ಗೋಧಿ ರಫ್ತು ನಿಷೇಧ | ಭಾರತೀಯ ರೈತರಿಗೆ ಕಹಿಯಾದ ಸುಗ್ಗಿ

  • ಗೋಧಿ ರಫ್ತು ನಿಷೇಧದ ಬಳಿಕ ರೈತರಿಗೆ ಭಾರೀ ನಷ್ಟ
  • 60 ಟನ್ ಗೋಧಿ ಸಂಗ್ರಹಿಸಿರುವ ರೈತ ನವತೇಜ್ ಸಿಂಗ್

ಉಕ್ರೇನ್‌ ಮತ್ತು ರಷ್ಯಾ ಯುದ್ಧದ ಪರಿಣಾಮವಾಗಿ ಬೆಲೆಗಳು ಏರಿಕೆಯಾಗಿದ್ದವು. ಈ ನಡುವೆ ಭಾರತ ಸರ್ಕಾರ ಗೋಧಿ ರಫ್ತುಗಳನ್ನು ನಿಷೇಧಿಸಿರುವುದು ವಿದೇಶಗಳಲ್ಲಿ ದಿಗ್ಭ್ರಮೆ ಮೂಡಿಸಿತ್ತು. ದೇಶದಲ್ಲಿ ಧಾನ್ಯಗಳ ಬೆಲೆ ಗಗನಕ್ಕೇರಿರುವುದು ನಿಷೇಧಕ್ಕೆ ಕಾರಣವೆಂದು ಸರ್ಕಾರ ಹೇಳಿಕೊಂಡಿದೆ.

ರಷ್ಯಾ ಮತ್ತು ಉಕ್ರೇನ್‌ ಯುದ್ಧದಿಂದ ಕ್ಷೀಣಿಸುತ್ತಿರುವ ಜಾಗತಿಕ ಪೂರೈಕೆಗಳ ಜೊತೆಗೆ, ಪ್ರಪಂಚದ ಅಗ್ರ ಐದು ಗೋಧಿ ರಫ್ತುದಾರರಲ್ಲಿ ಇಬ್ಬರಾದ ಚಿಕಾಗೋ ಮತ್ತು ಯುರೋಪ್‌ನಲ್ಲಿ ಸರಕು ವಿನಿಮಯದಲ್ಲಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ಆದರೆ ಏಷ್ಯಾದ ಅತಿದೊಡ್ಡ ಗೋಧಿಯ ಕಣಜವಾದ ಭಾರತದ ಪಂಜಾಬ್‌ನಲ್ಲಿ ಗೋಧಿ ನಿಷೇಧದ ಪರಿಣಾಮ ಬೇರೆಯೇ ರೀತಿಯಲ್ಲಿ ವ್ಯಕ್ತವಾಗಿದೆ.

ಒಂದು ಡಜನ್ ದೈತ್ಯ ಶೇಖರಣಾ ಶೆಡ್‌ಗಳ ಪ್ರಾಬಲ್ಯವಿರುವ ಪಂಜಾಬ್‌ನ ಖನ್ನಾ ಮಾರುಕಟ್ಟೆಯ ಪ್ರತೀ ಶೆಡ್‌ಗಳು 'ಫುಟ್‌ಬಾಲ್' ಮೈದಾನದ ಗಾತ್ರದಲ್ಲಿವೆ. ಪ್ರತಿ ವರ್ಷ ಗೋಧಿ ಬೆಳೆಯುವ  ಸಾವಿರಾರು ರೈತರು ತಮ್ಮ ಉತ್ಪನ್ನಗಳನ್ನು  ಈ ಸೌಲಭ್ಯ ಮೂಲಕ ಮಾರಾಟ ಮಾಡುತ್ತಾರೆ.  

ರಫ್ತು ನಿಷೇಧದ ಮೊದಲು 100 ಕಿಲೋಗ್ರಾಂ ಗೋಧಿಗೆ ₹2,300 ಇತ್ತು ನಿಷೇಧದ ಬಳಿಕ ₹2,015 ರೂಪಾಯಿಗಳಿಗೆ ಕುಸಿದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಧಾನ್ಯ ಖರೀದಿಸುವ ಸರ್ಕಾರವು ಕನಿಷ್ಠ ಬೆಲೆ ನಿಗದಿ ಪಡಿಸಿದೆ.

