಅನುಚ್ಛೇದ 28(1) ಪ್ರಕಾರ ಶಾಲೆಗಳಲ್ಲಿ ಧರ್ಮದ ಆಚರಣೆಗೆ ಅವಕಾಶವಿಲ್ಲ
  • ಗಣೇಶ ಮೂರ್ತಿ ಸ್ಥಾಪನೆಯಿಂದ ಮತ್ತಷ್ಟು ಗಲಭೆಗಳು ನಡೆಯಬಹುದು

ಗೌರಿ-ಗಣೇಶ ಹಬ್ಬದ ಪ್ರಯುಕ್ತ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಅವಕಾಶ ನೀಡಿ ಅನುಮತಿ ನೀಡಿದ್ದಾರೆ. ಶಿಕ್ಷಣ ಸಚಿವರ ಈ ನಡೆಯು ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

“ರಾಜ್ಯದ ಶಾಲೆಗಳಲ್ಲಿ ಈಗಾಗಲೇ ಎಲ್ಲೆಲ್ಲಿ ಮೊದಲಿನಿಂದ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ, ಅವರಿಗೆ ಆಚರಣೆ ಮಾಡಲು ಅನುಮತಿ ಇದೆ. ಯಾಕೆಂದರೆ ಇದು ಸಮಾಜವನ್ನು ಜೋಡಿಸುವಂತಹ ಪ್ರಕ್ರಿಯೆ. ಅನುಮತಿ ತೆಗೆದುಕೊಂಡು ಆಚರಣೆ ಮಾಡಬಹುದು. ವ್ರತ ಬೇಕಾದರೂ ಮಾಡಬಹುದು” ಎಂದು ಬಿ ಸಿ ನಾಗೇಶ್ ಮಾಧ್ಯಮದವರಿಗೆ ತಿಳಿಸಿದ್ದಾರೆ. 

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ, “ಓರ್ವ ಜನಪ್ರತಿನಿಧಿಯಾಗಿ ಬಿ ಸಿ ನಾಗೇಶ್ ಅವರು ಒಂದು ಧರ್ಮಕ್ಕೆ ಸೇರಿದಂತ ಅಥವಾ ಒಂದು ಧರ್ಮವನ್ನು ಪ್ರತಿಪಾದಿಸುವಂತಹ ಸಚಿವರಾಗಿ ವರ್ತಿಸುತ್ತಿದ್ದಾರೆ. ಈ ನಡೆ ತಪ್ಪು. ಯಾಕೆಂದರೆ ಒಂದು ಶಾಲೆಗಳು ಯಾವುದೇ ಒಂದು ಧರ್ಮಕ್ಕೆ ತಕ್ಕಂತ ಆಚರಣೆಗಳನ್ನು ಮಾಡುವುದು ಸರಿಯಲ್ಲ. ಸಂವಿಧಾನದ ಅನುಚ್ಛೇದ 28(1) ಪ್ರಕಾರ ರಾಜ್ಯದ ನಿಧಿಯಿಂದ ಸಂಪೂರ್ಣವಾಗಿ ನಿರ್ವಹಿಸಲ್ಪಡುವ, ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಸೂಚನೆಗಳನ್ನು ನೀಡಲಾಗುವುದಿಲ್ಲ. ಒಂದು ಧರ್ಮದ ಆಚಾರ ವಿಚಾರಗಳನ್ನ ಬಲವಂತವಾಗಿ ಹೇರುವಂತ ಪ್ರಯತ್ನ ಮಾಡಬಾರದು" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಎನ್‌ಇಪಿ2020 | ಹೊಸ ಪಠ್ಯಕ್ರಮ ಸಿದ್ದತೆ: ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಕೇಂದ್ರ ಸರ್ಕಾರ

