ಭಾರತ್‌ ಜೋಡೋ | ಯಾತ್ರೆಯಲ್ಲಿ ಹೆಜ್ಜೆ ಹಾಕಿ ಶಿಕ್ಷಣದ ದುರವಸ್ಥೆ ಮುಂದಿಟ್ಟ ಮಹಾರಾಷ್ಟ್ರದ ಶಿಕ್ಷಕರು

  • ಯುವಜನರು ಜಾತಿ, ಧರ್ಮದ ಅಮಲಿನಲ್ಲಿರುವಂತೆ ಮಾಡುತ್ತಿರುವ ಆಡಳಿತ ಸರ್ಕಾರ
  • ಯಾತ್ರೆಯಲ್ಲಿ ಗಮನ ಸೆಳೆದ 10,000 ಚದರಡಿಯ ರಾಹುಲ್‌ ಗಾಂಧಿ ರಂಗೋಲಿ

ಭಾರತ್‌ ಜೋಡೋ ಯಾತ್ರೆ 67ನೇ ದಿನ ತಲುಪಿದ್ದು, ಮಹಾರಾಷ್ಟ್ರದ ಹಿಂಗೋಲಿಯಲ್ಲಿ ನಡೆದ ರ್‍ಯಾಲಿಯಲ್ಲಿ ರಾಹುಲ್‌ ಗಾಂಧಿ, ನಿರುದ್ಯೋಗ, ಗುತ್ತಿಗೆ ಆಧಾರದಲ್ಲಿ ಸೈನಿಕರ ನೇಮಕ ಸಮಸ್ಯೆಗಳು, ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಚೀನಾ ಉತ್ಪನ್ನಗಳ ಬಳಕೆಯ ಬಗ್ಗೆ ಮಾತನಾಡಿದ್ದಾರೆ.

ಹೊತ್ತಿನ ಊಟಕ್ಕೂ ಒದ್ದಾಡುತ್ತಿರುವ ಶಿಕ್ಷಕರು

Eedina App

ಭಾರತ್‌ ಜೋಡೋ ಯಾತ್ರೆಗೆ ಹಲವಾರು ಶಿಕ್ಷಕರು ಬೆಂಬಲ ಸೂಚಿಸಿದ್ದು, ಮಹಾರಾಷ್ಟ್ರದ ಹಿಂಗೋಲಿಯಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದರು. ಶಿಕ್ಷಣ ಅವ್ಯವಸ್ಥೆಯ ಬಗ್ಗೆ ರಾಹುಲ್‌ ಗಾಂಧಿಯೊಂದಿಗೆ ಚರ್ಚೆ ನಡೆಸಿದ ಅವರು, "ಶಿಕ್ಷಕರು ಆದಾಯದ ಕೊರತೆಯಿಂದ ಬಳಲುತ್ತಿದ್ದು, ಇದು ಇಡೀ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಆಡಳಿತ ಸರ್ಕಾರದ ಭರವಸೆಗಳು ಕೇವಲ ಸುಳ್ಳು ಆಶ್ವಾಸನೆಗಳಾಗಿವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ಶಿಕ್ಷಕರು ದಿನಕ್ಕೆ ಎರಡು ಹೊತ್ತಿನ ಊಟ ಹೊಂದಿಸಲು ಕಷ್ಟಪಡುವ ಸ್ಥಿತಿ ಇದೆ. ಶಿಕ್ಷಣ ವ್ಯವಸ್ಥೆಯು ಇಂದು ಕಾರ್ಪೋರೇಟಿಕರಣವಾಗಿದೆ. ನಮ್ಮ ಆದಾಯವೂ ತುಂಬಾ ಕಡಿಮೆ ಆಗಿದೆ. ನಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಹೇಗೆ ಎಂದು ಚಿಂತಿಸುವಂತೆ ಮಾಡುತ್ತಿದೆ. ದೇಶದ ಪರಿಸ್ಥಿತಿ ಹದಗೆಟ್ಟಿದೆ. ಎರಡು ಕೋಟಿ ಉದ್ಯೋಗ, 100 ಮೆಟ್ರೊ ಸಿಟಿ ನಿರ್ಮಾಣ ಎಂಬ ಭರವಸೆಗಳನ್ನು ಸರ್ಕಾರ ನೀಡಿದ್ದವು. ಆದರೆ, ಯಾವ ಭರವಸೆಯೂ ಈಡೇರಿಲ್ಲ. ಇವೆಲ್ಲವೂ ಕೇವಲ ಸುಳ್ಳು ಭರವಸೆಗಳೇ ಆಗಿವೆ” ಎಂದು ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಕೃಷ್ಣರಾವ್‌ ರೆಡ್ಡಿ ಅಭಿಪ್ರಾಯಪಟ್ಟರು.

