ಬಿಗ್‌ಬುಲ್‌ ಆರ್‌ಜೆ ಯುಗಾಂತ್ಯ: ದೇಶದ ಹೂಡಿಕೆದಾರರಿಗೆ ಈಗ ಗುರುವೂ ಇಲ್ಲ, ಗುರಿಯೂ ಇಲ್ಲ

ಸ್ಟಾಕ್‌ ಮಾರ್ಕೆಟ್‌ಗೆ ಸಲ್ಲದ ಪ್ರೀತಿ ಮತ್ತು ಅದಕ್ಕೆ ಬೇಕಾದ ವಿರಕ್ತಿ ಎರಡನ್ನೂ ಬೆಳೆಸಿಕೊಂಡು ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ ಜುಂಜುನ್‌ವಾಲಾ ಭಾರತದ ವಾರೆನ್‌ ಬಫಿಟ್‌ ಎನಿಸಿಕೊಂಡರು
rakesh junjunwala

ಭಾನುವಾರ ಸ್ಟಾಕ್‌ ಮಾರ್ಕೆಟ್‌ಗಳಿಗೆ ರಜೆ. ಆದರೆ, ದೇಶದ ಅಷ್ಟೂ ಹೂಡಿಕೆದಾರರಿಗೆ, ಅದರಲ್ಲೂ ಮಾರುಕಟ್ಟೆ ಯಾವತ್ತೂ ಮುಗಿಲಿನತ್ತ ಮುಖ ಮಾಡಿ ಓಡುತ್ತಿರುತ್ತದೆ ಎನ್ನುವ ನಂಬಿಕೆ ಇಟ್ಟ ಬುಲ್‌ಗಳಿಗೆಲ್ಲಾ ಮಾರ್ಕೆಟ್‌ ನೆಲಕಪ್ಪಳಿಸಿದಷ್ಟೇ ಆಘಾತ.

"ದೇಶದ ಬಿಗ್‌ಬುಲ್ ಜುಂಜುನ್‌ವಾಲಾ ಇನ್ನಿಲ್ಲ". ಇದು ಸಾಮಾನ್ಯವಾಗಿ ಮಾರುಕಟ್ಟೆ ತೆಗೆದುಕೊಳ್ಳುವ ಹೊತ್ತಲ್ಲಿ ಬಂದ ಸುದ್ದಿ. ಅವರು ರಾಕೇಶ್‌ ಜುಂಜುನ್‌ವಾಲಾ. ಭಕ್ತ ಬುಲ್‌ಗಳ ಪಾಲಿಗೆ ಬಿಗ್‌ಬುಲ್‌. ಅವರ ಹೆಜ್ಜೆ ಗುರುತು ಹಿಡಿದುಕೊಂಡು ಹೋಗಿ ಅವರು ಕಾಸು ಹಾಕಿದ ಕಡೆಯೆಲ್ಲಾ ತಾವೂ ಹಣ ಹೂಡಿ ಅದನ್ನು ದುಪ್ಪಟ್ಟು ಮಾಡಿಕೊಂಡವರ ಪಾಲಿಗೆ ಆರ್.ಜೆ. ಅವರು ರೇಡಿಯೋ ಜಾಕಿ ಅಲ್ಲ. ಸ್ಟಾಕ್‌ ಮಾರ್ಕೆಟ್‌ ಜಾಕಿ. ದೇಶದ ಸ್ಟಾಕ್‌ ಮಾರ್ಕೆಟ್‌ಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದವು.

ಫೋಬ್ಸ್ ಪಟ್ಟಿಯ ಪ್ರಕಾರ ದೇಶದ 36ನೇ ಶ್ರೀಮಂತ. ಸಾಯುವ ಹೊತ್ತಿಗೆ ಸುಮಾರು 25 ಸಾವಿರ ಕೋಟಿ ಒಡೆಯ. ಹುಟ್ಟಿದ್ದು ಮುಂಬೈನಲ್ಲಿ, ಅಪ್ಪ ತೆರಿಗೆ ಇಲಾಖೆ ಆಧಿಕಾರಿ. ಅಪ್ಪ ತನ್ನ ಗೆಳೆಯರೊಬ್ಬರ ಜತೆ ಸ್ಟಾಕ್‌ ಮಾರ್ಕೆಟ್‌ ಬಗ್ಗೆ ಮಾತನಾಡುತ್ತಿದ್ದದ್ದನ್ನು ಕೇಳಿ ಆ ಬಗ್ಗೆ ಕುತೂಹಲ. 

