ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಇಲಾಖೆಯಲ್ಲ: ಸುಪ್ರೀಂ ಕೋರ್ಟ್

bda
  • ಬಿಡಿಎ ಶಾಶ್ವತ ಉತ್ತರಾಧಿಕಾರ ಹೊಂದಿರುವ ಸಂಸ್ಥೆ
  • ಪ್ರಾಧಿಕಾರಕ್ಕೆ ಭೂಸ್ವಾಧೀನ ಮಾಡುವ ಅಧಿಕಾರವಿದೆ

ಬೆಂಗಳೂರಿನಲ್ಲಿ ಡಾ ಶಿವರಾಮ ಕಾರಂತ ಬಡಾವಣೆಗೆ ಟೆಂಡರ್ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯುವ ಅಗತ್ಯ ಇಲ್ಲ. ಯಾಕೆಂದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕರ್ನಾಟಕ ಸರ್ಕಾರದ ಇಲಾಖೆಯಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಬ್ದುಲ್‌ ಎಸ್‌ ನಜೀರ್‌ ಮತ್ತು ಸಂಜೀವ್‌ ಖನ್ನಾ ಅವರನ್ನೊಳಗೊಂಡ ಪೀಠವು, "ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1976ರ ಸೆಕ್ಷನ್‌ 3ರ ಅಡಿಯಲ್ಲಿ ಪ್ರಾಧಿಕಾರವನ್ನು ರಚಿಸಲಾಗಿದೆ. ಬಿಡಿಎ ಶಾಶ್ವತ ಉತ್ತರಾಧಿಕಾರ ಹೊಂದಿರುವ ಸಂಸ್ಥೆ. ಪ್ರಾಧಿಕಾರವು ಭೂ ಸ್ವಾಧೀನ ಮಾಡುವ, ವಿಲೇವಾರಿ ಮಾಡುವ ಅಧಿಕಾರ ಹೊಂದಿದೆ. ಅಲ್ಲದೆ, ಕಾಯ್ದೆಯಡಿ ಮಂಜೂರಾದ ಯೋಜನೆಗಳನ್ನು ಕಾರ್ಯಗತ ಮಾಡುವ ಅಧಿಕಾರವನ್ನೂ ಹೊಂದಿದೆ" ಎಂದು ಹೇಳಿದೆ.

ಟೆಂಡರ್ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಾಧಿಕಾರವು ಪ್ರಸ್ತಾವನೆ ಸಲ್ಲಿಸುವುದು ಅನಗತ್ಯ. ಇಂತಹ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವುದು ಸರ್ಕಾರಕ್ಕೆ ಕೂಡ ಕಾನೂನಾತ್ಮಕವಾಗಿ ಕಡ್ಡಾಯವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. 

"ಪ್ರಾಧಿಕಾರವು ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಸಂಪೂರ್ಣ ಭೂಮಿಗೆ ಆರು ವಾರಗಳ ಒಳಗೆ ಅರ್ಹತಾ ಪ್ರಮಾಣ ಪತ್ರಗಳನ್ನು ನೀಡಬೇಕು" ಎಂದು ನ್ಯಾಯಪೀಠ ನಿರ್ದೇಶಿಸಿದೆ. "ಒಂದು ವೇಳೆ ಈ ಬಗ್ಗೆ ಕ್ರಮ ವಹಿಸದಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದೆ. 

ಶಿವರಾಮ ಕಾರಂತ ಬಡಾವಣೆಯನ್ನು 17 ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ರಚಿಸುವ ಯೋಜನೆಗೆ ರಾಜ್ಯ ಸರ್ಕಾರ ಜುಲೈ 8ರಂದು ಅನುಮೋದನೆ ನೀಡಿತ್ತು. ಒಟ್ಟು 3,546 ಎಕರೆ 12 ಗುಂಟೆಯಲ್ಲಿ ಬಡಾವಣೆ ರಚಿಸಲು 5,337 ಕೋಟಿ ರೂ. ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. ಈ ಯೋಜನೆಗೆ ಸರ್ಕಾರದ ಅನುಮೋದನೆಯ ಅಗತ್ಯ ಇಲ್ಲ ಎಂದೂ ಪೀಠ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಅಪಘಾತಗಳಲ್ಲಿ ಹೆತ್ತವರನ್ನು ಕಳೆದುಕೊಂಡ ವಿವಾಹಿತ ಹೆಣ್ಣು ಮಕ್ಕಳು ವಿಮೆ ಪರಿಹಾರಕ್ಕೆ ಅರ್ಹರು: ಹೈಕೋರ್ಟ್

ಪ್ರಾಧಿಕಾರವು ಯಾವ ನಿಯಮದಡಿ ಬಡಾವಣೆ ನಿರ್ಮಿಸಲು ಅನುಮೋದನೆ ಪಡೆಯಬೇಕು. ಜತೆಗೆ ಅಂತಹ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಸರ್ಕಾರಕ್ಕೆ ಇರುವ ಶಾಸನಬದ್ಧ ಅಧಿಕಾರ ವ್ಯಾಪ್ತಿ ಬಗ್ಗೆ ವಿವರಣೆ ನೀಡುವಂತೆ ಕರ್ನಾಟಕ ಸರ್ಕಾರ ಮತ್ತು ಬಿಡಿಎ ಪರ ವಕೀಲರಿಗೆ ಸುಪ್ರೀಂ ಕೋರ್ಟ್‌ ಜುಲೈ 28ರಂದು ಸೂಚಿಸಿತ್ತು. ಈ ಬಗ್ಗೆ ಸರ್ಕಾರ ಮತ್ತು ಬಿಡಿಎ ವಕೀಲರು ಪ್ರತಿಕ್ರಿಯೆ ನೀಡಿದ್ದರು. ಆದರೆ, ಸರ್ಕಾರಕ್ಕೆ ಇರುವ ಶಾಸನಬದ್ಧ ಅಧಿಕಾರದ ಬಗ್ಗೆ ಸರ್ಕಾರ ಮತ್ತು ಬಿಡಿಎ ಪರ ವಕೀಲರಿಬ್ಬರೂ ಪ್ರತಿಕ್ರಿಯೆ ನೀಡಿಲ್ಲ ಎಂಬುದನ್ನು ಪೀಠವು ಗಮನಿಸಿತು.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಪಾಲನಾ ವರದಿ ಪರಿಶೀಲಿಸಿದ ನ್ಯಾಯಪೀಠವು, ವಿವಿಧ ಬಡಾವಣೆಗಳಲ್ಲಿ 96 ಪರ್ಯಾಯ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ಸಂಪೂರ್ಣ ವಿವರ ನೀಡುವಂತೆ ಪ್ರಾಧಿಕಾರಕ್ಕೆ ಸೂಚಿಸಿತು.

ನಿಮಗೆ ಏನು ಅನ್ನಿಸ್ತು?
1 ವೋಟ್