ಬೆಂಗಳೂರು | ರಸ್ತೆ ಬದಿಯಲ್ಲಿ ಬಿದ್ದಿದ್ದ ಉದ್ಯಮಿಯ ಹೆಣದ ಹಿಂದಿದೆಯೇ ʻಆಕೆʼಯ ಕೈಚಳಕ?

man death
  • ಮನೆಗೆ ಬಂದಿದ್ದ ವ್ಯಕ್ತಿ ಮೂರ್ಛೆ ರೋಗದಿಂದ ಸಾವು
  • ಚೀಲದಲ್ಲಿ ಮೃತದೇಹ ಕಟ್ಟಿ ಎಸೆದಿದ್ದ ಮಹಿಳೆ ವಶಕ್ಕೆ

ನವೆಂಬರ್‌ 17ರಂದು ಬೆಂಗಳೂರಿನ ಜೆ ಪಿ ನಗರದ ರೋಸ್‌ ಗಾರ್ಡನ್‌ ಪ್ರದೇಶದ ರಸ್ತೆಬದಿಯಲ್ಲಿ ಉದ್ಯಮಿಯೊಬ್ಬರ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

67 ವರ್ಷದ ಉದ್ಯಮಿಯ ಮೃತದೇಹವನ್ನು ಸಾರಕ್ಕಿಯ 35 ವರ್ಷದ ಮಹಿಳೆ ಮತ್ತು ಆಕೆಯ ಪತಿ ರಸ್ತೆಬದಿಯಲ್ಲಿ ಎಸೆದಿದ್ದರು ಎನ್ನಲಾಗಿದೆ. 

 ನ.17ರಂದು ಉದ್ಯಮಿಯೊಬ್ಬರ ಶವ ಪ್ಲಾಸ್ಟಿಕ್‌ ಚೀಲದಲ್ಲಿ ಪತ್ತೆಯಾಗಿತ್ತು. ಉದ್ಯಮಿ ತನ್ನ ಮನೆಯಲ್ಲಿ ಮೃತಪಟ್ಟಿದ್ದಾನೆ ಎಂಬ ಅಪಖ್ಯಾತಿಯಿಂದ ತಪ್ಪಿಸಿಕೊಳ್ಳಲು ಆಕೆ ತನ್ನ ಪತಿ ಮತ್ತು ಸಹೋದರನ ಸಹಾಯ ಪಡೆದು ಶವವನ್ನು ರಸ್ತೆಬದಿ ಎಸೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತದೇಹದ ಮೇಲೆ ಯಾವುದೇ ಗಾಯಗಳು ಗುರುತು ಪತ್ತೆಯಾಗದಿದ್ದರೂ, ಶವವು ರಸ್ತೆ ಬದಿ ಪತ್ತೆಯಾಗಿರುವುದಕ್ಕೆ ಉದ್ಯಮಿ ಕುಟುಂಬಸ್ಥರು ಇದೊಂದು ಕೊಲೆ ಎಂದು ಶಂಕಿಸಿದ್ದರು. ಮೃತರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. 

67 ವರ್ಷದ ಉದ್ಯಮಿಯು ಸಾರಕ್ಕಿಯ 35 ವರ್ಷದ ಗೃಹಿಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮೃತ ವ್ಯಕ್ತಿ 2022ರಲ್ಲಿ ಹೃದ್ರೋಗ ಚಿಕಿತ್ಸೆಗೆ ಒಳಗಾಗಿದ್ದರು. ಆತ ನ.16ರ ಸಂಜೆ 4.45ರ ಸುಮಾರಿಗೆ ಸಂಜೆ ಏಳು ಗಂಟೆಗೆ ಹಿಂತಿರುಗುವುದಾಗಿ ತಮ್ಮ ಸೊಸೆ ಬಳಿ ಹೇಳಿ ಮನೆಯಿಂದ ತೆರಳಿದ್ದರು. ತಡರಾತ್ರಿ ಆದರೂ ಅವರು ಮನೆಗೆ ಬರಲಿಲ್ಲ. ಕುಟುಂಬಸ್ಥರು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದಾಗ, ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.  

ಫೋನ್‌ನಿಂದ ಆರೋಪಿಯನ್ನು ಖೆಡ್ಡಾಗೆ ಕೆಡವಿದ ಪೊಲೀಸ್‌

ಸುಬ್ರಮಣ್ಯಪುರ ಠಾಣಾ ಪೊಲೀಸರು ನ.17ರ ಬೆಳಗ್ಗೆ 8 ಗಂಟೆ ಸುಮಾರಿಗೆ ಪುಟ್ಟೇನಹಳ್ಳಿ ಠಾಣಾ ಪೊಲೀಸರಿಗೆ ಉದ್ಯಮಿ ಮೃತದೇಹ ಸಿಕ್ಕಿರುವ ಕುರಿತು ಮಾಹಿತಿ ತಿಳಿಸಿದ್ದರು. ಪೊಲೀಸರು ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದರು. ಪೊಲೀಸರು ಮೃತನ ಮೊಬೈಲ್‌ ಪರಿಶೀಲಿಸಿದಾಗ, ನ.16ರಂದು ಕೊನೆಯ ಬಾರಿ ಸಾರಕ್ಕಿಯ ಮಹಿಳೆಗೆ ಕರೆ ಮಾಡಿರುವುದು ಪತ್ತೆಯಾಯಿತು. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ರಾತ್ರೋರಾತ್ರಿ 86 ರೌಡಿಶೀಟರ್‌ಗಳ ಮನೆ ಮೇಲೆ ಸಿಸಿಬಿ ದಾಳಿ

ಕೂಡಲೇ, ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಮೊದಲಿಗೆ ಮಹಿಳೆ, ಉದ್ಯಮಿ ತನಗೆ ಹಲವು ವರ್ಷಗಳಿಂದ ಪರಿಚಯವಿದ್ದರು ಅಷ್ಟೇ ಎಂದಳು. ಬಳಿಕ, ಆಗಾಗ ಉದ್ಯಮಿ ತನ್ನ ಮನೆಗೆ ಬರುತ್ತಿದ್ದರು. ಮೊನ್ನೆ ಮನೆಗೆ ಬಂದಾಗ ಹಾಸಿಗೆಯ ಮೇಲೆ ಮೂರ್ಛೆ ರೋಗ ಕಾಣಿಸಿಕೊಂಡಿತು. ಕೈಗೆ ಕೀ ಕೊಟ್ಟು, ಕೈ ಕಾಲು ಉಜ್ಜಿದರೂ, ಆತ ಬದುಕುಳಿಯಲಿಲ್ಲ ಎಂದು ಮಹಿಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.

ಎಲ್ಲಿ ತಮ್ಮಿಬ್ಬರ ಸಂಬಂಧ ಬಹಿರಂಗಗೊಳ್ಳುತ್ತದೆಯೋ ಎಂಬ ಭೀತಿಯಿಂದ ಆಕೆ ತನ್ನ ಪತಿ ಮತ್ತು ಸಹೋದರನ ಸಹಾಯ ಪಡೆದು ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆದಿದ್ದಳು ಎನ್ನಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180