"ಹಿಜಾಬ್ ವಿಚಾರ ಬಂದಾಗ ಅದು ಕೂಡ ಧಾರ್ಮಿಕ ಆಚರಣೆ ಆಗಿತ್ತು. ಆದರೆ, ಅನುಚ್ಛೇದ 25ರ ಪ್ರಕಾರ ನ್ಯಾಯಾಲಯ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದಂತ ಆಚರಣೆಯನ್ನ ಒಂದು ಶಾಲೆಯಲ್ಲಿ ಮಾಡಬಾರದು ಎಂದು ಹೇಳಿತ್ತು. ಈ ರೀತಿ ಮಾಡುವುದರಿಂದ ನ್ಯಾಯಾಲಯದ ತೀರ್ಪನ್ನು ಉಲ್ಲಂಘನೆ ಮಾಡಿದ ಹಾಗೇ ಆಗುತ್ತದೆ. ಜಬಾಬ್ದಾರಿಯುವ ಸ್ಥಾನದಲ್ಲಿರುವವರು ಈ ರೀತಿ ಹೇಳುವುದು ತಪ್ಪು” ಎಂದು ತಿಳಿಸಿದರು. 

“ಸರ್ಕಾರಿ ಶಾಲೆಗಳಲ್ಲಿ ಎಲ್ಲ ಧರ್ಮದ ಮಕ್ಕಳು ಇರುತ್ತಾರೆ. ಅವರ ಧರ್ಮದ ಆಚರಣೆಗಳು ಬೇರೆ ಬೇರೆ ರೀತಿ ಇರುತ್ತದೆ. ಧರ್ಮದ ಆಚರಣೆ ಅವರ ಮೂಲಭೂತ ಹಕ್ಕು. ಆದರೆ, ಅವರ ಆಚರಣೆಗಳನ್ನು ಅವರವರ ಮನೆಗಳಲ್ಲಿ ಮಾಡಿಕೊಳ್ಳಲಿ. ಸಂವಿಧಾನ ಅದಕ್ಕೆ ಅವಕಾಶ ಕೊಟ್ಟಿದೆ. ಶಾಲೆ ಒಂದು ಧರ್ಮ ನಿರಪೇಕ್ಷಿತ ಇರುವಂತ ಜಾಗ. ರಾಜ್ಯ ತಾನು ಮುಂದೆ ನಿಂತು ಯಾವುದೇ ಒಂದು ಧರ್ಮವನ್ನ ಆಚರಣೆ ಅಥವಾ ಪೋಷಣೆ ಮಾಡಬಾರದು ಎಂಬುದು ಇದರರ್ಥ. ಹೀಗೆ ಮಾಡುವುದರಿಂದ ಬೇರೆ ಧರ್ಮದ ಮಕ್ಕಳು ಅವರವರ ಆಚರಣೆಗಳನ್ನು ಮಾಡಲು ಮುಂದಾಗುತ್ತಾರೆ. ಇದರಿಂದ ಮತ್ತಷ್ಟು ಗಲಭೆಗಳು ಕಿತ್ತಾಟಗಳು ಆಗುತ್ತದೆ. ಮತ್ತಷ್ಟು ದ್ವೇಷಕ್ಕೆ ಇದು ಪುಷ್ಟಿ ನೀಡಲಿದೆ” ಎಂದು ಸಚಿವರ ಹೇಳಿಕೆಯನ್ನು ಖಂಡಿಸಿದರು.

 

'ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಶಿಕ್ಷಣ ಸಚಿವರು ಅನುಮತಿ ನೀಡುವ ಮುಖಾಂತರ ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ಸೃಷ್ಠಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರವಾಗಿದೆ. ಅಂದು ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲವೆಂದ ಇದೇ ಸಚಿವರ ಇಂದಿನ ಹೇಳಿಕೆಯು ಏಕಪಕ್ಷೀಯವಾದ ತಾರತಮ್ಯ ಮತ್ತು ಸಂವಿಧಾನ ವಿರೋಧಿಯಾಗಿದೆ. ಇದು ಖಂಡನೀಯ' ಎಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ  ಪೂಂಜಾಲಕಟ್ಟೆ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್