ಋತುಮಾನ ಆಪ್‌ನಲ್ಲಿ ಕುವೆಂಪು ಕಾದಂಬರಿ ʼಮಲೆಗಳಲ್ಲಿ ಮದುಮಗಳುʼ ಆಡಿಯೋ ಬುಕ್‌‌ ಬಿಡುಗಡೆ

ಮಲೆಗಳಲ್ಲಿ ಮದುಮಗಳು ಆಡಿಯೋ ಪುಸ್ತಕ ಬಿಡುಗಡೆ
  • ಸುಮಾರು 61 ಕಂತುಗಳಲ್ಲಿ 30 ಗಂಟೆಗಳ ಅವಧಿಯ ಆಡಿಯೋ ಬುಕ್‌
  • ಸಂಗೀತವಿಲ್ಲದ ಅವತರಣಿಕೆ ಕೂಡಾ ಬಿಡುಗಡೆಯಾಗಲಿದೆ

ಕನ್ನಡದ ಪ್ರಮುಖ ಸಾಹಿತ್ಯ ಕೃತಿಗಳ ಇ-ಪುಸ್ತಕ ಮತ್ತು ಆಡಿಯೋ ಪುಸ್ತಕಗಳನ್ನು ಪ್ರಕಟಿಸುವ ʼಋತುಮಾನʼ ಡಿಜಿಟಲ್‌ ಪ್ರಕಾಶನ ಸಂಸ್ಥೆ ತನ್ನ ಆಪ್‌ ನಲ್ಲಿ ರಾಷ್ಟ್ರಕವಿ ಕುವೆಂಪು ಅವರ ʼಮಲೆಗಳಲ್ಲಿ ಮದುಮಗಳುʼ ಕಾದಂಬರಿಯ ಆಡಿಯೋ ಪುಸ್ತಕವನ್ನು ಬಿಡುಗಡೆ ಮಾಡಿದೆ.

ಶನಿವಾರ ಸಂಜೆ ಈ ದಿನ.ಕಾಮ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಿಯೋ ಪುಸ್ತಕ ಬಿಡುಗಡೆಯಾಯಿತು.

ʼಸುಮಾರು 61 ಕಂತುಗಳಲ್ಲಿ 30 ಗಂಟೆಗಳ ಅವಧಿಯ ಈ ಆಡಿಯೋ ಬುಕ್‌ ಸಿದ್ಧಪಡಿಸಲಾಗಿದೆ. ಸುಮಾರು ಇಪ್ಪತ್ತೈದು ಮಂದಿ ಈ ಆಡಿಯೋ ಬುಕ್‌ ನಿರ್ಮಾಣದಲ್ಲಿ ಕೆಲಸ ಮಾಡಿದ್ದಾರೆ. ಐದು ವಾರಗಳ ಕಾಲ ರೆಕಾರ್ಡಿಂಗ್‌ ಮಾಡಲಾಗಿದೆʼ ಎಂದು ಋತುಮಾನದ ಸಂಸ್ಥಾಪಕ ನಿತೀಶ್‌ ಕುಂಟಾಡಿ ವಿವರಿಸಿದರು.

ʼಈ ಆಡಿಯೊ ಬುಕ್‌ ನಲ್ಲಿ ಸಂಗೀತ ಅಳವಡಿಸಲಾಗಿದೆ. ಸಂಗೀತವಿಲ್ಲದೇ ಇರುವ ಅವತರಣಿಕೆಯನ್ನು ಕೂಡ ಮುಂದೆ ಬಿಡುಗಡೆ ಮಾಡಲಾಗುವುದು. ಕೋಟಿಗಾನಹಳ್ಳಿ ರಾಮಯ್ಯ ಅವರ ʼಹಳೆ ಮೈಸೂರು ಭಾಗದ ಜನಪದ ಕತೆಗಳುʼ ಕೂಡ ಆಡಿಯೋ ಬುಕ್‌ ಆಗಿ ಬರಲಿದೆ. ಎರಡು ವರ್ಷಗಳಲ್ಲಿ ಏಳು ಆಡಿಯೋ ಬುಕ್‌ ನಿರ್ಮಾಣ ಮಾಡಿದ್ದೇವೆ. ಇ-ಬುಕ್‌ ಬಹಳಷ್ಟು ಬಂದಿವೆ. ಸುಮಾರು 10 ಸಾವಿರ ಕೇಳುಗರನ್ನು ಗಳಿಸಿದ್ದೇವೆʼ ಎಂದು ಮಾಹಿತಿ ನೀಡಿದರು.

