ಚೆನ್ನೈ ರಾಜಭವನದಲ್ಲಿ 5 ತಿಂಗಳಲ್ಲಿ 20 ಕೃಷ್ಣಮೃಗಗಳ ಸಾವು; ಹುಲ್ಲು ಬದಲಾವಣೆಗೆ ತಜ್ಞರ ಆಕ್ಷೇಪ

RajBhavan Black Buck
  • ಕೃಷ್ಣಮೃಗಗಳು ಹಸಿವಿನಿಂದ ಮೃತಪಟ್ಟ ಬಗ್ಗೆ ವರದಿಯಲ್ಲಿ ಮಾಹಿತಿ
  • ಸ್ಟಾರ್ ಗಾರ್ಡನ್‌ನ ಸ್ಥಳೀಯ ಹುಲ್ಲು ಬದಲಾವಣೆಗೆ ತಜ್ಞರ ಅಸಮಾಧಾನ 

ಚೆನ್ನೈ ರಾಜಭವನದಲ್ಲಿ ಕಳೆದ ಐದು ತಿಂಗಳ ಅವಧಿಯಲ್ಲಿ 20 ಕೃಷ್ಣಮೃಗಗಳು ಸಾವನ್ನಪ್ಪಿವೆ. ಬಹುತೇಕ ಹಸಿವಿನಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಐದು ತಿಂಗಳ ಹಿಂದೆ ರಾಜಭವನದಲ್ಲಿ ಸ್ಥಳೀಯ ಹುಲ್ಲಿನ ಬದಲಿಗೆ ಮೆಕ್ಸಿಕನ್ ಹುಲ್ಲು ತಳಿಯೊಂದನ್ನು ಹಾಕಲಾಗಿದೆ. ಸ್ಟಾರ್ ಗಾರ್ಡನ್‌ನಲ್ಲಿ ಎರಡು ತೆರೆದ ಹುಲ್ಲುಗಾವಲುಗಳಿದ್ದು,  ರಾಜಭವನದ ಆವರಣದಲ್ಲಿರುವ ಕೃಷ್ಣಮೃಗಗಳ ಆವಾಸ ಸ್ಥಾನಗಳ ಪೈಕಿ ಇದು ಒಂದಾಗಿದೆ. ಇದು ಮೀಸಲು ಅರಣ್ಯದ ವ್ಯಾಪ್ತಿಗೊಳಪಟ್ಟಿದೆ. 

Eedina App

ಸ್ಟಾರ್ ಗಾರ್ಡನ್ ಪ್ರದೇಶದಲ್ಲಿ ಸ್ಥಳೀಯ ಹುಲ್ಲನ್ನು ಭಾರೀ ಯಂತ್ರೋಪಕರಣಗಳೊಂದಿಗೆ ತೆರವುಗೊಳಿಸಿದ ಹಲವು ಫೋಟೋಗಳು ಮತ್ತು ವೀಡಿಯೋಗಳು ಪ್ರಚಾರ ಪಡೆದುಕೊಂಡಿದ್ದವು. ಬೇರೆ ದೇಶದ ಪ್ರಭೇದದ ಹುಲ್ಲು ಸ್ಥಳೀಯ ಕೃಷ್ಣಮೃಗಗಳು ಮತ್ತು ಮಚ್ಚೆಯುಳ್ಳ ಜಿಂಕೆಗಳಿಗೆ ರುಚಿಕರವಲ್ಲ ಮತ್ತು ಬೆಳವಣಿಗೆಗೆ ಪೂರಕವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಕೃಷ್ಣಮೃಗಗಳು, ಮಚ್ಚೆಯುಳ್ಳ ಜಿಂಕೆಗಳಿಗಿಂತ ಭಿನ್ನವಾದವು. ಇವು ಆಯ್ದ ವಿಧದ ತಾಜಾ ಹುಲ್ಲು, ಗಿಡಮೂಲಿಕೆಗಳು ಮತ್ತು ಪೊದೆಗಳನ್ನು ತಿನ್ನುತ್ತವೆ. ಸ್ಥಳೀಯ ಹುಲ್ಲಿನ ಬದಲಿಗೆ ಬೇರೆ ದೇಶದ ಪ್ರಭೇದದ ಹುಲ್ಲು ಸಹ್ಯವಲ್ಲ. ತೆರೆದ ಹುಲ್ಲುಗಾವಲಿನ ಕಳಪೆ ನಿರ್ವಹಣೆ, ಅಲಂಕಾರಿಕ ಬದಲಾವಣೆ ಕೃಷ್ಣಮೃಗಗಳ ಉಳಿವಿಗೆ ಅಪಾಯಕಾರಿ” ಎಂದು ಕೇರ್ ಅರ್ಥ್ ಟ್ರಸ್ಟಿ ಡಾ ಆರ್ ಜೆ ರಂಜಿತ್ ಡೇನಿಯಲ್ಸ್ ಹೇಳಿದ್ದಾರೆ.