ಸಿ.ಎ ಓದಿ ನಂತರ ಸೋದರನ ಗೆಳೆಯರ ಬಳಿ ಹಣ ಪಡೆದು ಮಾರ್ಕೆಟ್‌ನಲ್ಲಿ ಹೂಡಿದರು. ಮೊದಲು ಖರೀದಿಸಿದ್ದು ಟಾಟಾ ಟೀಯ ಐದು ಸಾವಿರ ಶೇರುಗಳನ್ನು. ಖರೀದಿಸಿದಾಗ ಶೇರಿಗೆ 43 ರೂ. ಮೂರು ತಿಂಗಳುಗಳಲ್ಲಿ ಅದು 143 ರೂ. ಮುಟ್ಟಿತು. ಅಲ್ಲಿಗೆ ಆರ್‌.ಜೆ. ಭವಿಷ್ಯ ರೂಪುಗೊಂಡಿತ್ತು.

ಹಲವು ಬಾರಿ ಬಿದ್ದರೂ ಮುಂದೆ ಮೇಲೇಳುವುದು ಹೇಗೆ ಎಂದು ಕಲಿತರು. ತಾವಷ್ಟೇ ಮೇಲೇಳಲಿಲ್ಲ, ಹಲವು ಕಂಪನಿಗಳನ್ನೂ ಮೇಲೆತ್ತಿದರು. ಕಂಪನಿಗಳ ಪ್ರೊಫೈಲ್‌ಗಳ ಅಂಕಿ-ಅಂಶಗಳನ್ನೆಲ್ಲಾ ಜರಡಿ ಹಿಡಿದು ಅವುಗಳ ಭವಿಷ್ಯವನ್ನು ತಿಳಿದು, ಅವುಗಳ ಮೇಲೆ ಹಣ ಹೂಡುತ್ತಾ ಸಾಗಿದರು. 

ಟೈಟಾನ್‌ ಕಂಪನಿಯ ಭವಿಷ್ಯವನ್ನು ಹೀಗೆ ತಿಳಿದ, ಅದನ್ನು ಆರಂಭದಿಂದ ಕೊನೆಯವರೆಗೂ ಗಟ್ಟಿಯಾಗಿ ಹಿಡಿದುಕೊಂಡ ಆರ್.ಜೆ ಆ ಕಂಪನಿಯ ಅಂಧಭಕ್ತನಾಗಿ ಹೋಗಿದ್ದರು. 'ಯಾವ ಕಂಪನಿಯ ಬಗ್ಗೆಯೂ, ನಿಮ್ಮ  ಖಾತೆಯಲ್ಲಿನ ಶೇರುಗಳ ಬಗ್ಗೆಯೂ ಮೋಹ ಬೆಳೆಸಿಕೊಳ್ಳಬೇಡಿ' ಎಂದು ಕಂಡ ಕಂಡವರಿಗೆಲ್ಲಾ ಬೋಧಿಸಿದ ಆರ್‌.ಜೆ, ತಾವು ಮಾತ್ರ ಟೈಟಾನ್‌ ಮೇಲಿನ ಪ್ರೀತಿ ಕಡಿಮೆ ಮಾಡಿಕೊಳ್ಳಲಿಲ್ಲ. ಅದರಿಂದ ಅವರಿಗೆ ಆದ ಲಾಭವೇ ಹೆಚ್ಚು. ಟೈಟಾನ್‌ ಜತೆಗೆ ಎಸ್ಕಾರ್ಟ್ಸ್‌  ಕಂಪನಿಯ ಬಗ್ಗೆಯೂ ಪ್ರೀತಿಯೋ ಪ್ರೀತಿ.