ಮಲೆಗಳಲ್ಲಿ ಮದುಮಗಳು ಕಾದಂಬರಿಯ ಬಗ್ಗೆ ಮಾತನಾಡಿದ ಲೇಖಕ ದೇವರಾಜ್‌, ʼ19ನೇ ಶತಮಾನದ ಕತೆಯೊಂದು 20ನೇ ಶತಮಾನದಲ್ಲಿ ಕಾದಂಬರಿಯಾಗಿ, 21ನೇ ಶತಮಾನದಲ್ಲಿ ಆಡಿಯೋ ಬುಕ್‌ ರೂಪದಲ್ಲಿ ಬರುತ್ತಿರುವುದು ʼಅವಸರವು ಸಾವಧಾನದ ಬೆನ್ನೇರಿದೆʼ ಎಂಬ ಕುವೆಂಪು ಸಾಲುಗಳನ್ನು ನೆನಪಿಸುತ್ತದೆ. ವೇಗವೇ ಕಾಲಧರ್ಮವಾಗಿರುವ ಈ ಸಮಯದಲ್ಲಿ ಆಡಿಯೋ ಪುಸ್ತಕ ಸಚಿತ್ರವಾಗಿಯೂ, ಸಾವಧಾನವಾಗಿಯೂ ಬಂದಿದೆʼ ಎಂದರು.

ದೇವನೂರ ಮಹಾದೇವ ಅವರ ಕುಸುಮ ಬಾಲೆಗೆ ಬಂದಿರುವ ಮಹತ್ವದ ವಿಮರ್ಶೆ ಎಂದರೆ, ʼಮಲೆಗಳಲ್ಲಿ ಮದುಮಗಳ ಮೊಮ್ಮಗಳು ಕುಸುಮಬಾಲೆʼ ಎಂಬ ಓದುಗರೊಬ್ಬರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಅವರು, ಮೊಮ್ಮಗಳ ನಂತರ ಅಜ್ಜಿಯ ಆಡಿಯೊ ಪುಸ್ತಕ ಬಂದಿದೆ. ಆದರೆ ಹಲವು ಮೊಮ್ಮಕ್ಕಳು ಇದ್ದರೂ ಅಜ್ಜಿ ಇನ್ನೂ ಕಂಗೊಳಿಸುವ ಕೆಂಪು ಕೆನ್ನೆಯಂತಿದೆʼ ಎಂದು ಶ್ಲಾಘಿಸಿದರು.

ಹುಲಿಯ, ಗುತ್ತಿ ಎದೆಯೊಳಗೆ ಇಳಿದುಬಿಟ್ಟಿದ್ದಾರೆ: ಸಾಮಾಜಿಕ ಹೋರಾಟಗಾರ್ತಿ ದು. ಸರಸ್ವತಿ ಮಾತನಾಡಿ, ʼತಾನು ಬದುಕಿರುವಾಗ ಸುತ್ತಮುತ್ತಲಿನ ಲೋಕಕ್ಕೆ ಸ್ಪಂದಿಸಿ ಬರೆದಿರುವ ಕಾರಣ ಈಗಲೂ ಕುವೆಂಪು ನಮ್ಮ ಎದೆಯೊಳಗೆ ಬದುಕಿದ್ದಾರೆ. ಬೃಹತ್‌ ಕಾದಂಬರಿ ಬರೆದ ಮೇಲೆ ಮಂತ್ರ ಮಾಂಗಲ್ಯದಂಥ ಕ್ರಾಂತಿಕಾರಿ ಹೆಜ್ಜೆ ಇಟ್ಟವರು ಕುವೆಂಪು. ಅನಕ್ಷರಸ್ಥರನ್ನು ಕುವೆಂಪು ಲೋಕಕ್ಕೆ ಕರೆತರುವ ಕೆಲಸ ಆಗಬೇಕು. ಆಡಿಯೋ ಪುಸ್ತಕಗಳನ್ನು ಓದಲು ಬಾರದವರಿಗೆ ತಲುಪಿಸುವ ಕೆಲಸ ಆಗಬೇಕುʼ ಎಂದರು.

ಬಾಲ್ಯದಲ್ಲಿ ಓದಿದ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ನಾಯಿ ಗುತ್ತಿ, ಹುಲಿಯಾ, ಪೀಂಚಲು, ಐತ ಎದೆಯೊಳಗೆ ಇಳಿದುಬಿಟ್ಟಿದ್ದಾರೆ. ಈಗಲೂ ಕಾದಂಬರಿ ಓದಿದಾಗ ಆ ಕಾಲಕ್ಕೆ ಹೋದ ಅನುಭವವಾಗುತ್ತದೆ ಎಂದರು.