AV Eye Hospital ad

“ರಾಜಭವನವು ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು, ವನ್ಯಜೀವಿ ಸಂರಕ್ಷಣೆ ಮೊದಲ ಆದ್ಯತೆಯಾಗಿರಬೇಕೆಂಬುದನ್ನು ನೆನಪಿನಲ್ಲಿಡಬೇಕು. ಹುಲ್ಲುಗಾವಲುಗಳನ್ನು ತುರ್ತಾಗಿ ಪುನರುಜ್ಜೀವನಗೊಳಿಸಬೇಕು ಮತ್ತು ವನ್ಯಜೀವಿ ನಿರ್ವಹಣೆಯ ಯೋಜನೆ ಸಿದ್ಧಪಡಿಸಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕೃಷ್ಣಮೃಗವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ- 1972ರ ಶೆಡ್ಯೂಲ್ 1ರ ಅಡಿ ಹೆಚ್ಚಿನ ರಕ್ಷಣೆ ನೀಡುವ ಪಟ್ಟಿಗೆ ಸೇರಿಸಲಾಗಿದೆ. ಇತ್ತೀಚಿನ ಜನಗಣತಿಯ ಪ್ರಕಾರ, ಗಿಂಡಿ ರಾಷ್ಟ್ರೀಯ ಉದ್ಯಾನವನ (ಜಿಎನ್‌ಪಿ) ಮತ್ತು ರಾಜಭವನ ಅರಣ್ಯ ವಲಯದಲ್ಲಿ ಕೇವಲ 77 ಕೃಷ್ಣಮೃಗಗಳು ಮಾತ್ರ ಉಳಿದಿವೆ.

2017- 2020ರ ನಡುವೆ ರಾಜಭವನದಲ್ಲಿ ಕೇವಲ 10 ಕೃಷ್ಣ ಮೃಗಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ಅಂಕಿ- ಅಂಶ ತಿಳಿಸಿದೆ. ಆದರೆ ಕಳೆದ ಐದು ತಿಂಗಳ ಅವಧಿಯಲ್ಲಿ 20 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.

RajBhavan Black Buck

ಸ್ಟಾರ್ ಗಾರ್ಡನ್ ಮತ್ತು ಪೋಲೋ ಮೈದಾನದಲ್ಲಿ ಯಾವ ಹುಲ್ಲು ಬೆಳೆಸಲಾಗಿದೆ. ಮತ್ತು ಕಳೆದ ಐದು ವರ್ಷಗಳ ಅವಧಿಯಲ್ಲಾದ ಬದಲಾವಣೆಗಳ ಕುರಿತಾದ ಆರ್‌ಟಿಐ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ, ಫೆಬ್ರವರಿ 15, 2022 ರಂದು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ ಎಸ್ ವೆಂಕಟೇಶ್ವರನ್ ಅವರು ಉತ್ತರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನು ಓದಿದ್ದೀರಾ?: ‘ಎಲ್ಗಾರ್ ಪರಿಷತ್’ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಮೂರ್ತಿ ಸಾಧನಾ ಜಾಧವ್

“ಕಚೇರಿ ದಾಖಲೆಗಳಿಂದ ಮಾಹಿತಿ ಲಭ್ಯವಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ ಸಾವನ್ನಪ್ಪಿದ 20 ಕೃಷ್ಣಮೃಗಗಳ ಪೈಕಿ ಡಿಸೆಂಬರ್‌ನಲ್ಲಿ ತಾಯಿಯಿಂದ ದೂರವಾದ ಮೂರು ಜಿಂಕೆಗಳಿವೆ. ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದರಾದರೂ ಅವು ಸಾವಿಗೀಡಾಗಿವೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. 
"ಮರಿಗಳು ತುಂಬಾ ಕ್ಷೀಣವಾಗಿದ್ದವು ಮತ್ತು ಮರಣೋತ್ತರ ಪರೀಕ್ಷೆಯ ವರದಿ ಅವುಗಳ ಹೊಟ್ಟೆಯಲ್ಲಿ ಏನೂ ಇಲ್ಲ ಎಂದು ತೋರಿಸಿದೆ" ಎಂದು ಮೂಲವೊಂದು ಹೇಳಿದೆ.

30 ಎಕರೆಯ ಪೋಲೋ ಮೈದಾನ ದಟ್ಟ  ಮತ್ತು ಎತ್ತರದ ಸಸ್ಯ ವರ್ಗಗಳಿಂದ ಆವೃತ್ತವಾಗಿದ್ದು, ಇದು  ಕೃಷ್ಣಮೃಗಗಳ ಆವಾಸಸ್ಥಾನ.  ದಪ್ಪ ಮತ್ತು ಎತ್ತರದ ಸಸ್ಯವರ್ಗದ ಬೆಳವಣಿಗೆಯಿಂದಾಗಿ ಕೃಷ್ಣಮೃಗಗಳಿಗೆ ವಾಸ ಯೋಗ್ಯವಾಗಿದೆ ಎಂದು ತಮ್ಮ ಸುಪರ್ದಿಯಲ್ಲಿರುವ  ರಾಜಭವನ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಥನೆ ನೀಡುತ್ತಾರೆ. 

ಭದ್ರತೆ ಕಾರಣಗಳಿಗಾಗಿ 2016ರಿಂದ ಪೋಲೋ ಮೈದಾನ ನಿರ್ವಹಣೆಗೆ ಅರಣ್ಯ ಇಲಾಖೆಗೆ ಅವಕಾಶವಿಲ್ಲ. ಈ ಹಿಂದೆ ರಾಜಭವನ ಪೋಲೋ ಮೈದಾನದ ಬಳಿ ಹೆಲಿಪ್ಯಾಡ್ ನಿರ್ಮಿಸಲು ಉದ್ದೇಶಿಸಿತ್ತು. ಆದರೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪ್ರಸ್ತಾವನೆ ಕೈಬಿಡಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app