ಹೀಗೆ ಸ್ಟಾಕ್‌ ಮಾರ್ಕೆಟ್‌ಗೆ ಸಲ್ಲದ ಪ್ರೀತಿ ಮತ್ತು ಅದಕ್ಕೆ ಬೇಕಾದ ವಿರಕ್ತಿ ಎರಡನ್ನೂ ಬೆಳೆಸಿಕೊಂಡು ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ ಜುಂಜುನ್‌ವಾಲಾ ಭಾರತದ ವಾರೆನ್‌ ಬಫಿಟ್‌ ಎನಿಸಿಕೊಂಡರು. ಗುರು, ಡಿಮಾಟ್‌ನ ಸ್ಥಾಪಕ ರಾಧಾಕೃಷ್ಣ ಧಮಾನಿ ಇಬ್ಬರೂ ದೇಶದ ಕೋಟ್ಯಂತರ ಜನರನ್ನು ಸ್ಟಾಕ್‌ ಮಾರ್ಕೆಟ್‌ಗೆ ಎಳೆದು ತಂದರು. 

ಆರ್‌ಜೆ ನಿಜಕ್ಕೂ ಅತಿ ದೊಡ್ಡ ಪಾತ್ರ ವಹಿಸಿದ್ದು ಜಗತ್ತನ್ನೆಲ್ಲಾ ಕರೋನಾ ಅಪ್ಪಳಿಸಿ ಜನರೆಲ್ಲಾ ಮನೆ ಸೇರಿಕೊಂಡರಲ್ಲ ಆಗ. ಬಿದ್ದರೂ ಭಯ ಪಡದೆ, ಬಾಗಿಲು ತೆರೆದುಕೊಂಡು ಕುಳಿತದ್ದು ದೇಶದ ಸ್ಟಾಕ್‌ ಮಾರ್ಕೆಟ್‌ಗಳು ಮಾತ್ರ. ಕುಳಿತಲ್ಲೇ ಕಾಸು ಮಾಡುವ ವಿಧಾನಗಳನ್ನು ಗೂಗಲ್‌ ಮಾಡುತ್ತಿದ್ದ ಜನರಿಗೆ ಕಾಣಿಸಿದ್ದು ನೆಲಕಚ್ಚಿ ಹೊರಳಾಡುತ್ತಿದ್ದ ಶೇರು ಮಾರುಕಟ್ಟೆ. ಅಲ್ಲಿ ನಿಜವಾದ ʼಶೇರ್‌ʼನಂತೆ ಅಬ್ಬರಿಸುತ್ತಾ "ಇದು ಬುಲ್‌ ಮಾರ್ಕೆಟ್‌ನ ಕೊನೆಯಲ್ಲ. ದೇಶದ ಮಾರುಕಟ್ಟೆಯಲ್ಲಿ, ಕಂಪನಿಗಳಲ್ಲಿ ನಂಬಿಕೆ ಇಡಿ" ಎಂದು ಕೂಗುತ್ತಿದ್ದರು ರಾಕೇಶ್‌.

ಜನರು ಕುತೂಹಲಕ್ಕಾಗಿಯಾದರೂ ಶೇರು ಖರೀದಿಸುವಂತೆ ಮಾಡಿದ್ದು ಇದೇ ಕೂಗು. ಕರೋನಾದ ಕಾಲದಲ್ಲಿ ಕುಳಿತಲ್ಲೇ ಕೋಟ್ಯಧೀಶರಾದ ಹಲವರಿಗೆ ಈ ಬಿಗ್‌ಬುಲ್‌ ಗುರು. ಬೆಳಗೆದ್ದು ಮಾರುಕಟ್ಟೆ ತೆರೆಯುವ ಮೊದಲೇ ಆರ್‌ಜೆ ಯಾವ ಶೇರು ಖರೀದಿಸಿದರು ಎನ್ನುವುದನ್ನು ತಿಳಿಯುವುದು, ಅದರಲ್ಲಿ ಹಣ ಹೂಡುವುದು ಕೋಟ್ಯಂತರ ಜನರ ದಿನಚರಿಯಾಯ್ತು. ಆರ್‌ಜೆ ಮಾರಿದ ಕಂಪನಿಯ ಶೇರುಗಳನ್ನು ತಾವೂ ಮಾರಿ ನಿಟ್ಟುಸಿರು ಬಿಟ್ಟವರೂ ಕೋಟ್ಯಂತರ ಜನ. ರಾಕೇಶ್‌ ಹೇಳಿದ್ದನ್ನೆಲ್ಲಾ ಮಂತ್ರ ಎಂದುಕೊಂಡು ಪಾಲಿಸಿ, ಬೀದಿಗೆ ಬಿದ್ದವರ ಸಂಖ್ಯೆಯೂ ಕಡಿಮೆಯಲ್ಲ. ಒಂದೇ ದಿನದಲ್ಲಿ ನೂರಾರು ಕೋಟಿ ಲಾಭ, ಒಂದೇ ದಿನದಲ್ಲಿ ನೂರಾರು ಕೋಟಿ ನಷ್ಟ.. ಇದು ಆರ್‌ಜೆ ಕಂಡ ಏರಿಳಿತಗಳು. 

