
- ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ್ದ ಎನ್ಐಎ ಕೋರ್ಟ್
- ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ
ಭೀಮಾ ಕೊರೆಗಾಂವ್ ಪ್ರಕರಣದ ಆರೋಪಿ ಜ್ಯೋತಿ ಜಗತಾಪ್ ಅವರಿಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ಈ ಹಿಂದೆ ಜಾಮೀನು ನೀಡಲು ನಿರಾಕರಿಸಿದ್ದ ಎನ್ಐಎ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜ್ಯೋತಿ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠವು ವಿಚಾರಣೆ ನಡೆಸಿತು.
ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನಿಷೇಧಿಸಲಾಗಿರುವ ಕಬೀರ್ ಕಲಾ ಮಂಚ್ (ಕೆಕೆಎಂ) ಸದಸ್ಯರಾಗಿದ್ದಾರೆ ಎಂದು ಆರೋಪಿಸಿ 2020ರ ಸೆಪ್ಟೆಂಬರ್ 8ರಂದು ಜಗತಾಪ್ ಅವರನ್ನು ಬಂಧಿಸಲಾಗಿತ್ತು. ಜಗತಾಪ್, ಅವರ ಸ್ನೇಹಿತರಾದ ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆ ಅವರನ್ನೂ ಬಂಧಿಸಲಾಗಿತ್ತು. ಎನ್ಐಎ, 2020ರ ಅಕ್ಟೋಬರ್ 9ರಂದು ಇವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
2022ರ ಫೆಬ್ರವರಿ 14ರಂದು ಎನ್ಐಎ ನ್ಯಾಯಾಲಯವು ಈ ಮೂವರು ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ಆರೋಪಿಗಳು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ಮೋದಿಯವರನ್ನೂ ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು ಎಂದು ಎನ್ಐಎ ನ್ಯಾಯಾಲಯ ಹೇಳಿತ್ತು.
"ಪ್ರಕರಣದ ಸಹ ಆರೋಪಿ ರೋನಾ ವಿಲ್ಸನ್ ನೀಡಿದ ಪತ್ರದಲ್ಲಿ ಆರೋಪಿಗಳು ಮೋದಿ ಹತ್ಯೆ ಮಾಡಲು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾವೋವಾದಿ) ಸಹಾಯ ಕೋರಿದ್ದರು. ಅಲ್ಲದೆ, ಮೋದಿಯವರ ರೋಡ್ ಶೋಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಕುರಿತ ಪ್ರಾಥಮಿಕ ಮಾಹಿತಿ ಪತ್ತೆಯಾಗಿದೆ" ಎಂದು ವಿಶೇಷ ನ್ಯಾಯಾಧೀಶ ಡಿ ಇ ಕೊತಲಿಕರ್ ಹೇಳಿದ್ದರು.
"ದಿವಂಗತ ರಾಜೀವ್ ಗಾಂಧಿ ಅವರ ಸಾವು ಹೇಗೆ ನಡೆದಿತ್ತು ಎಂಬುದರ ಕುರಿತು ಎಲ್ಲರಿಗೂ ತಿಳಿದಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿರುವ ಮನವಿಯಲ್ಲಿದೆ. ಈಗಿನ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೇಳಿ ಬಂದಿರುವ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದೆ. ಆರೋಪಿಗಳು ದೇಶದ ಏಕತೆ, ಸಮಗ್ರತೆಗೆ ಬೆದರಿಕೆಯನ್ನುಂಟು ಮಾಡುವ ಉದ್ದೇಶ ಹೊಂದಿದ್ದರು. ಭಾರತದ ಭದ್ರತೆ, ಸಾರ್ವಭೌಮತ್ವಕ್ಕೆ ಕುತ್ತು ತರುವುದು, ಸಾವು-ನೋವನ್ನುಂಟು ಮಾಡುವುದು ಆರೋಪಿಗಳ ಉದ್ದೇಶವಾಗಿತ್ತು" ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ನ್ಯಾಯಾಲಯ ಹೇಳಿತ್ತು.
ಈ ಸುದ್ದಿ ಓದಿದ್ದೀರಾ?: ಮಾನನಷ್ಟ ಮೊಕದ್ದಮೆ | ಸಮನ್ಸ್ ಜಾರಿ ಪ್ರಶ್ನಿಸಿ ಮನೋಜ್ ತಿವಾರಿ ಸಲ್ಲಿಸಿದ್ದ ಅರ್ಜಿ ವಜಾ
ಕೆಕೆಎಂ ಎಂಬುದು 2002ರ ಗುಜರಾತ್ ಗಲಭೆ ನಂತರ ರೂಪಿತಗೊಂಡ ಸಾಂಸ್ಕೃತಿಕ ತಂಡ. 2006ರಲ್ಲಿ ಖೈರ್ಲಾಂಜಿ ದುರ್ಘಟನೆ ಸಂಭವಿಸಿದ ಬಳಿಕ ಕೆಕೆಎಂ ತಂಡದ ಕಾರ್ಯಕ್ರಮಗಳು ತೀವ್ರವಾದಿ ಸ್ವರೂಪ ಪಡೆದುಕೊಂಡಿದ್ದವು. ಈ ತಂಡವು ʼಜೈ ಭೀಮ್ ಕಾಮ್ರೇಡ್ʼ ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿ ರಾಷ್ಟ್ರಪ್ರಶಸ್ತಿ ಪಡೆದಿತ್ತು. ಈ ಗುಂಪು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ-ಮಾವೋವಾದಿ) ಜೊತೆ ಸಂಪರ್ಕ ಹೊಂದಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಮೂವರು ಆರೋಪಿಗಳು 2017ರ ಡಿಸೆಂಬರ್ 31ರಂದು ನಡೆದ ʼಭೀಮಾ ಕೊರೆಗಾಂವ್ ಶೌರ್ಯ ದಿನʼ ಕಾರ್ಯಕ್ರಮದ ಸಂಘಟಕರಾಗಿದ್ದರು ಎಂದು ಎನ್ಐಎ ಆರೋಪಿಸಿತ್ತು.