ಭಾರತದ ಲಕ್ಷಾಂತರ ಸಣ್ಣ ರೈತರು ಹವಾಮಾನದ ಬದಲಾವಣೆಯ ಪರಿಣಾಮದ ಸಂಕಷ್ಟಕ್ಕೆ ಸಿಲುಕಿದ್ದರು. ಪಂಜಾಬ್‌ನಲ್ಲಿ ಕೆಲವರು ತೀವ್ರ ಶಾಖದ ಅಲೆಯಿಂದಾಗಿ ಉತ್ಪಾದನಾ ನಷ್ಟಕ್ಕೆ ಈಗಾಗಲೇ ತತ್ತರಿಸುತ್ತಿದ್ದಾರೆ. ರೈತ ನವತೇಜ್ ಸಿಂಗ್ ಹಿಂಗಾರು ಋತುವಿನಲ್ಲಿ 60 ಟನ್ ಗೋಧಿ ಉಳಿಸಿದ್ದರು. ಸರ್ಕಾರದ ನಿಷೇಧದ ನಿರ್ಧಾರ ಅವರಿಗೆ ಆಘಾತ ತಂದಿದೆ. ಅವರು ಉಳಿಸಿಕೊಂಡಿರುವ ಗೋಧಿ ಮಾರಲು ಹರಸಾಹಸ ಪಡುತ್ತಿದ್ದಾರೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಹೇಳಿದೆ.

“ಈ ನಿಷೇಧವು ಆಘಾತಕಾರಿ. ಬೆಲೆ ಕನಿಷ್ಠಕ್ಕೆ ಕುಸಿದಿದೆ ಮತ್ತು ನಿಗದಿ ಪಡಿಸಿದ ಬೆಲೆ ನಮ್ಮ ಖರ್ಚನ್ನು ಸಹ ಭರಿಸುವುದಿಲ್ಲ. ನಾನು ಒಂದು ದಿನ ಕಾಯಲು ಸಹ ಸಾಧ್ಯವಿಲ್ಲ. ಅಧಿಕಾರಿಗಳು ಯಾರನ್ನೂ ಸಂಪರ್ಕಿಸಿಲ್ಲ ಮತ್ತು ಸ್ವಾರ್ಥದಿಂದ ವರ್ತಿಸಿದ್ದಾರೆ. ಈ ವರ್ಷ ನಷ್ಟಗಳು ಮತ್ತು ನಿಷೇಧ ಆದೇಶವು ನಮ್ಮ ಜೀವನವನ್ನು ದುಸ್ಸಾಧ್ಯವಾಗಿಸಿದೆ” ಎಂದು ರೈತ ನವತೇಜ್ ಸಿಂಗ್ ಎಎಫ್‌ಪಿಗೆ ಹೇಳಿರುವುದು ವರದಿಯಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ ? ಕಾಂಡ್ಲಾ ಬಂದರಿನಲ್ಲಿ ಸಾಲು ನಿಂತ ಗೋಧಿ ಲಾರಿಗಳು; ರಫ್ತು ನಿಷೇಧದ ನಿಯಮ ಸಡಿಲಿಕೆಗೆ ಕೇಂದ್ರದ ನಿರ್ಧಾರ

ಉಕ್ರೇನ್‌ ಯುದ್ಧ ಮತ್ತು ಅತಿ ತಾಪಮಾನದ ಮೊದಲು 2021ರಲ್ಲಿ 109 ದಶಲಕ್ಷ ಟನ್‌ ಗೋಧಿ ಭಾರತದಲ್ಲಿ ಉತ್ಪಾದಿಸಲಾಗಿತ್ತು. ಇದರಲ್ಲಿ ಏಳು ದಶಲಕ್ಷ ಟನ್ ರಫ್ತು ಮಾಡಲಾಗಿತ್ತು. ಈ ವರ್ಷ ಉತ್ಪಾದನೆ ಮತ್ತು ರಫ್ತು ಅಧಿಕವಾಗುವ ನಿರೀಕ್ಷೆಯಿದೆ.

ತಜ್ಞರ ಪ್ರಕಾರ ಪಂಜಾಬ್‌ನಲ್ಲಿ ರೈತರು ಹವಾಮಾನ ಬದಲಾವಣೆ ಮತ್ತು ಶಾಖದ ಅಲೆಯಿಂದ ಹಾನಿಗೊಳಗಾದ ನಂತರ, ರಾಷ್ಟ್ರೀಯ ಕೊಯ್ಲು ನಿರೀಕ್ಷೆಗಿಂತ ನಾಲ್ಕು ದಶಲಕ್ಷ ಟನ್‌ಗಳಷ್ಟು ಕಡಿಮೆ ಬರಬಹುದು. ಈಗ ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಂಗ್ರಹಣೆ ಕಡಿತಗೊಳಿಸುತ್ತಿದ್ದಾರೆ. ಇದು ಸುಮಾರು 800 ದಶಲಕ್ಷ ಮಂದಿಗೆ ಉಚಿತ ಮತ್ತು ಹೆಚ್ಚು ಸಬ್ಸಿಡಿ ಧಾನ್ಯಗಳನ್ನು ಒದಗಿಸುತ್ತದೆ. ಏಕೆಂದರೆ ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಸ್ಥಾಪಿಸಲಾದ ಆಹಾರ ಭದ್ರತಾ ಯೋಜನೆಗಳನ್ನು ಕಡಿತಗೊಳಿಸಲಾಗಿದೆ. 

