‘ಬಿಜೆಪಿ ನನ್ನನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ; ಪದ್ಮಶ್ರೀ ಮರಳಿಸುವೆ' ಎಂದ ತೆಲಂಗಾಣದ ಕಿನ್ನರಿ ಕಲಾವಿದ

THELANGANA
  • ತೆಲಂಗಾಣದ ಕಿನ್ನರಿ ಕಲಾವಿದ ಮೊಗುಳಯ್ಯ ಆರೋಪ
  • ರಾಜಕೀಯ ಕೆಸರೆರಚಾಟಕ್ಕೆ ನೊಂದ ಪದ್ಮಶ್ರೀ ಪುರಸ್ಕೃತರು 

ಬಿಜೆಪಿ ತಮ್ಮನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೆಲಂಗಾಣದ ಕಿನ್ನರಿ ಕಲಾವಿದ ದರ್ಶನಂ ಮೊಗುಳಯ್ಯ ಆರೋಪಿಸಿದ್ದಾರೆ. ಬಿಜೆಪಿಯ ನಡೆ ವಿರೋಧಿಸಿ ತಮ್ಮ ಪ್ರಶಸ್ತಿ ಹಿಂದಿರುಗಿಸುವುದಾಗಿ ಅವರು ಹೇಳಿದ್ದಾರೆ.

“ಬಿಜೆಪಿ ಬಯಸಿದಲ್ಲಿ ನಾನು ಪ್ರಶಸ್ತಿ ಹಿಂದಿರುಗಿಸುತ್ತೇನೆ. ಅವರು ನನ್ನನ್ನು ಅನಗತ್ಯವಾಗಿ ವಿವಾದಕ್ಕೆ ಎಳೆದಿದ್ದಾರೆ. ಇದು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ” ಎಂದು ಕಲಾವಿದ ಮೊಗುಳಯ್ಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿಗೆ ಮೊಗುಳಯ್ಯ ಅವರು ಭಾಜನರಾದ ಬೆನ್ನಲ್ಲೇ ಹೈದರಾಬಾದ್‌ನಲ್ಲಿ ಒಂದು ನಿವೇಶನ ಮತ್ತು ಒಂದು ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ರಾವ್ ಅವರು ಈ ವರ್ಷದ ಜನವರಿಯಲ್ಲಿ ಘೋಷಿಸಿದ್ದರು. ಮೊಗುಳಯ್ಯ ಅವರನ್ನು ಮೇ 18ರಂದು ಅಚ್ಚಂಪೇಟ್ ನ್ಯಾಯಾಲಯದಲ್ಲಿ ಭೇಟಿಯಾದ ಬಿಜೆಪಿ ಮುಖಂಡರೊಬ್ಬರು ಈ ಬಗ್ಗೆ ಮೊಗುಳಯ್ಯ ಅವರನ್ನು ಮಾತಿಗೆಳೆದಿದ್ದಾರೆ. 'ರಾಜ್ಯ ಸರ್ಕಾರವು ಘೋಷಿಸಿದಂತೆ ನಿಮಗೆ ಒಂದು ಕೋಟಿ ರೂ. ಮತ್ತು ಹೈದರಾಬಾದ್‌ನಲ್ಲಿ ನಿವೇಶನ ನೀಡಿದೆಯೇ' ಎಂದು ವಿಚಾರಿಸಿದ್ದಾರೆ. 