ಸಮಾನತೆ, ಆಧ್ಯಾತ್ಮ, ಆಧುನಿಕತೆಯ ತುಡಿತ: ಚಲನಚಿತ್ರ ನಿರ್ದೇಶಕ ಬಿ ಎಂ ಗಿರಿರಾಜ್‌ ಮಾತನಾಡಿ, ʼಆಡಿಯೋ ಪುಸ್ತಕದ ಮೂಲಕ ಮದುಮಗಳು ಹೊಸಮನೆಗೆ ಬಂದಿದ್ದಾಳೆʼ ಎಂದರು.

ʼಸಮಾನತೆ, ಆಧ್ಯಾತ್ಮ, ಆಧುನಿಕತೆಯ ತುಡಿತ ಇವು ಕುವೆಂಪು ಅವರ ಕೃತಿಗಳಲ್ಲಿ ಕಾಣಬಹುದು. ಕುವೆಂಪು ಸರಿಯಿಲ್ಲ ಎಂಬ ಮಾತುಗಳನ್ನು ಬಾಲ್ಯದಲ್ಲಿ ನಮ್ಮ ಕಿವಿಗೆ ಹಾಕಲಾಗಿತ್ತು. ಕುವೆಂಪು ನಾಟಕಗಳನ್ನು ನೋಡಿದ ನಂತರ ನಮ್ಮಪ್ಪ ಪುಸ್ತಕ ತಂದುಕೊಟ್ಟು ಓದಲು ಹೇಳಿದರು. ಈಗಲೂ ಪಠ್ಯಪುಸ್ತಕಗಳಿಂದ ಕುವೆಂಪು ಅವರನ್ನು ಹೊರಗಿಟ್ಟದ್ದು ಯಾಕೆ ಎಂಬುದು ಅರ್ಥವಾಗುತ್ತದೆʼ ಎಂದು ಹೇಳಿದರು.

ನಾಟಕವಾಗಿ ಮದುಮಗಳು: ಚಿಂತಕ ಕೆ ವೈ ನಾರಾಯಣಸ್ವಾಮಿ ಮಾತನಾಡಿ, ʼಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಹದಿಹರೆಯದಲ್ಲಿ ಓದಿದಾಗ ಕಣ್ಣುಗಳಿಂದ ಓದಿದ್ದೆ. ಎರಡನೇ ಬಾರಿ ಓದಿದಾಗ ಕಿವಿಗಳ ಮೂಲಕ ಪ್ರವೇಶಿಸಿದೆ. ಕುವೆಂಪು ಅವರು ಅನಾವರಣ ಮಾಡಿರುವ ಜಗತ್ತನ್ನು ನಾವು ಅನಾವರಣ ಮಾಡಿದ್ದು ಬಹಳ ಕಡಿಮೆʼ ಎಂದರು.

ʼಮಲೆಗಳಲ್ಲಿ ಮದುಮಗಳು ನಾಟಕ ಮಾಡುವಾಗ ಎದುರಾದ ಸಮಸ್ಯೆಗಳು, ಆತಂಕಗಳ ಬಗ್ಗೆ ಅವರು ಮಾತನಾಡಿದರು. 111 ಪ್ರದರ್ಶನ ಕಂಡ ನಾಟಕ ಟಿಕೆಟ್‌ ಮೂಲಕ 76,000 ಜನ ವೀಕ್ಷಿಸಿದ್ದಾರೆ. ಟಿಕೆಟ್‌ ಇಲ್ಲದೆ ನೋಡಿದವರ ಲೆಕ್ಕವಿಲ್ಲ. ನಾಟಕ ಪ್ರದರ್ಶನ ಕಂಡ ನಂತರ ಕಾದಂಬರಿಯ 15.000ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆʼ ಎಂದರು.

ಕಾರ್ಯಕ್ರಮದಲ್ಲಿ ಲೇಖಕರಾದ ನಾಗೇಗೌಡ ಕೀಲಾರ, ಗಿರೀಶ್‌ ಕೋಟೆ, ಪಲ್ಲವಿ ಇಡೂರು, ನಟ ಮಹೇಶ್‌, ಡಿ ಉಮಾಪತಿ, ಬಿ ಸಿ ಬಸವರಾಜು, ಹುಲಿಕುಂಟೆ ಮೂರ್ತಿ ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app