AV Eye Hospital ad

“ಪ್ರಸ್ತುತ ಬದಲಾವಣೆಯ ಪರ್ವ ಶುರುವಾಗಿದೆ. ನಾನು ಈ ಪಾದಯಾತ್ರೆಯ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ಈ ಯಾತ್ರೆಯು ನನ್ನ ಕುಟುಂಬದವರ ಭವಿಷ್ಯವು ನೆಮ್ಮದಿಯಿಂದ ಇರಲು ಸಾಧ್ಯವಿದೆ ಎಂಬ ನಂಬಿಕೆಯನ್ನು ಮೂಡಿಸಿದೆ” ಎಂದು ಕಾಲೇಂಗಾವ್‌ನಲ್ಲಿ ದಿನದ ಯಾತ್ರೆಯ ಅಂತ್ಯದಲ್ಲಿ ಮಾಡಿದ ಭಾಷಣದಲ್ಲಿ ಅವರು ಹೇಳಿದ್ದಾರೆ.

“ಅಗ್ನಿವೀರ್‌ ಹೆಸರಿನಲ್ಲಿ ಯುವಜನರನ್ನು ಗುತ್ತಿಗೆ ಆಧಾರದ ಮೇಲೆ ಸೇನೆಗೆ ನೇಮಿಸಿಕೊಳ್ಳುತ್ತಿದ್ದಾರೆ. ಅವರಿಗೆ ಆರು ತಿಂಗಳ ತರಬೇತಿ ನೀಡಿ ಯುದ್ಧಕ್ಕೆ ಕಳುಹಿಸಲಾಗುತ್ತದೆ. 'ಯುದ್ಧಕ್ಕೆ ಸಜ್ಜಾಗುವಷ್ಟು ತಯಾರಿ ಇಲ್ಲದೇ ಅಗ್ನಿವೀರ್‌ಗಳು ಏಳೆಂಟು ವರ್ಷಗಳ ತರಬೇತಿ ಪಡೆದ ಚೀನಾ ಸೈನಿಕರ ವಿರುದ್ಧ ಹೋರಾಡಲು ಶಕ್ತರಾಗುತ್ತಾರೆಯೆ? ಆತ್ಮಸ್ಥೈರ್ಯ ಅವರಲ್ಲಿ ಇರಲಿದೆಯೆ?' ಎಂದು ಹಲವಾರು ಮಾಜಿ ಸೈನಿಕರು ನನಗೆ ಹೇಳುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕವಾಗುವ ‘ಅಗ್ನಿವೀರ್‌’ಗಳು ನಾಲ್ಕೈದು ವರ್ಷಗಳ ನಂತರ ಉದ್ಯೋಗದಿಂದ ಹೊರಬಂದಾಗ ಅವರಿಗೆ ಯಾವ ಉದ್ಯೋಗ ಸಿಗುತ್ತದೆ? ಗುತ್ತಿಗೆ ಸೈನಿಕರಲ್ಲಿ ಉಂಟಾಗುವ ನಿರುದ್ಯೋಗ ಸಮಸ್ಯೆಗೆ ಪರಿಹಾರವೇನು?" ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ಪ್ರಶ್ನಿಸಿದ್ದಾರೆ.

ಈ ಯಾತ್ರೆಯುದ್ದಕ್ಕೂ ನಾನು ರೈತರೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ಫಸಲು ಭೀಮಾ ವಿಮೆ ಯೋಜನೆಯಡಿ ಬೆಳೆ ವಿಮೆಯ ಕಂತುಗಳನ್ನು ಕಟ್ಟುತ್ತಿದ್ದಾರೆ. ಆದರೆ ಫಸಲು ಹಾಳಾದಾಗ ಯಾರಿಗೂ ಪರಿಹಾರ ಸಿಕ್ಕಿಲ್ಲ” ಎಂದು ಯೋಜನೆಗಳ ಹೆಸರಿನಲ್ಲಿ ಹಣ ದೋಚುತ್ತಿರುವುದನ್ನು ವಿರೋಧಿಸಿದ್ದಾರೆ.