ಪ್ರತಿಕ್ರಿಯೆ ನೀಡಿದ ಮೊಗುಳಯ್ಯ ರಾಜ್ಯ ಸರ್ಕಾರದ ಹಣ ಇನ್ನೂ ತಮ್ಮ ಕೈ ಸೇರಿಲ್ಲ ಎಂದಿದ್ದಾರೆ. ಮುಂದುವರೆದು “ಟಿಆರ್‌ಎಸ್‌ ಶಾಸಕ ಗುವ್ವಲ ಬಾಲರಾಜು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಅವರಿಗೆ ತಿಳಿಸಿದ್ದಾರೆ. ಆಗ 'ಮುಖ್ಯಮಂತ್ರಿ ಕೆಸಿಆರ್ ಇಷ್ಟು ವಿಳಂಬ ಮಾಡಿದರೆ ಹೇಗೆ' ಎಂದು ಬಿಜೆಪಿ ಮುಖಂಡ ಪ್ರಶ್ನಿಸಿದ್ದಾರೆ. ಅಲ್ಲದೆ ಮೊಗುಳಯ್ಯನ ಪರವಾಗಿ ತಾನು ಹೋರಾಡುವುದಾಗಿಯೂ ಹೇಳಿದ್ದಾರೆ. “ಈ ವಿಚಾರವನ್ನು ದೊಡ್ಡದು ಮಾಡುವುದು ಬೇಡ. ಕೆಸಿಆರ್ ವಿರುದ್ಧ ಮಾತನಾಡುವುದೂ ಬೇಡ' ಎಂದು ಮೊಗುಳಯ್ಯ ಹೇಳಿದ್ದಾರೆ. ತಾನು ಹಾಗೆ ಹೇಳಿದ್ದರೂ 'ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಟೀಕಾ ಪ್ರಹಾರ ಮಾಡಿದ್ದಾರೆ’’ ಎಂದು ಮೊಗುಳಯ್ಯ  ಜಾಲತಾಣವೊಂದಕ್ಕೆ ಹೇಳಿಕೊಂಡಿದ್ದಾರೆ.

ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡು, ತಮ್ಮ ನಂಬಿಕೆಗೆ ದ್ರೋಹ ಮಾಡಿದ್ದಾರೆಂದು ಕೆಸಿಆರ್ ನೇತೃತ್ವದ ರಾಜ್ಯ ಸರ್ಕಾರ ಭಾವಿಸಿದರೇನು ಗತಿ ಎಂದು ಯೋಚಿಸಿದ ಮೊಗುಳಯ್ಯ ಬಿಜೆಪಿ ಮುಖಂಡನಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಾತುಕತೆಯ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿರುವ ಟಿಆರ್‌ಎಸ್ ಕಾರ್ಯಕರ್ತರು ಬಿಜೆಪಿ ವಿರುದ್ಧದ ಪ್ರಚಾರಕ್ಕೆ ಬಳಸುತ್ತಿದ್ದಾರೆ. 

'ನಿಮ್ಮನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದೇ ನಮ್ಮ ಬಿಜೆಪಿ ಸರ್ಕಾರ' ಎಂದು ಕೆಲವು ಬಿಜೆಪಿ ಮುಖಂಡರು ಮೊಗುಳಯ್ಯ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ನೀವು ಬಯಸುವಿರಾದರೆ ನಾನು ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುವೆ' ಎಂದು ಮೊಗುಳಯ್ಯ ನೋವಿನಿಂದ ತಿರುಗೇಟು ನೀಡಿದ್ದಾರೆ.

ಈ ಪ್ರಕರಣ ಹೀಗೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮೊಗುಳಯ್ಯ ಅವರಿಗೆ ಆತಂಕ ಶುರುವಾಗಿದೆ. ರಾಜ್ಯ ಸರ್ಕಾರ ನೀಡುವ ಹಣ ಮತ್ತು ನಿವೇಶನದಿಂದ ವಂಚಿತನಾಗಬಹುದೆನ್ನುವ ಆತಂಕದಲ್ಲಿರುವ ಮೊಗುಳಯ್ಯ “ನಾನು ಅತ್ಯಂತ ಬಡ ಕುಟುಂಬದಿಂದ ಬಂದವನು. ಇದನ್ನೇಕೆ ಸಮಸ್ಯೆಯಾಗಿಸಿ ನನಗೆ ತೊಂದರೆ ಕೊಡುತ್ತಿದ್ದೀರಿ’’ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ.  

ಈ ಸುದ್ದಿ ಓದಿದ್ದೀರಾ: ? ರೋಡ್‌ ರೇಜ್‌ ಪ್ರಕರಣ | ಆರೋಗ್ಯದ ಕಾರಣ ನೀಡಿ ಶರಣಾಗಲು ಸಮಯ ಕೋರಿದ ಸಿಧು