ಚಿಲ್ಲರೆ ಗೋಧಿ ಹಿಟ್ಟಿನ ಬೆಲೆಗಳು 12 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಖನ್ನಾದಲ್ಲಿ ಪಂಜಾಬ್ ಸರ್ಕಾರದ ಧಾನ್ಯ ಸಂಗ್ರಹಣೆ ವಿಭಾಗದ ಮುಖ್ಯಸ್ಥ ಮನೀಶ್ ಪಜ್ನಿ ನಿಷೇಧವನ್ನು ಬೆಂಬಲಿಸಿದ್ದಾರೆ. ಸಗಟು ದರಗಳು ಇಲ್ಲದೆ ₹3,000 ರೂಪಾಯಿಗಳಷ್ಟು ಹೆಚ್ಚಾಗಬಹುದೆಂದು ಹೇಳಿದ್ದಾರೆ.

“ಆದರೆ ಏಕಾಏಕಿ ರಫ್ತು ಸ್ಥಗಿತಗೊಳಿಸಿ ಮಾರುಕಟ್ಟೆ ಪ್ರಕ್ಷುಬ್ಧತೆಗೆ ಕಾರಣವಾಗುವ ಮುನ್ನ ಸರ್ಕಾರ ಕಾದು ನೋಡುವ ನೀತಿ ಅಳವಡಿಸಿಕೊಳ್ಳಬೇಕಿತ್ತು. ಮಾರುಕಟ್ಟೆಯು ಈಗಾಗಲೇ ಸುಗ್ಗಿಯ ಬಿಕ್ಕಟ್ಟಿನಿಂದ ಒತ್ತಡದಲ್ಲಿದೆ. ಈ ನಡುವೆ ಯಾವುದೇ ಆಲೋಚನೆಯಿಲ್ಲದೆ ಸರ್ಕಾರವು ನಿಷೇಧಕ್ಕೆ ಮುಂದಾಗಿದೆ" ಎಂದು ಎಂದು ವ್ಯಾಪಾರಿ ರಾಜ್ ಸೂದ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಷಯವಾಗಿ ಪ್ರತಿಕ್ರಿಯಿಸುವ ಖನ್ನಾದ ಅನೇಕ ಉದ್ಯಮಿಗಳು "ಕಾರ್ಗಿಲ್, ಐಟಿಸಿ ಮತ್ತು ಗ್ಲೆನ್‌ಕೋರ್‌ನಂತಹ ದೊಡ್ಡ ರಫ್ತುದಾರರಿಗೆ ದೊಡ್ಡ ನಷ್ಟ ಉಂಟಾಗುತ್ತದೆ. ಸಣ್ಣ ವ್ಯಾಪಾರಿಗಳು ಮತ್ತು ರೈತರೂ ಇದರ ಪರಿಣಾಮ ಅನುಭವಿಸುತ್ತಿದ್ದಾರೆ. ಪೂರೈಕೆ ಮತ್ತು ಬೇಡಿಕೆಯ ನಿಯಮಗಳು ಅನಿವಾರ್ಯವಾಗಿರುವುದರಿಂದ ಈ ಕ್ರಮವು ತಾತ್ಕಾಲಿಕ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದಾರೆ.

ಹಿಟ್ಟಿನ ಗಿರಣಿ ಮಾಲೀಕ ದಿವೇಂದರ್ ವರ್ಮಾ ಅವರು ಸಾಮಾನ್ಯವಾಗಿ ತಮ್ಮ ಕಚ್ಚಾ ವಸ್ತುಗಳನ್ನು ಸರ್ಕಾರಿ ದಾಸ್ತಾನಿನಿಂದ ಪಡೆಯುತ್ತಾರೆ. "ಈ ಬಾರಿ ಸರ್ಕಾರ ನಮಗೆ ಗೋಧಿ ಒದಗಿಸುವ ನಿರೀಕ್ಷೆಯಿಲ್ಲ. ಗೋಧಿಯ ಸನ್ನಿವೇಶವು ಬಿಗಿಯಾಗಿದೆ” ಎಂದು ವರ್ಮಾ ತಿಳಿಸಿರುವ ಬಗ್ಗೆ ಎಫ್‌ಎಪಿ ವರದಿ ಮಾಡಿದೆ.

ಖಾಸಗಿ ಪೂರೈಕೆದಾರರು ಅನಿವಾರ್ಯವಾಗಿ ಹೆಚ್ಚು ಶುಲ್ಕ ವಿಧಿಸುತ್ತಾರೆ. ಬ್ರೆಡ್ ಮತ್ತು ಇತರ ಗೋಧಿ ಉತ್ಪನ್ನಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತಾರೆ ಎಂದು ದಿವೇಂದರ್ ವರ್ಮಾ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್