ಬಿಹಾರ| ಕಳ್ಳಭಟ್ಟಿ ದುರಂತ; 12 ಜನ ಸಾವು, ಐವರ ಬಂಧನ

bihar1
  • ಶ್ರಾವಣ ಮಾಸದ ಹಬ್ಬದಲ್ಲಿ ಮದ್ಯಪಾನ ಮಾಡುವ ಸಂಪ್ರದಾಯವಿದೆ  
  • ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣಾಧಿಕಾರಿ, ಸಿಬ್ಬಂದಿ ಅಮಾನತು

ಬಿಹಾರದ ಸರಣ್‌ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 12 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 12 ಮಂದಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ಅನೇಕರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ (ಆಗಸ್ಟ್‌ 6) ತಿಳಿಸಿದ್ದಾರೆ. 

ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ರಾಜೇಶ್‌ ಮೀನಾ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಕುಮಾರ್‍‌ ಛಪ್ರಾದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ಪ್ರಕರಣದಲ್ಲಿ ಕಳ್ಳಭಟ್ಟಿ ತಯಾರಿಕೆ ಆರೋಪದಲ್ಲಿ ಐವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಸಂಚಲನ ಸೃಷ್ಟಿಸಿದ ಮೋದಿ- ದೀದಿ ಭೇಟಿ| 45 ನಿಮಿಷ ಮೋದಿಯೊಂದಿಗೆ ಸಭೆ, ಬಾಕಿ ಅನುದಾನ ಕೋರಿದೆ ಎಂದ ಮಮತಾ!

ಮಾಕರ್‍‌ ಪೊಲೀಸ್‌ ಠಾಣಾ ವ್ಯಾಪ್ತಿಯ ಪುಲ್‌ವರಿಯಾ ಪಂಚಾಯತ್‌ ವ್ಯಾಪ್ತಿಯಲ್ಲಿ ಅನೇಕ ಜನ ಅಸ್ವಸ್ಥಗೊಂಡಿರುವ ಬಗ್ಗೆ ಗುರುವಾರ (ಆಗಸ್ಟ್‌ 4) ಮಾಹಿತಿ ದೊರೆತಿತ್ತು. ಅಬಕಾರಿ ಅಧಿಕಾರಿಗಳು ಮತ್ತು ವೈದ್ಯರನ್ನು ಒಳಗೊಂಡ ಪೊಲೀಸ್ ತಂಡವು ಸ್ಥಳಕ್ಕೆ ಭೇಟಿ ನೀಡಿತ್ತು. ಅಸ್ವಸ್ಥಗೊಂಡವರನ್ನು ಹತ್ತಿರದ ಸಾದರ್‍‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಸ್ವಸ್ಥರು ಗಂಭೀರಗೊಂಡದ್ದರಿಂದ ಪಾಟ್ನಾದ ಪಿಎಂಸಿಎಚ್‌ ಆಸ್ಪತ್ರೆಗೆ ರವಾನಿಸಲಾಯಿತು ಎಂದು ತಿಳಿಸಿದರು. 

ಒಂಬತ್ತು ಮಂದಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟರೆ, ಖಾಸಗಿ ಆಸ್ಪತ್ರೆಯಲ್ಲಿ ಒಬ್ಬರು ಹಾಗೂ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಮತ್ತೊಬ್ಬ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು. 

“ಇನ್ನೂ 12 ಮಂದಿ ಪಿಎಂಸಿಎಚ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರಾವಣ ಮಾಸದ ಹಬ್ಬದ ಸಂದರ್ಭದಲ್ಲಿ ಮದ್ಯಪಾನ ಮಾಡುವ ಸಂಪ್ರದಾಯ ಗ್ರಾಮಸ್ಥರಲ್ಲಿ ಇದೆ ಎಂದು ತಿಳಿದು ಬಂದಿದೆ. ಆಗಸ್ಟ್‌ 3 ರಂದು ಹಬ್ಬ ನಡೆದಿತ್ತು. ಅಂದು ಗ್ರಾಮಸ್ಥರು ಮದ್ಯ ಸೇವಿಸಿದ್ದರು. ಬಳಿಕ ಅಸ್ವಸ್ಥಗೊಂಡಿದ್ದಾರೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದರು.  

2016ರ ಏಪ್ರಿಲ್‌ನಲ್ಲಿ ಬಿಹಾರದ ನಿತೀಶ್‌ ಕುಮಾರ್‍‌ ಸರ್ಕಾರ ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣ ನಿಷೇಧಿಸಿದೆ. ಆದಾಗ್ಯೂ ಕಳ್ಳಭಟ್ಟಿ ಸೇವಿಸಿ ಮೃತಪಡುವ ಪ್ರಕರಣಗಳು ಪದೇಪದೆ ವರದಿಯಾಗುತ್ತಿದ್ದು, ಕಳೆದ ವರ್ಷ ನವೆಂಬರ್‍‌ನಿಂದ ರಾಜ್ಯದಲ್ಲಿ ವರದಿಯಾದ ಕಳ್ಳಭಟ್ಟಿ ದುರಂತಗಳಲ್ಲಿ 50 ಜನರು ಮೃತಪಟ್ಟಿದ್ದಾರೆ.

ಫೋಟೋ ಕೃಪೆ: ಪಿಟಿಐ
ನಿಮಗೆ ಏನು ಅನ್ನಿಸ್ತು?
0 ವೋಟ್