ಬೆಂಗಳೂರು | 83ರ ವೃದ್ಧೆ ಜಯಶ್ರೀ ಹತ್ಯೆ ಪ್ರಕರಣ ಸಂಬಂಧ ಆರು ಮಂದಿ ಬಂಧನ

  • ಮನೆಗೆ ಭದ್ರತೆ ಒದಗಿಸುವ ಸೋಗಿನಲ್ಲಿ ವೃದ್ಧೆ ಭೇಟಿಯಾಗಿದ್ದ ಹಂತಕರು
  • ಸಂಚು ರೂಪಿಸಿ ವೃದ್ಧೆ ಹತ್ಯೆಗೈದು ನಗದು, ಚಿನ್ನ ದೋಚಿದ ಕಿರಾತಕರು

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ ಠಾಣಾ ವ್ಯಾಪ್ತಿಯ ನಿವಾಸಿ, 83ರ ಹರೆಯದ ವೃದ್ಧೆ ಜಯಶ್ರೀ ಹತ್ಯೆ ಪ್ರಕರಣ ಸಂಬಂಧ ನೇಪಾಳಿ ಮೂಲದ ಓರ್ವ ಸೇರಿ ಆರು ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ಶಿವರಾಜ್‌ ಬಹದ್ದೂರ್‌ ಕೋಟಾಯತ್‌ ಅಲಿಯಾಸ್‌ ಶಿಬು, ಮುಕೇಶ್‌, ಕಮಲ್, ಕಡಖ್‌ ಸಿಂಗ್‌, ಗಜೇಂದ್ರ ಎಂದು ಗುರುತಿಸಲಾಗಿದೆ. ಬಂಧಿತರಿಂದ ಚಿನ್ನಾಭರಣ, 2.4 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. 

ಆಗಸ್ಟ್‌ 12ರ ತಡರಾತ್ರಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ವೃದ್ಧೆಯನ್ನು ಹತ್ಯೆಗೈದು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಕೆಲ ದಿನಗಳ ಹಿಂದೆ ಆರೋಪಿಗಳ ಪೈಕಿ ಇಬ್ಬರು ಮನೆಗೆ ಭದ್ರತೆ ಒದಗಿಸುವ ವಿಚಾರವಾಗಿ ಜಯಶ್ರೀಯೊಂದಿಗೆ ಮಾತನಾಡಿದ್ದರು. ಈ ವೇಳೆ ಎಲ್ಲವನ್ನೂ ಗಮನಿಸಿದ್ದ ದುಷ್ಕರ್ಮಿಗಳ ತಂಡ ಆಗಸ್ಟ್‌ 12 ರಂದು ಮನೆಗೆ ನುಗ್ಗಿ, ವೃದ್ಧೆ ಹತ್ಯೆಗೈದು ಚಿನ್ನಾಭರಣ, ನಗದು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು 'ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | 16 ಗಂಟೆ ಕೆಲಸ, ಚಿಲ್ಲರೆ ಕಾಸು: 'ಸ್ವಿಗ್ಗಿ ಇನ್ಸ್‌ಟಮಾರ್ಟ್‌ ಡೆಲಿವರಿ ಬಾಯ್‌'ಗಳಿಂದ ಪ್ರತಿಭಟನೆ

ಜಯಶ್ರೀ, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಅವರ ಪತ್ನಿ. ಕೆಲ ವರ್ಷಗಳ ಹಿಂದೆಯಷ್ಟೇ ಶ್ರೀನಿವಾಸ್ ತೀರಿಕೊಂಡಿದ್ದರು. ಅವರ ಮಗ, ಕಮ್ಮನಹಳ್ಳಿಯಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ. ಮಗಳು, ಕೆನಡಾದಲ್ಲಿದ್ದಾರೆ. ಜಯಶ್ರೀ ಅವರಿಗೆ ನಾಲ್ಕು ಮನೆಗಳಿದ್ದು, ಮೂರು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಕೆಳ ಮಹಡಿಯ ಮನೆಯಲ್ಲಿ ಒಂಟಿಯಾಗಿ ಅವರು ವಾಸವಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್