ಬಿಲ್ಕೀಸ್ ಬಾನು ಪ್ರಕರಣ| ಅತ್ಯಾಚಾರಿಗಳ ಬಿಡುಗಡೆಯಿಂದ ಭಯ ಹೆಚ್ಚಾಗಿದೆ: ಬಾನು ಪತಿ ರಸೂಲ್ ಪಟೇಲ್

Gujarat Riots 2002
  • ಸರ್ಕಾರದ ಮೇಲೆ ಯಾವ ಭರವಸೆಯೂ ಉಳಿದಿಲ್ಲ
  • ಆತಂಕ ವ್ಯಕ್ತಪಡಿಸಿದ ಬಾನು ಕುಟುಂಬದ ಸದಸ್ಯರು

ಬಿಲ್ಕೀಸ್‌ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿರುವ ಕುರಿತಂತೆ ಬಾನು ಅವರ ಪತಿ ಮಂಗಳವಾರ ಪ್ರತಿಕ್ರಿಯಿಸಿದ್ದು, "ನಮಗೆ ಭಯವಾಗುತ್ತಿದೆ" ಎಂದಿದ್ದಾರೆ.

ಗುಜರಾತ್ ಸರ್ಕಾರವು ಕ್ಷಮಾಪಣಾ ನೀತಿಯಡಿ 11 ಅಪರಾಧಿಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ. ಬಿಜೆಪಿ ಸರ್ಕಾರದ ಈ ನಿರ್ಧಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನದ ‘ನಾರಿ ಶಕ್ತಿ’ ಭಾಷಣವನ್ನು ತಾಳೆ ಹಾಕಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಬಿಲ್ಕೀಸ್‌ ಬಾನು ಅವರ ಪತಿ ಯಾಕೂಬ್ ರಸೂಲ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

“ಮೊದಲೇ ನಮಗೆ ಭಯವಿತ್ತು. ಆದರೆ ಇದೀಗ 11 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಭಯ ಇನ್ನಷ್ಟು ಹೆಚ್ಚಾಗಿದೆ” ಎಂದು ರಸೂಲ್ ಪಟೇಲ್ ಹೇಳಿರುವುದಾಗಿ ʼಇಂಡಿಯಾ ಟುಡೇʼ ವರದಿ ಮಾಡಿದೆ.

“ನಾವು ಹೇಗೋ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೆವು. ಆದರೆ ಈಗ ಎಲ್ಲ ಅಪರಾಧಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಕುರಿತಂತೆ ನಮಗೆ ತೀವ್ರ ಅಸಮಾಧಾನವಿದೆ. ಮೊದಲು ಭಯವಿತ್ತು, ಭಯದ ನಡುವೆಯೂ ಸಾಮಾನ್ಯ ಜೀವನ ನಡೆಸಲು ಪ್ರಯತ್ನಿಸುತ್ತಿದ್ದೆವು, ಇಲ್ಲಿನ ವಾತಾವಾರಣ ಬೇರೆ ಸರಿಯಾಗಿಲ್ಲ. ಈಗ ಭಯ ಮತ್ತಷ್ಟು ಹೆಚ್ಚಾಗಿದೆ” ಎಂದು ರಸೂಲ್ ಆತಂಕ ವ್ಯಕ್ತಪಡಿಸಿದ್ದಾರೆ.

2002ರ ಮಾರ್ಚ್ 3ರಂದು ರಾಜ್ಯದ ದಾಹೋದ್ ಜಿಲ್ಲೆಯಲ್ಲಿ ತಮ್ಮ ಮೂರು ವರ್ಷದ ಮಗಳನ್ನು ಸಾಮೂಹಿಕ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಮತ್ತು ಆ ಬಳಿಕ ಕುಟುಂಬ ಅನುಭವಿಸಿದ ನರಕಯಾತನೆಯನ್ನು ಯಾಕೂಬ್ ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಲ್ಕೀಸ್‌ ಬಾನು ಪ್ರಕರಣ| ಅತ್ಯಾಚಾರಿಗಳ ಬಿಡುಗಡೆ ಮೋದಿಯ ನಾರಿ ಶಕ್ತಿ ಭಾಷಣಕ್ಕೆ ಕಪಾಳಮೋಕ್ಷ ಎಂದ ಪ್ರತಿಪಕ್ಷಗಳು

“ಘಟನೆಯಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮ್ಮ ಮೂರು ವರ್ಷದ ಮಗಳು ಕೊಲೆಯಾದಳು. ಕುಟುಂಬದ ಸದಸ್ಯರು ಕೊಲೆಯಾದರು. ಬಿಲ್ಕೀಸ್ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಯಿತು. ಇಂದಿಗೂ, ಪ್ರತಿ ದಿನ ನಾವು ಕೊಲೆಗೀಡಾದ ನಮ್ಮ ಕುಟುಂಬ ಸದಸ್ಯರಿಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.

ಗುಜರಾತ್ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿರುವ ಯಾಕೂಬ್, "11 ಅಪರಾಧಿಗಳನ್ನು ಬಿಡುಗಡೆ ಮಾಡುವ ಸರ್ಕಾರದ ನಿರ್ಧಾರದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಬಿಡುಗಡೆ ಬಗ್ಗೆ ಮಾಧ್ಯಮಗಳ ವರದಿಯಿಂದ ನಮಗೆ ತಿಳಿಯಿತು" ಎಂದು ಹೇಳಿದ್ದಾರೆ.

“ತುಂಬಾ ಭಯದಲ್ಲಿ ಬದುಕುತ್ತಿದ್ದೇವೆ. ನಮಗೆ ಭದ್ರತೆಯೂ ಇಲ್ಲ. ಪದೇಪದೆ ಮನೆ ಬದಲಾಯಿಸುತ್ತಾ ಭಯಭೀತಿಯಲ್ಲಿ ಕದ್ದುಮುಚ್ಚಿ ಜೀವನ ನಡೆಸುತ್ತಿದ್ದೇವೆ. ಭದ್ರತೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಇದುವರೆಗೂ ಸರ್ಕಾರ ನಮ್ಮ ಬಗ್ಗೆ ತಲೆಕೆಡಿಸಿಕೊಂಡಿಲ್ಲ” ಎಂದರು.

ಇನ್ನೂ ಸಿಗದ ಪರಿಹಾರ

ಸರ್ಕಾರ ಪರಿಹಾರವಾಗಿ ಬಿಲ್ಕೀಸ್ ಬಾನು ಅವರ ಕುಟುಂಬಕ್ಕೆ ಒಂದು ಮನೆ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುವುದಾಗಿ ಘೋಷಿಸಿತ್ತು. ಪರಿಹಾರ ನಿಧಿ ಬಿಟ್ಟರೆ ಬೇರೆ ಭರವಸೆಗಳು ಇನ್ನೂ ಈಡೇರಿಲ್ಲ ಎಂದು ಯಾಕೂಬ್ ರಸೂಲ್ ಪಟೇಲ್ ತಿಳಿಸಿದ್ದಾರೆ.

"ನಮಗೆ ಇನ್ನೂ ಯಾವುದೇ ಮನೆ ಮತ್ತು ಉದ್ಯೋಗ ಸಿಕ್ಕಿಲ್ಲ. ನಮಗೆ ಯಾವುದೇ ವಕೀಲರ ಬೆಂಬಲವೂ ಇಲ್ಲ. ಹಾಗಾಗಿ ಭವಿಷ್ಯದ ಕಾನೂನು ಆಯ್ಕೆಗಳ ಬಗ್ಗೆ ನಮಗೆ ತಿಳಿದಿಲ್ಲ. ಬಿಡುಗಡೆ ನಿರ್ಧಾರದ ಬಳಿಕ ನಮಗೆ ಸರ್ಕಾರ ಮೇಲೆ ಯಾವ ಭರವಸೆಯೂ ಉಳಿದಿಲ್ಲ” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್