ಈ ಸುದ್ದಿ ಓದಿದ್ದೀರಾ?

ಭಾರತದ ʼಬಿಗ್‌ಬುಲ್‌ʼ ರಾಕೇಶ್‌ ಜುಂಝನ್‌ವಾಲಾ ನಿಧನ; ಗಣ್ಯರ ಸಂತಾಪ

ಕರೋನಾ ಹೊಡೆತದ ನಡುವೆಯೂ ದೇಶದ ಸ್ಟಾಕ್‌ ಮಾರ್ಕೆಟ್‌ಗಳು ಮತ್ತೆ ಮತ್ತೆ ಏಳುತ್ತಾ ಬಂದವಲ್ಲ ಅದರ ಶ್ರೇಯಸ್ಸು ಮೋದಿ ಸರಕಾರಕ್ಕೋ, ಈರುಳ್ಳಿ, ಬೆಳ್ಳುಳ್ಳಿ ತಿನ್ನದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೋ ಸಲ್ಲಬೇಕಾದ್ದಲ್ಲ. ಈ ಹಸಿರಿನ ಓಕುಳಿಗೆಲ್ಲಾ ಆರ್‌ಜೆಯೇ ಕಾರಣ. ಮತ್ತೆ ನೆಲಕಚ್ಚಲು ಆತುರ ತೋರುತ್ತಿದ್ದ ಮಾರುಕಟ್ಟೆಗಳು ಮತ್ತೆ ಎದ್ದು ಓಡುತ್ತಿವೆಯೆಲ್ಲಾ ಅದರ ಭವಿಷ್ಯವನ್ನು ನುಡಿದದ್ದು ಮಾತ್ರ ಇವರೇ. ಆದರೆ, ಅದರ ಶ್ರೇಯಸ್ಸನ್ನೆಲ್ಲಾ ಮೋದಿ ಸರಕಾರಕ್ಕೆ ಧಾರೆ ಎರೆಯಲು ತೋರಿದ ಆತುರ, ಅವರ ಪ್ರಾಮಾಣಿಕತೆಯ ಬಗ್ಗೆ ಅನುಮಾನ ಮೂಡಿಸಿತ್ತು.

ಈ ನಡುವೆ ಅವರು ʼಆಕಾಸʼ ಎನ್ನುವ ಏರ್‌ಲೈನ್ಸ್‌ ಕಂಪನಿಯನ್ನೂ ಆರಂಭಿಸಿದರು. ಅದಕ್ಕೆ ಅರ್ಜಿ ಸಲ್ಲಿಸುವ ಮೊದಲು ನಡೆದ ಮೋದಿ ಭೇಟಿ, ನಂತರ ಅದಕ್ಕೆ ಇದ್ದ ಎಲ್ಲ ಅಡೆ ತಡೆಗಳು ನಿವಾರಣೆಗೊಂಡ ವೇಗ ಇವೆಲ್ಲಾ ಈ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಈಗ ʼಆಕಾಸʼದ ಮೊದಲ ವಿಮಾನ ಹಾರಿ ವಾರವಾಗಿದೆ. 

ಆರ್‌ಜೆ ಸುದ್ದಿ ಓದಿ ಹಣ ಹೂಡುವ ಗೀಳು ಹಚ್ಚಿಸಿಕೊಂಡಿರುವ ಹೂಡಿಕೆದಾರರು ಮಂಗಳವಾರ ಶೇರು ಮಾರುಕಟ್ಟೆ ಬಾಗಿಲು ತೆಗೆದಾಗ ಏನು ಮಾಡುತ್ತಾರೆ ಎನ್ನುವುದು ಈಗಿನ ಪ್ರಶ್ನೆ. ಈಗ ಹಲವರಿಗೆ ಗುರುವೂ ಇಲ್ಲ, ಸದ್ಯಕ್ಕೆ ಗುರಿಯೂ ಇಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್