ದೇಶದಲ್ಲಿ ನಾವು ಬಳಸುತ್ತಿರುವ ಪ್ರತಿಯೊಂದು ಉತ್ಪನ್ನ ಕೂಡ ಚೀನಾ ಮೂಲದ್ದಾಗಿದೆ. ಮೇಕ್‌ ಇನ್‌ ಇಂಡಿಯಾ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಬಳಕೆಯ ವಸ್ತುಗಳೆಲ್ಲವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ಭಾರತೀಯರಿಗೆ ಉದ್ಯೋಗ ಸಿಗುವುದಿಲ್ಲ. ಉದ್ಯೋಗದ ಬಗ್ಗೆ ಯೋಚನೆಯನ್ನು ಮರೆಸಲು ಧರ್ಮ, ಜಾತಿಯ ಅಮಲನ್ನು ಯುವಜನರಲ್ಲಿ ತುಂಬುತ್ತಿದ್ದಾರೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮೈಸೂರು | ಮುರುಘಾ ಮಠ ಅತ್ಯಾಚಾರ ಪ್ರಕರಣ: ನ.15ಕ್ಕೆ ಪ್ರಗತಿಪರ ಸಂಘಟನೆಗಳ ಸಭೆ

 

ರಂಗೋಲಿಯಲ್ಲಿ ರಾಹುಲ್‌ ಗಾಂಧಿ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿ ಕಲಾವಿದರು ಸುಮಾರು 10,000 ಚದರ ಅಡಿ ಪ್ರದೇಶದಲ್ಲಿ ರಾಹುಲ್‌ ಗಾಂಧಿಯ ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಛತ್ತೀಸ್‌ಗಢ ಸರ್ಕಾರದ ಮಹತ್ವದ ನಿರ್ಧಾರ

“ಸಂವಿಧಾನ ದೇಶದ ಹೆಮ್ಮೆ, ನನ್ನ ಭಾರತ ಮಹಾನ್‌...  ‘ದೇಶ್ ಕಿ ಅವಾಜ್' ದೇಶವನ್ನು ಸಾಂವಿಧಾನಿಕ ಮೌಲ್ಯಗಳೊಂದಿಗೆ ಗುರುತಿಸುವಂತೆ ಮಾಡುತ್ತದೆ. ನೆಹರು ಜನ್ಮ ದಿನಾಚರಣೆಯಂದು ಛತ್ತೀಸ್‌ಗಢ ಕಾಂಗ್ರೆಸ್ ಸರ್ಕಾರದ ಮಹತ್ವದ ನಿರ್ಧಾರ. ಶೀಘ್ರದಲ್ಲೇ ಬರಲಿದೆ” ಎಂದು ಭಾರತ್‌ ಜೋಡೋ ಟ್ವೀಟ್‌ ಮಾಡಿದೆ. ಈ ಟ್ವೀಟ್‌ನಲ್ಲಿ ಮಕ್ಕಳು ದೇಶದ ಬಗ್ಗೆ ಹಾಡುತ್ತಿದ್ದಾರೆ.

ಹಿಂಗೋಲಿಯಲ್ಲಿ ನಡೆಯುತ್ತಿರುವ ಜೋಡೋ ಯಾತ್ರೆಯಲ್ಲಿ ಗ್ರಾಮಸ್ಥರೊಬ್ಬರು ಗಿಡ ಹಿಡಿದು ರಾಹುಲ್‌ ಜೊತೆ ನಡೆದಿರುವುದು ನೆಟ್ಟಿಗರ ಗಮನ ಸೆಳೆದಿದೆ. ರಾಹುಲ್‌ ಗಾಂಧಿ ಆ ಗ್ರಾಮಸ್ಥನ ಭುಜದ ಮೇಲೆ ಕೈಹಾಕಿ ಜೊತೆಯಲ್ಲಿ ನಡೆದಿದ್ದಾರೆ.

ಯಾತ್ರೆ ಬೆಂಬಲಿಸಿ ಸಾರ್ವಜನಿಕ ಜಾಗೃತಿ ಅಭಿಯಾನ

ಯಾತ್ರೆಯನ್ನು ಬೆಂಬಲಿಸಿ ಅಲಹಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘದ ಭವನದಿಂದ ಸುಭಾಷ್‌ ಚೌರಾಹವರೆಗೆ ಪಾದಯಾತ್ರೆ ನಡೆಸಿ ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ ಹಾಗೂ ದ್ವೇಷದ ವಿರುದ್ಧ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸಿದ್ದಾರೆ.

ಕಾಂಗ್ರೆಸ್‌ ಸೇವಾದಳದ  ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಲಾಲ್ಜಿ ದೇಸಾಯಿ ಅವರು ಇಂದು ಮಕ್ಕಳ ದಿನದಂದು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪಂಡಿತ್ ನೆಹರು ಅವರ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದ ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ಆವೃತ್ತಿಯನ್ನು ಭಾರತದ ಪ್ರಯಾಣಿಕರಿಗೆ ವಿತರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app