
- ಜನಸಂಖ್ಯೆ ಹೆಚ್ಚಳ ಅಭಿವೃದ್ಧಿಗೆ ಮಾರಕ ಎಂಬ ಯೋಗಿ ಆದಿತ್ಯನಾಥ ಹೇಳಿಕೆ ಬೆಂಬಲಿಸಿದ್ದ ಮನೋಜ್
- ಬಿಜೆಪಿಯವರು ಹೇಳುವುದೊಂದು, ಮಾಡುವುದು ಮತ್ತೊಂದು ಎಂದು ತಿವಾರಿ ಕಾಲೆಳೆದ ನೆಟ್ಟಿಗರು
ಭೋಜ್ಪುರಿ ನಟ ಹಾಗೂ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು 51ನೇ ವಯಸ್ಸಿನಲ್ಲಿ ಮೂರನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ತಾವು ತಂದೆಯಾಗುತ್ತಿರುವ ಸುದ್ದಿಯನ್ನು, ಸ್ವತಃ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮನೋಜ್ ತಿವಾರಿ ಹಾಗೂ ಸುರಭಿ ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇತ್ತೀಚೆಗೆ, ಮನೋಜ್ ತಿವಾರಿ ಅವರು, 'ಬೇಬಿ ಶೋವರ್' ಅನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ, ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ. ಕಾರಣ ಅವರು ಈ ಹಿಂದೆ ಜನಸಂಖ್ಯೆ ಹೆಚ್ಚಳದ ಬಗ್ಗೆ ನೀಡಿದ್ದ ಹೇಳಿಕೆ.
"ಜನಸಂಖ್ಯೆಯ ಹೆಚ್ಚಳವು ಅಭಿವೃದ್ಧಿಗೆ ಮಾರಕವಾಗಿದ್ದು, ಅದನ್ನು ನಿಯಂತ್ರಿಸಬೇಕಾದ ಅಗತ್ಯವಿದೆ" ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳೆದ ಜುಲೈನಲ್ಲಿ ವಿಶ್ವ ಜನಸಂಖ್ಯಾ ದಿನದ ವೇಳೆ ಲಕ್ನೋದಲ್ಲಿ ಹೇಳಿಕೆ ನೀಡಿದ್ದರು.
ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಯೋಗಿಯವರ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿದ್ದ ದೆಹಲಿಯ ಸಂಸದ ಮನೋಜ್ ತಿವಾರಿ, "ಯೋಗಿಯವರು ನೀಡಿದ ಹೇಳಿಕೆಯು ವರ್ತಮಾನದ ಸಕಾರಾತ್ಮಕ ವಿಷಯ. ಜನಸಂಖ್ಯೆಯು ಯಾವಾಗಲೂ ಸಮತೋಲನದಿಂದ ಕೂಡಿರಬೇಕು. ಸಮತೋಲನ ಇಲ್ಲವಾದರೆ ದೇಶದ ನಾಗರಿಕರಿಗೆ ಸಮಾನ ಸೌಲಭ್ಯಗಳನ್ನು ಒದಗಿಸುವುದು ಸವಾಲಾಗಿ ಪರಿಣಮಿಸುತ್ತದೆ" ಎಂದಿದ್ದರು.
दिल्ली :बीजेपी की कथनी करनी में अंतर कहते कुछ करते कुछ ना फंसे इन ठगों के चक्कर में।
— AVP Lucknow (@KisanMukti) November 23, 2022
इनसे मिले ये फर्जी भगवाधारी ब्राह्मण तिवारी पुत्र मोह में 52 साल की उम्र में तीसरा बच्चा पैदा कर रहे, मगर जनता को टोपी पहना जनसंख्या नियंत्रण पर ज्ञान दे रहे । pic.twitter.com/kmwT9OdHFo
ಈಗ ಅವರು ತಂದೆಯಾಗುತ್ತಿರುವ ಸುದ್ದಿಯನ್ನು ತಿಳಿಸುತ್ತಲೇ, ಅವರ ಹಳೆಯ ಹೇಳಿಕೆಯ ವಿಡಿಯೋವನ್ನು ನೆಟ್ಟಿಗರು ಮತ್ತೆ ಹಂಚಿಕೊಳ್ಳುತ್ತಿದ್ದು, "ಬಿಜೆಪಿಯವರು ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವೇ ಇರುವುದಿಲ್ಲ. ಜನರಿಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಇವರು ಪಾಠ ಮಾಡುತ್ತಾರೆ. ಆದರೆ ಇವರೆಷ್ಟು ಅದನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಗಮನಿಸಿ" ಎಂದು ಟೀಕಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಆಯುಕ್ತರ ನೇಮಕ| ಸಿಇಸಿ ಅರುಣ್ ಗೋಯೆಲ್ ನೇಮಕಾತಿ ಕಡತ ಸಲ್ಲಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ
ಎರಡನೇ ಪತ್ನಿ ಸುರಭಿ ತಿವಾರಿ
ಸುರಭಿ ತಿವಾರಿ ಅವರು ಮನೋಜ್ ತಿವಾರಿ ಅವರ ಎರಡನೇ ಪತ್ನಿ. 2020ರಲ್ಲಿ ಮನೋಜ್ ತಿವಾರಿ ಮತ್ತು ಸುರಭಿ ಅವರಿಗೆ ಮೊದಲನೇ ಮಗು ಆಗಿದೆ. ಅದು ಹೆಣ್ಣು ಮಗು. ಇದಕ್ಕೂ ಮೊದಲು, ಅವರು 1999ರಲ್ಲಿ ರಾಣಿ ಎಂಬವರನ್ನು ವಿವಾಹವಾಗಿದ್ದರು. ಅವರಿಗೆ ರಿತಿ ಎಂಬ ಮಗಳಿದ್ದಾಳೆ. 11 ವರ್ಷಗಳ ವೈವಾಹಿಕ ಬದುಕಿನ ನಂತರ ಮನೋಜ್ ಮತ್ತು ರಾಣಿ 2012ರಲ್ಲಿ ಬೇರೆಯಾಗಲು ನಿರ್ಧರಿಸಿ, ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು.
Population control bill ft. Manoj Tiwari
— Bole Bharat (@bole_bharat) November 23, 2022
🤣🤣🤣🤣🤣 pic.twitter.com/4hWLiihelg
2009ರ ಸಾರ್ವತ್ರಿಕ ಚುನಾವಣೆಯಲ್ಲಿ ಗೋರಖ್ಪುರ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಯೋಗಿ ಆದಿತ್ಯನಾಥ್ ವಿರುದ್ಧ ಸೋತರು. ಬಳಿಕ 2014ರಲ್ಲಿ ಬಿಜೆಪಿ ಸೇರಿದ್ದ ಅವರು, ಚುನಾವಣೆಗೆ ಸ್ಪರ್ಧಿಸಿ ಮತ್ತು ಗೆದ್ದಿದ್ದರು. ಅವರು 2016ರಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಸದ್ಯ ಈಶಾನ್ಯ ದೆಹಲಿಯ ಸಂಸದರಾಗಿದ್ದಾರೆ.
ಮನೋಜ್ ಕುಮಾರ್ ತಿವಾರಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಮೊದಲು, ಭೋಜ್ಪುರಿ ಚಲನಚಿತ್ರೋದ್ಯಮದಲ್ಲಿ ಗಾಯಕ ಮತ್ತು ನಟರಾಗಿ ಗುರುತಿಸಿಕೊಂಡಿದ್ದರು.