ಭಾರತದ ʼಬಿಗ್‌ಬುಲ್‌ʼ ರಾಕೇಶ್‌ ಜುಂಝನ್‌ವಾಲಾ ನಿಧನ; ಗಣ್ಯರ ಸಂತಾಪ

Rakesh Jhunjhunwala
  • ಜುಂಝನ್‌ವಾಲಾರಿಂದ ಆಕಾಸ ಏರ್‌ ವಿಮಾನಯಾನ ಕಂಪನಿ ಆರಂಭ
  • ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ  ಜುಂಝನ್‌ವಾಲಾ 

ಭಾರತದ ʼಬಿಗ್‌ಬುಲ್‌ʼ ಎಂದೇ ಖ್ಯಾತರಾಗಿದ್ದ ಕೋಟ್ಯಧಿಪತಿ ಉದ್ಯಮಿ ರಾಕೇಶ್‌ ಜುಂಝನ್‌ವಾಲಾ ಮುಂಬೈನಲ್ಲಿ ಭಾನುವಾರ (ಆಗಸ್ಟ್‌ 14) ಬೆಳಿಗ್ಗೆ ನಿಧನರಾಗಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿದ್ದ ರಾಕೇಶ್ ಅವರು​ ಮುಂಬೈನ ಬ್ರೀಚ್​​ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಗಣ್ಯರ ಸಂತಾಪ

ರಾಕೇಶ್‌ ಜುಂಝನ್‌ವಾಲಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಅಲ್ಲದೆ ಗೃಹ ಸಚಿವ ಅಮಿತ್‌ ಶಾ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌, ಕ್ಯಾಪಿಟಲ್​​ ಮೈಂಡ್​ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಶೆಣೈ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ದಲಾಲ್ ಸ್ಟ್ರೀಟ್‌ನ ‘ಬಿಗ್ ಬುಲ್’ ಎಂದು ಜುಂಝನ್‌ವಾಲಾ ಅವರು ಹೆಸರಾಗಿದ್ದರು. ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿಜೀವನ ಆರಂಭಿಸಿದ್ದ ಅವರು, ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದರು. ದೇಶದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಜುಂಝನ್‌ವಾಲಾ, ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್‌ನ ಅಧ್ಯಕ್ಷರಾಗಿದ್ದರು. ಜತೆಗೆ ವೈಸ್‌ರಾಯ್ ಹೋಟೆಲ್‌ಗಳು, ಕಾನ್‌ಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ ಮತ್ತು ಜಿಯೋಜಿತ್ ಫೈನಾನ್ಷಿಯಲ್ ಸೇವೆ, ಸ್ಟಾರ್‌ ಹೆಲ್ತ್‌ ಇನ್ಸೂರೆನ್ಸ್‌ ಮುಂತಾದ ಸಂಸ್ಥೆಗಳ ನಿರ್ದೇಶಕರಾಗಿದ್ದರು.

ಜುಂಝುನ್‌ವಾಲಾ ಅವರು ಕಾಲೇಜು ದಿನಗಳಿಂದಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ವೃತ್ತಿ ಆರಂಭಿಸಿದರು. ಬಳಿಕ ಅವರು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಸೇರಿಕೊಂಡರು. ಪದವಿ ಪಡೆದ ನಂತರ ಅವರು ʼದಲಾಲ್ ಸ್ಟ್ರೀಟ್‌ʼ ವಾಣಿಜ್ಯ ಸಂಸ್ಥೆಗೆ ಸೇರಿದರು. 1985ರಲ್ಲಿ ₹5,000 ಬಂಡವಾಳ ಹೂಡಿಕೆ ಮಾಡಿದರು. ಆ ಬಂಡವಾಳವು 2018ರ ಸೆಪ್ಟೆಂಬರ್‌ ವೇಳೆಗೆ ₹11,000 ಕೋಟಿಗೆ ಬೆಳೆದಿತ್ತು.

ಜುಂಝನ್‌ವಾಲಾ ಅವರು ತಮ್ಮ ತಂದೆಯು ಸ್ನೇಹಿತರೊಂದಿಗೆ ಷೇರು ಮಾರುಕಟ್ಟೆಯ ಬಗ್ಗೆ ಚರ್ಚಿಸುವುದನ್ನು ಕೇಳುತ್ತಿದ್ದರು. ಬಳಿಕ ಜುಂಝನ್‌ವಾಲಾ ಅವರಿಗೆ ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಬೆಳೆಯಿತು. ಜುಂಝನ್‌ವಾಲಾ ಅವರಿಗೆ ಅವರ ತಂದೆ ಸ್ಟಾಕ್‌ ಮಾರುಕಟ್ಟೆಯ ಏರಿಳಿತದ ಬಗ್ಗೆ ಅರಿಯಲು ನಿಯಮಿತವಾಗಿ ಎರಡು ಪತ್ರಿಕೆಗಳನ್ನು ಓದುವಂತೆ ಹೇಳುತ್ತಿದ್ದರು.

ಆದರೆ ಸ್ಟಾಕ್‌ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವಾಗ ಜುಂಝನ್‌ ಅವರಿಗೆ ತಂದೆಯು ಯಾವುದೇ ಹಣಕಾಸಿನ ನೆರವು ನೀಡಲಿಲ್ಲ. ಸ್ನೇಹಿತರ ನೆರವಿನಿಂದ ಜುಂಝನ್‌ ಅವರು ಹಣಕಾಸಿನ ನೆರವು ಪಡೆದು ಸ್ಟಾಕ್‌ ಮಾರುಕಟ್ಟೆಯಲ್ಲಿ ತೊಡಗಿದರು ಎಂದು ವರದಿ ಹೇಳಿವೆ.    

ರಾಕೇಶ್‌ ಜುಂಝನ್‌ವಾಲಾ ಅವರು ಆಕಾಸ ಏರ್‌ ವಿಮಾನಯಾನ ಕಂಪನಿಯ ಸ್ಥಾಪಕರೂ ಆಗಿದ್ದಾರೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ತನಗೆ ವಾಣಿಜ್ಯ ಉದ್ದೇಶಕ್ಕೆ ವಿಮಾನ ಬಳಸಲು ಪ್ರಮಾಣಪತ್ರ ನೀಡಿದೆ ಎಂದು ಜುಂಝನ್‌ ಅವರು ಹೇಳಿದ್ದರು. 

ಇದೇ ಆಗಸ್ಟ್ 7ರಂದು ವಿಮಾನಯಾನ ಕಂಪನಿಯ ಮೊದಲ ಸೇವೆಯು ಮುಂಬೈ–ಅಹಮದಾಬಾದ್ ನಡುವೆ ಆರಂಭವಾಗಿತ್ತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ಸೇವೆಗೆ ಚಾಲನೆ ನೀಡಿದ್ದರು.

ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹೊತ್ತಿಗೆ ಅವರ ನೂತನ ಸಂಸ್ಥೆ 18 ವಿಮಾನಗಳನ್ನು ಕಂಪನಿ ಹೊಂದಲಿದೆ ಎಂದು ಹೇಳಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್