ಬಿಲ್ಕಿಸ್‌ ಬಾನು ಪ್ರಕರಣ | ಅಪರಾಧಿಯಿಂದ ಸಾಕ್ಷಿಗೆ ಜೀವ ಬೆದರಿಕೆ: ಸಿಜೆಐಗೆ ಪತ್ರ ಬರೆದ ಸಾಕ್ಷಿದಾರ ಘಾಂಚಿ

bilkis bano
  • ಅಪರಾಧಿ ರಾಧೇ ಶ್ಯಾಮ್‌ ಶಾನಿಂದ ಸಾಕ್ಷಿ ಘಾಂಚಿಗೆ ಜೀವ ಬೆದರಿಕೆ
  • ಸಿಜೆಐ, ರಾಜ್ಯ ಗೃಹ ಕಾರ್ಯದರ್ಶಿ, ಪೊಲೀಸ್‌ ಇಲಾಖೆಗೆ ಪತ್ರ ಬರೆದ ಘಾಂಚಿ

ಬಿಲ್ಕಿಸ್‌ ಬಾನು ಪ್ರಕರಣದ ಪ್ರಾಸಿಕ್ಯೂಷನ್‌ ಸಾಕ್ಷಿಯೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್‌ ಅವರಿಗೆ ಪತ್ರ ಬರೆದಿದ್ದು, "ಪ್ರಮುಖ ಅಪರಾಧಿಗಳಲ್ಲಿ ಒಬ್ಬರಿಂದ ನನಗೆ ಜೀವ ಬೆದರಿಕೆ ಬಂದಿದೆ" ಎಂದು ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಸಾಕ್ಷಿಯಾಗಿರುವ ಸಿಂಗ್ವಾಡ್‌ ಗ್ರಾಮದವರಾದ ಇಮ್ತಿಯಾಜ್‌ ಘಾಂಚಿ ಸಿಜೆಐ ಯು ಯು ಲಲಿತ್‌ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಘಾಂಚಿ ಅವರು "ಸೆಪ್ಟೆಂಬರ್‌ 15ರಂದು ಸಿಂಗ್ವಾಡ್‌ ಗ್ರಾಮದಿಂದ ದೇವಗಢ್‌ ಬರಿಯಾಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಅಪರಾಧಿ ರಾಧೇಶ್ಯಾಮ್‌ ಶಾ ಎದುರುಗೊಂಡು, "ನೀವು ನನ್ನ ವಿರುದ್ಧ ಸಾಕ್ಷಿ ಹೇಳಿ, ಏನು ಪಡೆದುಕೊಂಡಿರಿ. ಈಗ ನಾನು ಹೊರಗಿದ್ದೇನೆ" ಎಂದು ಹೇಳಿದ. ಇದರಿಂದಾಗಿ ತನಗೆ ಜೀವ ಬೆದರಿಕೆಯಿರುವುದು ಸ್ಪಷ್ಟವಾಗಿದೆ ಎಂದಿರುವ ಘಾಂಚಿ, ತನಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಕೋರಿ ಸಿಜೆಐ ಯು ಯು ಲಲಿತ್‌, ಗುಜರಾತ್ ಗೃಹ ಕಾರ್ಯದರ್ಶಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ದಾಹೋದ್ ಜಿಲ್ಲಾಧಿಕಾರಿ ಹಾಗೂ ದಾಹೋದ್ ಪೊಲೀಸರಿಗೆ ಪತ್ರ ಬರೆದಿದ್ದಾರೆ. 

ವಿಶೇಷ ಮುಂಬೈ ಸಿಬಿಐ ನ್ಯಾಯಾಲಯ ಬಿಲ್ಕಿಸ್‌ ಬಾನು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ವೇಳೆ ಘಾಂಚಿ ಅವರು ಸಾಕ್ಷಿ ಹೇಳಿದ್ದರು.  

ಏನಿದು ಪ್ರಕರಣ?

ಗುಜರಾತ್‌ನಲ್ಲಿ ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲ ಹನ್ನೊಂದು ಅಪರಾಧಿಗಳನ್ನು ‌ಆಗಸ್ಟ್‌ 15ರಂದು ಬಿಡುಗಡೆ ಮಾಡಲಾಗಿತ್ತು. ಗುಜರಾತ್‌ ಸರ್ಕಾರದ ಕ್ಷಮಾಪಣೆ ನೀತಿ ಅನ್ವಯ ಗೋಧ್ರಾ ಉಪ ಕಾರಾಗೃಹದಿಂದ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ?: ಸುದ್ದಿ ನೋಟ | ತನಿಖಾ ಸಂಸ್ಥೆಗಳು ಅಂದು ಪಂಜರದ ಗಿಳಿ; ಇಂದು ಪ್ರತಿಪಕ್ಷಗಳ ಮೇಲಿನ ದಾಳಿಗೆ ಅಸ್ತ್ರ

ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಸಮುದಾಯವೊಂದರ ಮೇಲಿನ ಸೇಡಿನ ದಾಳಿಯಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಅಪರಾಧಿಗಳನ್ನು ಹೀಗೆ ಏಕಾಏಕಿ ಬಿಡುಗಡೆ ಮಾಡಿರುವ ಗುಜರಾತ್‌ ಬಿಜೆಪಿ ಸರ್ಕಾರದ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಪರಾಧಿಗಳು ಬಿಡುಗಡೆಯಾದ ದಿನದಿಂದ ಅವರ ಬಿಡುಗಡೆ ಆದೇಶ ರದ್ದುಪಡಿಸಬೇಕು ಎಂದು ಸಾವಿರಾರು ಜನ ಆಗ್ರಹಿಸುತ್ತಲೇ ಇದ್ದಾರೆ.

ಅಪರಾಧಿಗಳ ಬಿಡುಗಡೆ ರದ್ದುಪಡಿಸಬೇಕು ಎಂದು ಆರು ಸಾವಿರಕ್ಕೂ ಅಧಿಕ ಜನರ ಸಹಿಯುಳ್ಳ ಮನವಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180