ಸಮಾಜದ ಅಳಿವಿಂಚಿನಲ್ಲಿರುವ ದಕ್ಕಲಿಗ ಸಮುದಾಯ
ಮೊಗುಳಯ್ಯ ಸಮಾಜದ ಅಂಚಿನಲ್ಲಿರುವ ಮಾದಿಗರ ಉಪಪಂಗಡವಾದ ದಕ್ಕಲಿಗ ಸಮುದಾಯಕ್ಕೆ ಸೇರಿದವರು. ಮಾದಿಗರನ್ನು ಹಾಡಿ ಹೊಗಳುವುದು ಇವರ ಸಾಂಪ್ರದಾಯಿಕ ವೃತ್ತಿ. ಕಿನ್ನರಿ ನುಡಿಸುವುದರೊಂದಿಗೆ ದಕ್ಕಲಿಗರು ಪದ ಕಟ್ಟಿ ಹಾಡುತ್ತಾರೆ. ಉದ್ದವಾದ ಬಿದಿರಿನ ಕೋಲು ಮತ್ತು ಒಣಗಿದ ಕುಂಬಳಕಾಯಿ ಬಳಸಿ, ಮಾಡಿದ ತಂತಿ ವಾದ್ಯವನ್ನು ನುಡಿಸುತ್ತಾ ಹಾಡುತ್ತಾರೆ. ಆ ವಾದ್ಯದ ತಂತಿಗಳನ್ನು ಸಾಂಪ್ರದಾಯಿಕವಾಗಿ ಪ್ರಾಣಿಗಳ ನರಗಳಿಂದ ತಯಾರಿಸಲಾಗುತ್ತಿತ್ತು. ಆದರೆ ಸದ್ಯ ಅವನ್ನು ಲೋಹದಿಂದ ಮಾಡಲಾಗುತ್ತಿದೆ.  

ಮೊಗುಳಯ್ಯಗೆ 2015ರಲ್ಲಿ 'ಮನ್ಮಥನಾಮ ಯುಗಾದಿ' ಪುರಸ್ಕಾರ

ಹಾಗೆ ನೋಡುವುದಾದರೆ ಮೊಗುಳಯ್ಯ ಅವರ ಪ್ರತಿಭೆಯನ್ನು ಬಿಜೆಪಿಗೆ ಮುನ್ನವೇ ಟಿಆರ್‌ಎಸ್‌ ಗುರುತಿಸಿತ್ತು. 2014ರಲ್ಲಿ ತೆಲಂಗಾಣದಲ್ಲಿ ಟಿಆರ್‌ಎಸ್ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಅಳಿವಿನಂಚಿನಲ್ಲಿರುವ ಕಲಾ ಪ್ರಕಾರ ಕಿನ್ನರಿ ನುಡಿಸುವ ಕುಟುಂಬದ ಐದನೇ ತಲೆಮಾರಿನ ಕಲಾವಿದ ಮೊಗುಳಯ್ಯ ಅವರ ಕೊಡುಗೆಯನ್ನು ಗುರುತಿಸಿತ್ತು. 2015ರಲ್ಲಿ ಅವರಿಗೆ ‘ಮನ್ಮಥನಾಮ ಯುಗಾದಿ’ ಪುರಸ್ಕಾರ ನೀಡಿ ಗೌರವಿಸಿತ್ತು. 

ಇದಲ್ಲದೆ ಮೊಗುಳಯ್ಯ ಮತ್ತು ಕಿನ್ನರರು ನೀಡಿದ ಸಾಂಸ್ಕೃತಿಕ ಕೊಡುಗೆ ಬಗ್ಗೆ ಅರಿವು ಮೂಡಿಸಲು ರಾಜ್ಯದ 8ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಅವರ ಬಗ್ಗೆ ಪಾಠವನ್ನು ಸೇರಿಸಲಾಯಿತು. ಜೀವನೋಪಾಯಕ್ಕೆ ಅವರು ನಡೆಸುವ ಹೋರಾಟದ ಬಗ್ಗೆ ತಿಳಿದ ಸರ್ಕಾರ ಅವರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ವಿಶೇಷ ಪಿಂಚಣಿಯನ್ನು ಕೂಡ ನೀಡುತ್ತಿದೆ.

ಆದಾಗ್ಯೂ ಬಿಜೆಪಿ–ಟಿಆರ್‌ಎಸ್‌ ಮುಖಂಡರು ತಮ್ಮ ರಾಜಕೀಯ ಪ್ರತಿಷ್ಠೆಗೆ ಬಡ ಕಲಾವಿದ ಮೊಗುಳಯ್ಯ ಅವರನ್ನು ಬಳಸಿಕೊಳ್ಳುತ್ತಿರುವುದು ಕಲೆಗೆ ಹಾಗೂ ಕಲಾವಿದನಿಗೆ ಮಾಡುತ್ತಿರುವ ಅಪಚಾರವೆಂದು ತೆಲಂಗಾಣದ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್